
ವಾರದ ಹಿಂದೆ (ಜುಲೈ 21) ನಟ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್‌ನ ಮೇಕಿಂಗ್ ವಿಡಿಯೊ ಬಿಡುಗಡೆಯಾದಾಗ, ಎಷ್ಟು ಅದ್ಧೂರಿಯಾಗಿದೆ ಈ ಸಿನಿಮಾ ಎಂಬ ಉದ್ಗಾರ ಎಲ್ಲರಿಂದಲೂ ಬಂದಿತ್ತು. ಅದಕ್ಕಿಂತ ಒಂದು ವಾರದ ಹಿಂದೆ (ಜುಲೈ 15) ‘ಸು ಫ್ರಮ್ ಸೋ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿತ್ತು. ಆದರೆ ಇದರ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯೇ ಇರಲಿಲ್ಲ. ಆದರೆ ಇಂದು ಈ ಸಿನಿಮಾದ ಟಿಕೆಟ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣ ವಾಗಿದೆ! ಹೆಚ್ಚಿನ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಕಳೆದ ನಾಲ್ಕು ದಿನಗಳಿಂದ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಹಲವೆಡೆ ಬೆಳಗ್ಗೆ 8 ರಿಂದಲೇ ಶೋಗಳು ಆರಂಭವಾಗುತ್ತಿವೆ.
ಕನ್ನಡ ಸಿನಿಮಾಗಳಿಗೆ, ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ ಎನ್ನುವ ಮಾತಿನಿಂದ ‘ಸು ಫ್ರಂ ಸೋ’ಗೆ ಟಿಕೆಟ್ ಸಿಗುತ್ತಿಲ್ಲ ಎನ್ನುವಲ್ಲಿಯವರೆಗೆ ಬದಲಾವಣೆ ಬಂದಿದೆ. ಜನರು ಬಜೆಟ್, ಮೇಕಿಂಗ್, ಸ್ಟಾರ್ ಸಿನಿಮಾ, ಪ್ರಚಾರ, ಯಾವ ಪ್ರದೇಶದವರು ಮಾಡಿದ ಸಿನಿಮಾ ಎನ್ನುವುದನ್ನು ಪಕ್ಕಕ್ಕಿಟ್ಟು ಕಥೆ, ಮನರಂಜನೆಗೆ ಆದ್ಯತೆ ನೀಡುತ್ತಾರೆ ಎನ್ನುವುದನ್ನು ‘ಸು ಫ್ರಂ ಸೋ’ ಸಾಬೀತುಪಡಿಸಿದೆ. ಹಿಂದಿಯ ‘ಸೈಯಾರಾ’, ಹಾಲಿವುಡ್‌ನ ‘ಎಫ್1’ ಹಾಗೂ ತೆಲುಗಿನ ‘ಹರಿ ಹರ ವೀರಮಲ್ಲು’ ನಡುವೆ ‘ಸು ಫ್ರಂ ಸೋ’ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿದೆ.
