ADVERTISEMENT

Interview| ಫ್ಯಾಂಟಮ್‌ ಪ್ರಪಂಚ ಬಿಚ್ಚಿಟ್ಟ ಕಿಚ್ಚ ಸುದೀಪ್‌

ಕೆ.ಎಂ.ಸಂತೋಷಕುಮಾರ್
Published 3 ಜನವರಿ 2021, 19:30 IST
Last Updated 3 ಜನವರಿ 2021, 19:30 IST
ಸುದೀಪ್‌
ಸುದೀಪ್‌   

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ, ಸಿನಿಪ್ರಿಯರ ಪಾಲಿನ ಪ್ರೀತಿಯ ಕಿಚ್ಚ ಸುದೀಪ್‌ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ‘ಫ್ಯಾಂಟಮ್’ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಶೂಟಿಂಗ್‌ ಸದ್ಯ ಕೇರಳದಲ್ಲಿ ನಡೆಯುತ್ತಿದ್ದು, ಚಿತ್ರೀಕರಣದ ಬಿಡುವಿನ ವೇಳೆ ಚಿತ್ರದ ಕುರಿತು ಹಲವು ಮಾಹಿತಿಗಳನ್ನು ಅವರು ‘ಪ್ರಜಾಪ್ಲಸ್‌’ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

* 2020ರಲ್ಲಿ ಬಂದೆರಗಿದ ಕೋವಿಡ್‌ 19 ಚಿತ್ರೋದ್ಯಮದಲ್ಲೂ ಕೊರೊನಾ ಹಲವು ಬಗೆಯ ಬಿಕ್ಕಟ್ಟು, ತಲ್ಲಣ ಸೃಷ್ಟಿಸಿದೆ. ಈ ಸವಾಲುಗಳನ್ನು ಚಿತ್ರರಂಗಮೆಟ್ಟಿ ಎದ್ದುನಿಲ್ಲಲು ಇರುವ ದಾರಿ ಯಾವುದು?

ನಿಜ ಹೇಳಬೇಕೆಂದರೆ, ಇದರಲ್ಲಿ ಯಾರಿಗೂ ಸ್ಪಷ್ಟತೆ ಇಲ್ಲ. ಇದು ನ್ಯೂ ನಾರ್ಮಲ್‌. ಏನೂ ಮಾಡಲು ಆಗದು, ನಾವು ಹೋರಾಟ ನಡೆಸುವುದು ಯಾವಾಗ ಎಂದರೆ, ಎದುರಾಳಿಯ ಶಕ್ತಿ ಮತ್ತು ದೌರ್ಬಲ್ಯ ಹಾಗೂ ಅದರ ಜತೆಗೆ ಹೋರಾಡಲು ನಮ್ಮ ಬಳಿ ಅಸ್ತ್ರವಿದೆಯೇ ಎನ್ನುವುದು ಗೊತ್ತಾದಾಗ. ಇವತ್ತಿನವರೆಗೂ ಇದನ್ನು ಹೇಗೆ ನಿಭಾಯಿಸಬೇಕೆನ್ನುವುದರ ಬಗ್ಗೆ ಖಡಾಖಂಡಿತವಾದ ದಾರಿ ಗೊತ್ತಾಗಿಲ್ಲ ಯಾರಿಗೂ, ಅಂತೆಕಂತೆಗಳನ್ನೇ ಕೇಳುತ್ತಿದ್ದೇವೆ. ಖಚಿತವಾಗಿ ಎಲ್ಲರಿಗೂ ಏಟು ಬಿದ್ದಿದೆ, ಪ್ರಪಂಚದ‌ಲ್ಲಿ ಇಂತಹ ವರ್ಗ, ಇಂತಹ ವ್ಯಕ್ತಿಗೆ ಏಟು ಬಿದ್ದಿಲ್ಲ ಎನ್ನುವಂತಿಲ್ಲ. ಅಂದರೆ, ಬಿದ್ದಿರುವ ಏಟುಗಳಲ್ಲಿ ವ್ಯತ್ಯಾಸಗಳಿರಬಹುದು ಅಷ್ಟೇ. ಮತ್ತೆ ಇದರಿಂದ ಯಾರೂ ತಪ್ಪಿಸಿಕೊಂಡಿಲ್ಲ. ಹೋರಾಟ ಮಾಡುವುದು ಎನ್ನುವುದಕ್ಕಿಂತ ಹೆಚ್ಚಾಗಿ ಈ ಹಂತದಲ್ಲಿ ಬದುಕುಳಿಯಬೇಕು ಅಷ್ಟೇ. ಖಂಡಿತವಾಗಿಯೂ ಮುಂದೊಂದು ದಿನ ಇದಕ್ಕೆ ಒಂದು ಮಾರ್ಗ ಸಿಕ್ಕೇ ಸಿಗುತ್ತದೆ.

ADVERTISEMENT

* ಚಿತ್ರಮಂದಿರಗಳ ಬಾಗಿಲು ತೆರೆದರೂ ದೊಡ್ಡ ಸ್ಟಾರ್‌ಗಳ ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಇನ್ನೂ ಅಂಜುತ್ತಿರುವುದೇಕೆ?

ಎಲ್ಲ ಸ್ಟಾರ್ ನಟರ ಚಿತ್ರಗಳು ಪೂರ್ಣಗೊಂಡಿವೆ ಎನ್ನುವ ತಪ್ಪು ಕಲ್ಪನೆ ಬಹಳಷ್ಟು ಮಂದಿಗೆ ಇದೆ. ಎಲ್ಲಾ ಸಿನಿಮಾಗಳು ಇನ್ನೂ ಪೂರ್ಣಗೊಂಡಿಲ್ಲ. ಚಿತ್ರಗಳು ಪೂರ್ಣಗೊಳ್ಳುವಾಗಲೇ ಕೋವಿಡ್‌ 19 ಆವರಿಸಿತು. ಆಗ ಸಿನಿಮಾಗಳು ಡಬ್ಬಿಂಗ್‌, ಹಿನ್ನೆಲೆ ಸಂಗೀತ ಹಾಗೂ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿ ನಿಂತು ಹೋಗಿವೆ. ಆ ಚಿತ್ರಗಳನ್ನು ಈಗ ಪೂರ್ಣಗೊಳಿಸಲು ಆಗುವುದಿಲ್ಲವೆಂದಲ್ಲ, ಪೂರ್ಣಗೊಳಿಸಬಹುದು. ಇದರಲ್ಲಿ ಸಣ್ಣ ನಟರು, ದೊಡ್ಡನಟರ ಚಿತ್ರಗಳು ಎನ್ನುವ ಪ್ರಶ್ನೆ ಇಲ್ಲ, ಎಲ್ಲರಿಗೂ ಅವರವರ ಜೀವನ ದೊಡ್ಡದು. ಯಾವ ನಟರದ್ದೇ ಸಿನಿಮಾ ಮಾಡಿರಲಿ, ಎಲ್ಲ ನಿರ್ಮಾಪಕರಿಗೂ ಅವರವರ ಸಿನಿಮಾವೇ ದೊಡ್ಡದು. ಅದರಲ್ಲಿ ಅವರ ಜೀವನ ಇರುತ್ತದೆ. ತುಂಬಿದ ಕೊಡ ಎಂದಾಗ, ಸ್ವಲ್ಪ ಪ್ರಯತ್ನ ಮಾಡೋಣ, ಸ್ವಲ್ಪ ವ್ಯತ್ಯಾಸವಾದರೂ ಚೇತರಿಸಿಕೊಳ್ಳೋಣ ಎನ್ನಬಹುದು. ಆದರೆ, ಇಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವನವೇ ಬದಲಾಗಿಬಿಡುತ್ತದೆ. ಎಲ್ಲರೂ ಸಹ ಅವರ ಉತ್ಪನ್ನ ಮತ್ತು ಬದುಕಿನ ಮೇಲೆ ಕಾಳಜಿ ತೆಗೆದುಕೊಳ್ಳುತ್ತಾರೆ. ನಾನು ಹೇಳಿದ ಹಾಗೆ, ಒಂದು ಸಿನಿಮಾದಲ್ಲಿ ಸಮಸ್ಯೆಯಾದರೂ ಪರವಾಗಿಲ್ಲ, ದೇವರು ಸಿಕ್ಕಾಪಟ್ಟೆ ಕೊಟ್ಟಿದ್ದಾನೆ, ಇನ್ನೊಂದೇನಾದರೂ ಮಾಡೋಣ ಎಂದರೆ ತೊಂದರೆ ಇಲ್ಲ, ಎಲ್ಲ ನಿರ್ಮಾಪಕರಿಗೂ ಅವರದೇ ಆದ ತೊಂದರೆಗಳು ಇರುತ್ತವೆಯಲ್ಲವೇ. ಪರಿಸ್ಥಿತಿ ಸಹಜವಾಗಿದ್ದಾಗ, ಕೋವಿಡ್‌ ಇಲ್ಲದಿರುವಾಗಲೇ ತೆಗೆದುಕೊಳ್ಳುತ್ತಿದ್ದುದು ನಿಜವಾಗಲೂ ರಿಸ್ಕ್‌. ಈಗಂತೂ ಯಾರೂ ರಿಸ್ಕ್‌ ತೆಗೆದುಕೊಳ್ಳುವುದಿಲ್ಲ. ಈಗ ತೆಗೆದುಕೊಂಡರೆ ಅದು ರಿಸ್ಕ್‌ ಅಲ್ಲ, ಆತ್ಮಹತ್ಯೆ ಎನಿಸಿಕೊಳ್ಳುತ್ತದೆ. ಗೊತ್ತಿದ್ದು ಗೊತ್ತಿದ್ದು ಅಂತಹ ರಿಸ್ಕ್‌ಗೆ ಕೈಹಾಕುವುದು ನನ್ನ ಪ್ರಕಾರ ಒಳ್ಳೆಯದೂ ಅಲ್ಲ. ನಾವು ಪರಿಸ್ಥಿತಿ ಸರಿಹೋಗುವವರೆಗೂ ಕಾಯಬೇಕು.

