ADVERTISEMENT

ಬಾಲಿವುಡ್ ಫೆಸ್ಟಿವಲ್‌ನಲ್ಲಿ ಸೋನು ಸೂದ್‌ಗೆ ‘ಹ್ಯುಮ್ಯಾನಿಟೇರಿಯನ್‌ 2020’ ಗೌರವ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 7:32 IST
Last Updated 30 ಡಿಸೆಂಬರ್ 2020, 7:32 IST
ಸೋನು ಸೂದ್‌
ಸೋನು ಸೂದ್‌   

ಕೊರೊನಾ ಸಮಯದಲ್ಲಿ ಇದ್ದಕ್ಕಿದ್ದಂತೆ ಲಾಕ್‌ಡೌನ್‌ ವಿಧಿಸಿದಾಗ ಉದ್ಯೋಗ, ಕೂಲಿ, ಓದು ಹೀಗೆ ಹಲವು ಕಾರಣಗಳಿಂದ ತಮ್ಮ ಹುಟ್ಟೂರಿನಿಂದ ದೂರ ಉಳಿದಿದ್ದ ಜನರಿಗೆ ಊರಿಗೆ ಹೋಗುವುದು ಕಷ್ಟಸಾಧ್ಯವಾಗಿತ್ತು. ಅಂತಹ ಸಮಯದಲ್ಲಿ ಅಂತಹವರ ಪಾಲಿಗೆ ನಿಜವಾದ ಹೀರೊನಂತೆ ಮುಂದೆ ಬಂದವರು ನಟ ಸೋನು ಸೂದ್‌. ಆರ್ಥಿಕವಾಗಿ ಹಿಂದುಳಿದವರಿಗೆ ಸುರಕ್ಷಿತವಾಗಿ ಊರುಗಳಿಗೆ ಮರಳಲು ಬಸ್ಸು, ವಿಮಾನದ ವ್ಯವಸ್ಥೆ ಮಾಡಿದ್ದರು ಸೋನು. ತಮ್ಮ ಸ್ವಂತ ಖರ್ಚಿನಲ್ಲಿ ವಾಹನ ವ್ಯವಸ್ಥೆ ಮಾಡಿದ್ದಲ್ಲದೇ ಆರ್ಥಿಕ ಸಹಾಯವನ್ನೂ ಮಾಡಿದ್ದರು.

ಸೋನು ಅವರ ಈ ಕಾರ್ಯಕ್ಕೆ ದೇಶವೇ ತಲೆದೂಗಿತ್ತು. ರಾಜಕಾರಣಿಗಳು, ಸಿನಿಮಾರಂಗದವರು ಸೇರಿದಂತೆ ಪ್ರಧಾನಿ ಮೋದಿ ಕೂಡ ಸೋನು ಮಾಡಿದ ಕೆಲಸಕ್ಕೆ ಶ್ಲಾಘನೆ ಮಾಡಿದ್ದರು.

ಈಗ ನಾರ್ವೆಯಲ್ಲಿ ನಡೆಯಲಿರುವ ಪ್ರತಿಷ್ಠಿತ ಸ್ಕ್ಯಾಂಡೀವಿಯನ್‌ ಬಾಲಿವುಡ್ ಫೆಸ್ಟಿವಲ್‌ನಲ್ಲಿ ನಿಜಜೀವನದ ಈ ಹೀರೊಗೆ ‘ಹ್ಯುಮ್ಯಾನಿಟೇರಿಯನ್‌ 2020’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು ವರ್ಚುವಲ್ ಆಗಿ ನಡೆಯಲಿದೆ.

ADVERTISEMENT

ಈ ಹಿಂದೆ 47ವರ್ಷದ ಈ ನಟ 2020ರ ಏಷ್ಯಿಯನ್ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದರು. ಪ್ರಪಂಚದಾದ್ಯಂತದ ವಲಸಿಗರು ಮತ್ತು ವಿದ್ಯಾರ್ಥಿಗಳಿಗೆ ಮಾಡಿದ ನಿಸ್ವಾರ್ಥ ಸಹಾಯಕ್ಕಾಗಿ ಅವರಿಗೆ ಪ್ರತಿಷ್ಠಿತ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯೆಯ ಪ್ರಶಸ್ತಿಯನ್ನೂ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.