ಜೆ.ಪಿ.ತೂಮಿನಾಡು ನಿರ್ದೇಶನದ, ಶಶಿಧರ್ ಶೆಟ್ಟಿ ಬರೋಡ, ರವಿ ರೈ ಕಳಸ, ರಾಜ್ ಬಿ.ಶೆಟ್ಟಿ ನಿರ್ಮಿಸಿರುವ ಈ ಸಿನಿಮಾ ಸದ್ದಿಲ್ಲದೆ ಮೊದಲ ಹೆಜ್ಜೆ ಇಟ್ಟಿತ್ತು. ಸಿನಿಮಾದ ಪೂರ್ಣ ಕೆಲಸ ಮುಗಿದ ಬಳಿಕ ಕಳೆದ ಜೂನ್ 21ರಂದು ಮೊದಲ ಪೋಸ್ಟರ್ ರಿಲೀಸ್ ಮಾಡಿತ್ತು ಚಿತ್ರತಂಡ. ಗಿಬ್ಲಿ ಶೈಲಿಯಲ್ಲಿದ್ದ ಭಿನ್ನವಾದ ಪೋಸ್ಟರ್‌ನಲ್ಲಿ ಚಿತ್ರದ ಶೀರ್ಷಿಕೆಯಿತ್ತು. ‘ಸು ಫ್ರಮ್ ಸೋ’; ಇದೇನಪ್ಪ ಎಂದು ಕೆಲವರು ಆಗಲೇ ತಲೆ ಕೆಡಿಸಿಕೊಂಡಿದ್ದರು. ಚಿತ್ರದ ಶೀರ್ಷಿಕೆಯ ಪೂರ್ಣ ಅರ್ಥವನ್ನು ಅದರಲ್ಲಿ ಅಡಗಿಸಿತ್ತು ತಂಡ. ಒಂದು ಶವದ ಸುತ್ತ ನಡೆಯುವ ಕಥೆ, ಆ ಶವ ಯಾರದ್ದು ಹಾಗೂ ಎಲ್ಲಿಯದ್ದು ಎನ್ನುವುದನ್ನು ‘ಕುಂಕುಮ’ ಹಾಗೂ ‘ಲೊಕೇಷನ್’ ಚಿಹ್ನೆ ಬಳಸಿ ವಿವರಿಸ ಲಾಗಿತ್ತು. ಬಳಿಕ ‘ಡಾಂಕ್ಸ್ ಆ್ಯಂಥಮ್’ ಹಾಡು ಬಿಡುಗಡೆ ಮಾಡಿತ್ತು ತಂಡ. ಅದಕ್ಕೆ ರೀಲ್ಸ್ ಮಾಡಿದವರ ವಿಡಿಯೊಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಂಡ ಹಾಕಿಕೊಂಡಿತ್ತು. ಜುಲೈ 15ಕ್ಕೆ ಚಿತ್ರದ ಟ್ರೇಲರ್ ರಿಲೀಸ್ ಆಯಿತು. ಅದರಲ್ಲಿ ‘ಸು ಫ್ರಮ್ ಸೋ’ ಅಂದರೆ ‘ಸುಲೋಚನಾ ಫ್ರಮ್ ಸೋಮೇಶ್ವರ’ ಎಂದು ತಿಳಿಸಲಾಗಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರತಂಡ ಎರಡು ಪತ್ರಿಕಾ ಪ್ರಕಟಣೆ ಕೊಟ್ಟಿತ್ತು, ಒಂದು ಸುದ್ದಿಗೋಷ್ಠಿ ಮಾಡಿತ್ತು!
38 ಪೇಯ್ಡ್ ಪ್ರೀಮಿಯರ್!
ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರೇ ಬರುತ್ತಿಲ್ಲ ಎನ್ನುವು ದನ್ನು ಪರೀಕ್ಷಿಸಲು ಚಿತ್ರತಂಡ ಮುಂದಾಗಿತ್ತು. ಸೆಲೆಬ್ರಿಟಿ ಶೋಗಳು, ವಿಡಿಯೊ ಸಂದರ್ಶನಗಳಲ್ಲಿ ಜನರಿಗೆ ನಂಬಿಕೆ ಹೋಗಿದೆ ಎನ್ನುವುದನ್ನು ಅರಿತಿದ್ದೇವೆ ಎಂದಿದ್ದ ಚಿತ್ರತಂಡ ಪ್ರಚಾರಕ್ಕೆ ಯೋಜನೆ ಯೊಂದನ್ನು ರೂಪಿಸಿತ್ತು. ಜುಲೈ 25ರಂದು ರಾಜ್ಯದಾದ್ಯಂತ ಸಿನಿಮಾ ಬಿಡುಗಡೆಗೂ ಮುನ್ನ, ಜುಲೈ 21ರಂದು ತಂಡವು ಮಂಗಳೂರಿನಲ್ಲಿ ಮೊದಲ ಪೇಯ್ಡ್ ಪ್ರೀಮಿಯರ್ (ಟಿಕೆಟ್ ಸಹಿತ) ಏರ್ಪಡಿಸಿತ್ತು. ಜುಲೈ 22ರಂದು ಶಿವಮೊಗ್ಗದಲ್ಲಿ, ಜುಲೈ 23ರಂದು ಮೈಸೂರಿನಲ್ಲಿ ಹಾಗೂ ಜುಲೈ 24ರಂದು ಬೆಂಗಳೂರಿನಲ್ಲಿ ಒಂದೊಂದು ಪ್ರೀಮಿಯರ್ ಏರ್ಪಡಿಸಲು ಯೋಜನೆ ಹಾಕಿಕೊಂಡಿದ್ದ ತಂಡಕ್ಕೆ ಹೊಸ ಸಮಸ್ಯೆ ಶುರುವಾಗಿತ್ತು. ಪ್ರೀಮಿಯರ್‌ಗಳು ಭರ್ತಿಯಾಗಿ ಹೆಚ್ಚಿನ ಪ್ರೀಮಿಯರ್‌ಗಳಿಗೆ ಬೇಡಿಕೆ ಬಂದಿತ್ತು. ಹೀಗೆ ಜುಲೈ 25ಕ್ಕೂ ಮುನ್ನವೇ ಮೈಸೂರು, ಉಡುಪಿ, ಬೆಂಗಳೂರು, ಮಣಿಪಾಲ್, ಸುರತ್ಕಲ್, ಕುಂದಾಪುರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮುಂತಾದ ಕಡೆ ಒಟ್ಟು 38 ಹೌಸ್‌ಫುಲ್ ಪೇಯ್ಡ್ ಪ್ರೀಮಿಯರ್ ಶೋಗಳು ನಡೆದವು. ಸೆಲೆಬ್ರಿಟಿ ಶೋಗಳನ್ನು ನಡೆಸದೆ ಜನರನ್ನೇ ಸೆಲೆಬ್ರಿಟಿಗಳನ್ನಾಗಿ ಮಾಡಿದ ತಂಡ, ಅವರ ಮಾತುಗಳಿಗೆ ವೇದಿಕೆ ಕಲ್ಪಿಸಿತು. ಎಲ್ಲಾ ಮಾದರಿಯ ಸೆಲೆಬ್ರಿಟಿ ಗಳನ್ನು, ರೀಲ್ಸ್–ಮೀಮ್ಸ್ ಮಾಡುವವರನ್ನು ದೂರವೇ ಇಟ್ಟಿತು. ಸಿನಿಮಾದೊಳಗಿನ ಕಥೆ, ನಟನೆ, ಮನರಂಜನೆ ಗಟ್ಟಿಯಾಗಿದ್ದ ಕಾರಣ ಜನರನ್ನೇ ತಂಡ ನಂಬಿತ್ತು.
ಕೆ.ಜಿ.ಎಫ್. ಸಿನಿಮಾ ಸರಣಿ ಬಳಿಕ ಸಿನಿಮಾ ಅದ್ಧೂರಿಯಾಗಿದ್ದರಷ್ಟೇ ಜನ ಚಿತ್ರಮಂದಿರಗಳಿಗೆ ಬರುತ್ತಾರೆ ಎನ್ನುವ ಮಾತೂ ಹುಟ್ಟಿಕೊಂಡಿತ್ತು. ಬಳಿಕ ಈ ಅದ್ಧೂರಿತನಕ್ಕೇ ಜೋತುಬಿದ್ದ ಹಲವು ಚಿತ್ರತಂಡಗಳು ಗಟ್ಟಿಯಾದ ಕಥೆ ಮಾಡಿ ಕೊಳ್ಳದೆ ಎಡವಿರುವ ಉದಾಹರಣೆಗಳು ನಮ್ಮಲ್ಲಿವೆ. ಈ ನಡುವೆ ಹೆಚ್ಚಿನ ಸೆಟ್ ಬಳಸದೆ, ಮನರಂಜನೆಗೇ ಹೆಚ್ಚಿನ ಒತ್ತು ಕೊಟ್ಟು ಸುಮಾರು ₹5 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ‘ಸು ಫ್ರಮ್ ಸೋ’ ಹೊಸ ಇತಿಹಾಸ ಸೃಷ್ಟಿಸಿದೆ.