* ಕೊರೊನಾಗೆ ಅಂಜದೆ ‘ಫ್ಯಾಂಟಮ್‌’ ಶೂಟಿಂಗ್‌ಗೆ ತೆರಳಿದ ನಟ ನೀವು,ಕೊರೊನಾ ಕಾಲದ ಶೂಟಿಂಗ್‌ ಸವಾಲು ಹೇಗೆ ನಿಭಾಯಿಸಿದ್ದೀರಿ? ಹೈದರಾಬಾದ್‌ ಮತ್ತು ಕೇರಳದಲ್ಲಿ ಶೂಟಿಂಗ್‌ ನಡೆಯುವಾಗ ಏನೆಲ್ಲಾ ಸವಾಲುಗಳಿದ್ದವು?

ನಮಗೆ ಭಯ ಇರಲಿಲ್ಲ ಎಂದಲ್ಲ, ಕೊರೊನಾ ಬಂದರೆ ಏನಾಗುತ್ತದೆ, ಅದು ಬಂದ ಮೇಲೆ ಕೊನೆ ಫಲಿತಾಂಶ ಹೇಗಿರುತ್ತದೆ ಎನ್ನುವುದು ನಮಗೆ ಗೊತ್ತಿಲ್ಲ. ಯಾರೋ ಏನೇನೊ ವಿಡಿಯೊಗಳನ್ನು ಪೋಸ್ಟ್‌ ಮಾಡುತ್ತಿದ್ದರು. ನಾವು ಅದನ್ನೇ ನಂಬುತ್ತಿದ್ದೆವು. ಕೊರೊನಾ ಬಂದರೆ ಹೀಗೆ ಬಿದ್ದುಹೋಗುತ್ತಾರಂತೆ ಎಂದು ಭಯಪಡಿಸಲು ಏನೇನೊ ವಿಡಿಯೋ ಪೋಸ್ಟ್‌ ಮಾಡುತ್ತಿದ್ದರು. ನನ್ನ ಸ್ನೇಹಿತ ಚಿತ್ರೀಕರಣಕ್ಕೆ ಸೆಟ್‌ ಹಾಕಿಬಿಟ್ಟಿದ್ದ, ಶೂಟಿಂಗ್‌ ಮಾಡದಿದ್ದರೆ ಅದೆಲ್ಲವೂ ಹಾಳಾಗುತ್ತಿತ್ತು. ಹಾಗಾಗಿ ನಾನು ಶೂಟಿಂಗ್‌ಗೆ ಹೋಗಲು ನಿರ್ಧರಿಸಿದೆ. ಕಣ್ಣಿಗೆ ಕಾಣುವ ಶತ್ರು ಜತೆಗೆ ಫೈಟ್‌ ಮಾಡಬಹುದು, ಆದರೆ, ಕಾಣದೆ ಇರುವ ಶತ್ರು ಜತೆಗೆ ಹೇಗೆ ಫೈಟ್‌ ಮಾಡುವುದು? ಕೊರೊನಾ ಪ್ರಕರಣ ದ್ವಿಗುಣವಾಗಿದ್ದು, ಅದು ಒಬ್ಬರಿಗೆ ಬಂದಾಗ ಅವರು ಚೇತರಿಸಿಕೊಳ್ಳಲು ತೆಗೆದುಕೊಂಡ ಸಮಯ ನೋಡಿ ಆಗಲೇ ನನಗೆ ಅನಿಸಿದ್ದು ಕೊರೊನಾ ಇನ್ನು ಒಂದು ವರ್ಷ ಹೋಗುವುದಿಲ್ಲವೆಂದು. ಒಂದೇ ಒಂದು ಧೈರ್ಯವೆಂದರೆ ಕೊರೊನಾ ಬಂದವರೂ ಚೇತರಿಸಿಕೊಂಡು ನೆಗೆಟಿವ್‌ ವರದಿ ಬಂದಿದ್ದು. ಇದೆಲ್ಲವನ್ನೂ ನೋಡಿ ನಾವು ಶೂಟಿಂಗ್‌ಗೆ ಹೋಗುವ ಮನಸು ಮಾಡಿದೆವು. ಅದಕ್ಕೂ ಮೊದಲು ಸ್ಯಾನಿಟೈಸ್‌, ಮಾಸ್ಕ್‌ ಧರಿಸುವಿಕೆ, ಅಂತರ ಕಾಪಾಡಿಕೊಳ್ಳುವುದು ಹೀಗೆ ಎಲ್ಲ ರೀತಿಯ ಮುನ್ನೆಚ್ಚರಿಕೆಗೆ ಒಂದು ತಿಂಗಳಿನಿಂದಲೇ ತಯಾರಿ ನಡೆಸಿದ್ದೆವು. ಸೆಟ್‌ನಲ್ಲಿ ಈ ಶಿಸ್ತನ್ನು ತಪ್ಪದೇ ಪಾಲಿಸಿದೆವು. ಶೂಟಿಂಗ್‌ನಲ್ಲಿದ್ದ ಪ್ರತಿಯೊಬ್ಬರ ಮೇಲೆ ನಿಗಾ ಇಟ್ಟಿದ್ದೆವು. ಬಬಲ್ ಬಿಟ್ಟು ಹೊರಗೆ ಹೋಗಲು ಅವಕಾಶವೇ ಇರಲಿಲ್ಲ. ಮೊದಮೊದಲು ತುಂಬಾ ಹೆದರಿಕೆಯೂ ಇತ್ತು, ಆನಂತರ ಧೈರ್ಯ ಬರಲು ಶುರುವಾಯಿತು. ಶೂಟಿಂಗ್‌ ವೇಳೆ ಪ್ರಯಾಣದಲ್ಲೂ ತುಂಬಾ ಜಾಗ್ರತೆ ವಹಿಸಿದೆವು. ಬೇಕೆಂದರೂ ತಂದೆ–ತಾಯಿ, ಕುಟುಂಬದ ಸದಸ್ಯರ ಬಳಿ ನಾವು ಕೆಲವು ದಿನಗಳ ಕಾಲ ಹೋಗುತ್ತಿರಲಿಲ್ಲ, ಅಂತರ ಕಾಯ್ದುಕೊಂಡೆವು. ಶೂಟಿಂಗ್‌ಗೆ ಬಂದವರಿಗೂ ಇದೇ ಸಲಹೆ ನೀಡಿದೆವು. ನಾನೊಬ್ಬ ಹೀರೊ ನನ್ನ ಅಕ್ಕಪಕ್ಕ ಯಾರೂ ಬರದಿದ್ದರೆ ಸಾಕು ಎನ್ನುವ ಸ್ವಭಾವ ನನ್ನದಲ್ಲ, ಎಲ್ಲದಕ್ಕಿಂತ ನಾವೆಲ್ಲರೂ ಮನುಷ್ಯರು, ಎಲ್ಲರಿಗೂ ಅವರದೇ ಕುಟುಂಬ ಇರುತ್ತದೆ. ಹಾಗಾಗಿ ನಾವು ಮುಂಚೂಣಿಯಲ್ಲಿ ನಿಂತುಕೊಂಡು ಎಲ್ಲರಿಗೂ ಕೊರೊನಾ ಭಯ ನಿವಾರಿಸಿದೆವು. ಇಂದು ಕೊರೊನಾ ಮೆಟ್ಟಿನಿಲ್ಲುವ ಸಾಮರ್ಥ್ಯ ಗಳಿಸಿಕೊಂಡಿದ್ದೇವೆ.