ಸಿನಿಮಾ ಪ್ರಚಾರವಾಗಬೇಕು
ಸಿನಿಮಾದಲ್ಲಿ ರಾಜ್ ಬಿ.ಶೆಟ್ಟಿ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನುವುದನ್ನು ಚಿತ್ರತಂಡ ಜನರಿಂದ ಗುಟ್ಟಾಗಿ ಇಟ್ಟಿತ್ತು. ‘ನಾನು ಯಾರನ್ನೂ ತಲೆಯಲ್ಲಿಟ್ಟುಕೊಂಡು ಪಾತ್ರಗಳನ್ನು ಬರೆದಿರಲಿಲ್ಲ. ಪಾತ್ರಗಳಿಗೆ ಕಲಾವಿದರ ಆಯ್ಕೆ ನಂತರ ನಡೆಯಿತು. ರಾಜ್ ಬಿ.ಶೆಟ್ಟಿ ಬಂದರು ಎಂದು ಹೆಚ್ಚುವರಿ ದೃಶ್ಯ ಸೇರಿಸಿಲ್ಲ. ರಾಜ್ ಅವರನ್ನು ಒಂದು ಹಾಸ್ಯ ಪಾತ್ರದಲ್ಲಿ ಪ್ರೇಕ್ಷಕರು ನೋಡದೆ ಬಹಳ ವರ್ಷವಾಯಿತು. ಅವರ ಕಾಮಿಡಿ ಸೆನ್ಸ್ ಬಹಳ ಚೆನ್ನಾಗಿದೆ. ಜೊತೆಗೆ ಹೊಸಬರ ತಂಡದೊಟ್ಟಿಗೆ ರಾಜ್ ಅವರು ಇದ್ದರೆ ಅವರಿಗಿರುವ ಅಭಿಮಾನಿಗಳನ್ನೂ ಸೆಳೆಯಬಹುದು ಎನ್ನುವುದಿತ್ತು. ರಾಜ್ ಅವರನ್ನು ಕಾಮಿಡಿ ಪಾತ್ರಗಳಲ್ಲೇ ನೋಡಲಿಚ್ಛಿಸುವ ಒಂದಿಷ್ಟು ಜನರಿದ್ದಾರೆ. ಈ ಸಿನಿಮಾದಲ್ಲಿ ಅವಕಾಶವಿದ್ದ ಕಾರಣ ಅವರೂ ಒಪ್ಪಿಕೊಂಡರು. ಈ ಸಿನಿಮಾದಲ್ಲಿ ಅವರಿದ್ದಾರೆ, ಇವರಿದ್ದಾರೆ ಎನ್ನುವುದು ಹೆಚ್ಚಿನ ಪ್ರಚಾರವಾಗದೆ ಇಡೀ ಸಿನಿಮಾವೇ ಪ್ರಚಾರವಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ರಾಜ್ ಇದ್ದಾಗ ಜನರಿಗೆ ನಿರೀಕ್ಷೆ ಬೇರೆ ಇರುತ್ತದೆ. ಹೀಗಾಗಿ ಅವರ ಪಾತ್ರವನ್ನು ಬಿಟ್ಟು ಕೊಟ್ಟಿಲ್ಲ’ ಎನ್ನುತ್ತಾರೆ ನಿರ್ದೇಶಕ ಜೆ.ಪಿ. ತೂಮಿನಾಡು.
‘ಜನರಿಂದಲೇ ಪ್ರಚಾರ ಆಗಬೇಕು’
‘ಸುಮಾರು ಒಂದು ತಿಂಗಳ ಹಿಂದೆ ಈ ಸಿನಿಮಾ ಘೋಷಣೆ ಮಾಡಿದಾಗ ನನಗೆ ಯಾವ ನಿರೀಕ್ಷೆಯೂ ಇರಲಿಲ್ಲ. ಇದು ನನ್ನ ನಿರ್ದೇಶನದ ಚೊಚ್ಚಲ ಸಿನಿಮಾ. ಲೈಟರ್ ಬುದ್ಧ ಫಿಲ್ಮ್ಸ್‌ನಡಿ ಈ ಹಿಂದೆ ಸಿನಿಮಾ ಸಿದ್ಧಗೊಂಡ ಬಳಿಕವೇ ಅದರ ಬಗ್ಗೆ ಮಾತನಾಡಿದ್ದೆವು. ಈ ಸಿನಿಮಾಗೂ ಹಾಗೇ ಮಾಡಿದ್ದೆವು. ಒಂದು ಸಿನಿಮಾಗೆ ಪ್ರಚಾರ ಬೇಕೇ ಬೇಕು. ಆದರೆ ಅದು ಜನರಿಂದಲೇ ಆಗಬೇಕು. ಒಮ್ಮೆ ಜನರಿಗೆ ಇಷ್ಟವಾದರೆ ಸಿನಿಮಾ ತನ್ನಿಂದ ತಾನೇ ಸಾಗುತ್ತದೆ. ಸಾಮಾಜಿಕ ಮಾಧ್ಯಮಗಳು ಇಲ್ಲದ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಆಗ ಸೆಲೆಬ್ರಿಟಿ ಶೋ ಎನ್ನುವುದೇ ಇರಲಿಲ್ಲ. ನಾವು ಸಣ್ಣವರಿದ್ದಾಗ ಸಿನಿಮಾ ನೋಡಿ ಬಂದವರು ಸಿನಿಮಾ ಹೇಗಿದೆ ಎನ್ನುವುದನ್ನು ಹೇಳುತ್ತಿದ್ದರು. ಆವಾಗ ಆ ಸಿನಿಮಾ ನೋಡಬೇಕು ಎಂದು ಅನಿಸುತ್ತಿತ್ತು. ಜನರು ಇಷ್ಟಪಟ್ಟ ನಂತರ ಅವರೇ ಮಾಡುವ ಪ್ರಚಾರದ ಪರಿಣಾಮ ದೊಡ್ಡದಾಗಿರುತ್ತದೆ’ ಎನ್ನುತ್ತಾರೆ ನಿರ್ದೇಶಕ ಜೆ.ಪಿ. ತೂಮಿನಾಡು.