* ಅನೂಪ್‌ ಭಂಡಾರಿ ಮತ್ತು ನಿಮ್ಮ ಕಾಂಬಿನೇಷನ್‌ ಫ್ಯಾಂಟಮ್‌ ಜಗತ್ತನ್ನು ಹೇಗೆ ಕಟ್ಟಿಕೊಡುತ್ತಿದೆ?

ನನಗೆ ಈ ಸಿನಿಮಾದಲ್ಲಿ ಬಹಳ ಇಷ್ಟವಾಗಿದ್ದು ಕಥೆ! ನಾವು ‘ಬಿಲ್ಲಾ ರಂಗ ಭಾಷಾ’ ಚಿತ್ರದ ಚಿತ್ರಕಥೆ ಬರೆಯುತ್ತಾ ಕುಳಿತ್ತಿದ್ದೆವು. ಆಗ ಮಧ್ಯದಲ್ಲಿ ಎರಡುಮೂರು ದಿನಗಳ ಬಿಡುವು ಪಡೆದು ಚಿತ್ರದ ಬಗ್ಗೆ ಚರ್ಚೆ ನಡೆಸುತ್ತಿದ್ದವು. ಆಗ ಬೇರೆಯ ಚಿಕ್ಕ ಕಥೆ ಇದ್ದರೆ ಹೇಳಿ, ಹೊಸಬರನ್ನು ಹಾಕಿಕೊಂಡು ಒಂದು ಸಣ್ಣ ಸಿನಿಮಾ ಮಾಡೋಣ, ನಾನು ನಿರ್ಮಾಣ ಮಾಡುತ್ತೇನೆ ಎಂದೆ. ಆಗ ಮೂಡಿದ ಕಥೆಯೇ ‘ಫ್ಯಾಂಟಮ್‌’. ಸುದೀಪ್‌ ಎಂದರೆ ಒಂದು ಇಮೇಜ್‌ ಇದೆ, ಫ್ಯಾನ್ಸ್ ಇಷ್ಟಪಡುತ್ತಾರೆ ಎಂದು ಅನೂಪ್‌ ಭಾವಿಸಿದರು. ಯಾರಿಗೆ ಏನು ಬೇಕು ಅದನ್ನು ಈ ಚಿತ್ರದಲ್ಲಿ ಕೊಡೋಣ. ಒಂದು ಒಳ್ಳೆಯ ಕಥೆ ಇರುವಾಗ ಸಿನಿಮಾಕ್ಕಾಗಿ ಖರ್ಚು ಮಾಡುವುದಲ್ಲಿಯೂ ಅರ್ಥವಿರುತ್ತದೆ ಎಂದು ಇದನ್ನು ದೊಡ್ಡ ಬಜೆಟ್‌ ಚಿತ್ರವಾಗಿ ಪರಿವರ್ತಿಸಿದೆವು. ಅನೂಪ್‌ ಭಂಡಾರಿ ಸಿನಿಮಾ ಬಿಟ್ಟು ಬೇರೇನೂ ಮಾತನಾಡುವುದಿಲ್ಲ, ಅವರ ಕೆಲಸದ ಪರಿ ತುಂಬ ಇಷ್ಟವಾಗುತ್ತದೆ. ನಮ್ಮ ಕಾಂಬಿನೇಷನ್‌ನಲ್ಲಿ ಒಂದು ಪ್ರಪಂಚ ಕ್ರಿಯೇಟ್ ಮಾಡೋಣ, ಅದರಲ್ಲಿ ಒಂದು ಒಳ್ಳೆಯ ಕಥೆ ಹೇಳೋಣವೆಂದು ‘ಫ್ಯಾಂಟಮ್‌’ ಶುರು ಮಾಡಿದೆವು. ನನಗೆ ಬಹಳ ಇಷ್ಟವಾಗಿದ್ದು ಚಿತ್ರದ ಕೊನೆಯ 20 ನಿಮಿಷಗಳ ಭಾಗ. ಇದು ಅತ್ಯಂತ ಭಾವುಕವಾಗಿದೆ, ಎಲ್ಲರ ಹೃನ್ಮನಗಳನ್ನು ಇದು ತಟ್ಟುತ್ತದೆ. ಆ ಕೊನೆಯ ಇಪ್ಪತ್ತು ನಿಮಿಷಗಳ ಅವಧಿಯ ಸನ್ನಿವೇಶಗಳಿಗಾಗಿಯೇ ನಾನು ಈ ಸಿನಿಮಾ ಮಾಡಲು ಒಪ್ಪಿಕೊಂಡೆ ಕೂಡ. ಈಗಿನ ಸನ್ನಿವೇಶದಲ್ಲಿ ಸಿನಿಮಾ ಮೇಲೆ ಬಂಡವಾಳ ಹೂಡಲು ಎಲ್ಲರೂ ಹಿಂಜರಿಯುತ್ತಿದ್ದಾರೆ. ಇಂತಹದ್ದರಲ್ಲಿ ಜಾಕ್‌ ಮಂಜು ನಮ್ಮನ್ನು ನಂಬಿ ಹಣ ಹೂಡಿದ್ದಾರೆ, ನಮ್ಮ ಸ್ನೇಹಿತ ಬಳಗವೂ ಬೆನ್ನಿಗೆ ನಿಂತಿದ್ದರಿಂದ ಸಿನಿಮಾ ಪೂರ್ಣವಾಗುವ ಹಂತಕ್ಕೆ ಬಂದಿದೆ.