‘ಇತರೆ ಚಿತ್ರತಂಡಗಳು ನಮ್ಮ ಈ ಮಾದರಿ ಅನುಸರಿಸಿದರೆ ಜನರು ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮ ನಿರೀಕ್ಷೆಗೂ ಮೀರಿ ಇದು ಜನರನ್ನು ಸೆಳೆದಿದೆ. ಜನರಿಗೆ ಸಿನಿಮಾ ಇಷ್ಟವಾದರಷ್ಟೇ ಹೀಗಾಗಲು ಸಾಧ್ಯ. ಇಲ್ಲವಾದಲ್ಲಿ ಮೂರ್ನಾಲ್ಕು ಪ್ರೀಮಿಯರ್‌ಗಳಲ್ಲೇ ಸಿನಿಮಾ ಮುಗಿಯುತ್ತಿತ್ತು. ರಿಲೀಸ್ ಕೂಡಾ ಕಷ್ಟವಾಗುತ್ತಿತ್ತು. ಅವರ ಸಿನಿಮಾವನ್ನು ಹೇಗೆ ಪ್ರಚಾರ ಮಾಡಬೇಕು ಎನ್ನುವುದನ್ನು ಅವರೇ ಯೋಚಿಸಬೇಕು’ ಎಂದರು ಜೆ.ಪಿ.ತೂಮಿನಾಡು.
ಬೆಳಗ್ಗೆ 6–7 ಗಂಟೆಗೆ ಸಿನಿಮಾ ಶೋಗಳನ್ನು ಕೇವಲ ಸ್ಟಾರ್‌ಗಳ ಸಿನಿಮಾಗಳಿಗೆ ನೋಡಿದ್ದೆ. ಆದರೆ ಹೊಸಬರ ಸಿನಿಮಾದ ಬೆಳಗಿನ ಜಾವದ ಶೋಗಳೂ ಹೌಸ್‌ಫುಲ್ ಆಗಿದ್ದವು ಎನ್ನುವುದೇ ಖುಷಿ. ಜನರಿಂದ ಇದು ಸಾಧ್ಯವಾಗಿದೆ. ಬೇಡಿಕೆಗೆ ತಕ್ಕಂತೆ ಶೋಗಳನ್ನು ಹೇಗೆ ಹೆಚ್ಚಿಸಬೇಕು ಎನ್ನುವುದು ಗೊತ್ತಾಗುತ್ತಿಲ್ಲ.– ರಾಜ್ ಬಿ.ಶೆಟ್ಟಿ, ನಟ
ಈ ಚಿತ್ರವು ನನ್ನನ್ನು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ದಿನಗಳಿಗೆ ಕರೆದುಕೊಂಡು ಹೋಯಿತು. ಆ ಚಿತ್ರದಲ್ಲಿ ನಟಿಸಿದ್ದ ಅನೇಕ ಕಲಾವಿದರು ‘ಸು ಫ್ರಮ್ ಸೋ’ದಲ್ಲಿಯೂ ಇರುವುದು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತು.– ರಿಷಬ್ ಶೆಟ್ಟಿ, ನಟ
ಒಬ್ಬರ ಮೇಲೆ ನಿರೀಕ್ಷೆ ಹೆಚ್ಚಾಗಬಾರದು!
ಸಿನಿಮಾದೊಳಗೆ ರಾಜ್ ಬಿ.ಶೆಟ್ಟಿ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನುವುದನ್ನು ಚಿತ್ರತಂಡ ಜನರಿಂದ ಗುಟ್ಟಾಗಿ ಇಟ್ಟಿತ್ತು.
‘ನಾನು ಯಾರನ್ನೂ ತಲೆಯಲ್ಲಿಟ್ಟುಕೊಂಡು ಪಾತ್ರಗಳನ್ನು ಬರೆದಿಲ್ಲ. ಪಾತ್ರಗಳಿಗೆ ಕಲಾವಿದರ ಆಯ್ಕೆ ನಂತರ ನಡೆಯಿತು. ರಾಜ್ ಬಿ.ಶೆಟ್ಟಿ ಬಂದರು ಎಂದು ಹೆಚ್ಚುವರಿ ದೃಶ್ಯ ಸೇರಿಸಿಲ್ಲ. ರಾಜ್ ಅವರನ್ನು ಒಂದು ಹಾಸ್ಯ ಪಾತ್ರದಲ್ಲಿ ಪ್ರೇಕ್ಷಕರು ನೋಡದೆ ಬಹಳ ವರ್ಷವಾಯಿತು. ಅವರ ಕಾಮಿಡಿ ಸೆನ್ಸ್ ಬಹಳ ಚೆನ್ನಾಗಿದೆ. ಜೊತೆಗೆ ಹೊಸಬರ ತಂಡದೊಟ್ಟಿಗೆ ರಾಜ್ ಅವರು ಇದ್ದರೆ ಅವರಿಗಿರುವ ಅಭಿಮಾನಿಗಳನ್ನೂ ಸೆಳೆಯಬಹುದು ಎನ್ನುವುದಿತ್ತು. ರಾಜ್ ಅವರನ್ನು ಕಾಮಿಡಿ ಪಾತ್ರಗಳಲ್ಲೇ ನೋಡಲಿಚ್ಛಿಸುವ ಒಂದಿಷ್ಟು ಜನರಿದ್ದಾರೆ. ಈ ಸಿನಿಮಾದಲ್ಲಿ ಅವಕಾಶವಿದ್ದ ಕಾರಣ ಅವರೂ ಒಪ್ಪಿಕೊಂಡರು. ಈ ಸಿನಿಮಾದಲ್ಲಿ ಅವರಿದ್ದಾರೆ, ಇವರಿದ್ದಾರೆ ಎನ್ನುವುದು ಹೆಚ್ಚಿನ ಪ್ರಚಾರವಾಗದೆ ಇಡೀ ಸಿನಿಮಾವೇ ಪ್ರಚಾರವಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಅವರು ಇದ್ದಾಗ ಜನರಿಗೆ ನಿರೀಕ್ಷೆ ಬೇರೆ ಇರುತ್ತದೆ. ಹೀಗಾಗಿ ಅವರ ಪಾತ್ರವನ್ನು ಬಿಟ್ಟುಕೊಟ್ಟಿಲ್ಲ’ ಎನ್ನುತ್ತಾರೆ ನಿರ್ದೇಶಕ ಜೆ.ಪಿ.ತೂಮಿನಾಡು.
74+ ಸಾವಿರ: ಮೊದಲ ದಿನ ಬುಕ್‌ಮೈಶೋನಲ್ಲಿ ಮಾರಾಟವಾದ ಟಿಕೆಟ್‌ಗಳು
1.27+ ಲಕ್ಷ: ಎರಡನೇ ದಿನ ಬುಕ್‌ಮೈಶೋನಲ್ಲಿ ಮಾರಾಟವಾದ ಟಿಕೆಟ್‌ಗಳು
550+: ಭಾನುವಾರ ಭಾರತದಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಂಡ ಶೋಗಳು
4+ ಲಕ್ಷ: ಒಟ್ಟು ಮಾರಾಟವಾದ ಟಿಕೆಟ್‌ಗಳು
₹6–₹7 ಕೋಟಿ: ಮೊದಲ ಮೂರು ದಿನಗಳ ಕಲೆಕ್ಷನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.