* ವಿಕ್ರಾಂತ್‌ ರೋಣಾ ಪಾತ್ರದ ಗಮ್ಮತ್ತು ಹೇಗಿರಲಿದೆ?

ಈಗಾಗಲೇ ‘ವಿಕ್ರಾಂತ್‌ ರೋಣಾ’ ಪಾತ್ರ ಟ್ರೆಂಡ್‌ ಹುಟ್ಟು ಹಾಕಿದೆ. ಈ ಚಿತ್ರದಲ್ಲಿ ನಾನು ಧರಿಸಿರುವ ಸ್ಲೀವ್ ಚೆಕ್ಸ್‌ ಶರ್ಟ್‌ ಫೋಟೊದಲ್ಲಿ ನೋಡಿರಬಹುದು, ಅದು ಈಗಾಗಲೇ ಮಾರುಕಟ್ಟೆಗೆ ಬಂದುಬಿಟ್ಟಿದೆ!

* ‘ಫ್ಯಾಂಟಮ್‌’ ಕೂಡ ಪ್ಯಾನ್‌ ಇಂಡಿಯಾ ಸಿನಿಮಾ ಆಗಿದ್ದರ ಬಗ್ಗೆ ನಿಮ್ಮ ಅನಿಸಿಕೆ...

ಆರಂಭದಲ್ಲಿ ಈ ಚಿತ್ರವನ್ನು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಬೇಕೆಂದುಕೊಂಡಿರಲಿಲ್ಲ, ಕನ್ನಡಕ್ಕೆ ಒಂದು ಒಳ್ಳೆಯ ಸಿನಿಮಾ ಕೊಡುವ ಉದ್ದೇಶದಿಂದ ನಾವು ಕೈಗೆತ್ತಿಕೊಂಡಿದ್ದೆವು. ಒಂದು ಒಳ್ಳೆಯ ಕಥೆ ಹೇಳೋಣ, ನನಗೆ ಕಥೆ ಇಷ್ಟವಾಯಿತು. ಇದರ ಟೀಸರ್‌, ಟ್ರೈಲರ್‌ ಅನ್ನು ನೋಡಿದ ಮೇಲೆ ಬೇರೆ ಬೇರೆ ಭಾಷೆಗಳಿಂದ ಬೇಡಿಕೆ ಬಂದಿತು. ಸಾಗರೋತ್ತರ ದೇಶಗಳಿಂದಲೂ ಅಪ್ರೋಚ್‌ ಮಾಡಲು ಶುರು ಮಾಡಿದರು. ಹೈದರಾಬಾದ್‌ನಲ್ಲಿ ನಮ್ಮ ಸೆಟ್‌ಗೆ ಹಿಂದಿ, ತಮಿಳು ಹಾಗೂ ಬೇರೆ ಭಾಷಿಗರು ಬಂದು ಚಿತ್ರಕ್ಕೆ ಬೇಡಿಕೆ ಇಟ್ಟರು. ಈ ಚಿತ್ರವನ್ನು ಪ್ಯಾನ್‌ ಇಂಡಿಯಾ ಮಾಡಲು ನಾವು ಹೊರಟಿದ್ದಲ್ಲ, ಅದೇ ಪ್ಯಾನ್‌ ಇಂಡಿಯಾ ಚಿತ್ರ ಆಗೋಯಿತು. ಪ್ಯಾನ್‌ ಇಂಡಿಯಾ ಚಿತ್ರವೆಂದು ಹೇಳಿಕೊಂಡು ಚಿತ್ರ ಮಾಡುವುದು ತಪ್ಪು ಎಂದು ನಾನು ಹೇಳುತ್ತಿಲ್ಲ, ಆದರೆ, ಇದರ ಉದ್ದೇಶ ಪ್ಯಾನ್‌ ಇಂಡಿಯಾ ಆಗಿರಲಿಲ್ಲ ಅಷ್ಟೇ.

* ಹಾಗಂಥ ನೀವು ಸದ್ಯದಲ್ಲೇ ನಿರ್ದೇಶಕನ ಟೊಪ್ಪಿ ಮತ್ತೆ ಧರಿಸುತ್ತಿದ್ದೀರಿ. ಚಿತ್ರ ಯಾವಾಗ ಶುರುವಾಗಲಿದೆ?

ಫ್ಯಾಂಟಮ್‌ ಚಿತ್ರ ಬಹುತೇಕ ಮುಗಿಯುತ್ತಾ ಬಂದಿದೆ. ಸ್ವಲ್ಪ ಕೆಲಸವಷ್ಟೇ ಬಾಕಿ ಇದೆ. ಚಿತ್ರದ ಕೆಲಸಗಳನ್ನು ನಾನು ಶುರು ಮಾಡಿರುವೆ. ನನಗೆ ನಿರ್ದೇಶನ ಎನ್ನುವುದು ಅಗತ್ಯವಲ್ಲ, ಅದು ನನಗೆ ಒಂದು ಪ್ಯಾಷನ್‌. ನಾವು ಸಿನಿಮಾ ಮಾಡಿ ಬಾಕ್ಸ್‌ನಲ್ಲಿಟ್ಟುಕೊಂಡು ಕುಳಿತುಕೊಳ್ಳಲು ಆಗದು. ಒಂದೆರಡು ತಿಂಗಳು ನೋಡೋಣ, ಪ್ರಪಂಚ ಹೇಗೆ ಸಾಗುತ್ತದೆ, ಸಿನಿಮೋದ್ಯಮದ ವ್ಯವಹಾರಗಳು ಹೇಗೆ ನಡೆಯಲಿವೆ, ನಾವು ಹೇಗೆ ಕೆಲಸ ಶುರುಮಾಡಬೇಕು ಎನ್ನುವುದಕ್ಕಾಗಿ ಕಾಯುತ್ತಿರುವೆ.

* ಕನ್ನಡದ ‘ಬಿಗ್‌ಬಾಸ್‌’ ಯಾವಾಗ ಶುರುವಾಗಲಿದೆ?

‘ಬಿಗ್‌ಬಾಸ್‌’ ಜನವರಿ ಮೂರನೇ ವಾರ ಅಥವಾ ಜನವರಿ ಕೊನೆಯಲ್ಲಿ ಶುರುವಾಗಲಿದೆ.

* ಹಾಗೆಯೇ ಕಿಚ್ಚ ಕ್ರಿಯೇಷನ್ಸ್‌ನಡಿ ನಿರ್ಮಾಣವಾಗಲಿರುವ ‘ಅಶ್ವತ್ಥಾಮ’ನ ಬಗ್ಗೆಯೂ ಒಂದಿಷ್ಟು ಹೇಳಿ..

ಅನೂಪ್‌ ಬಳಿ ಇನ್ನೊಂದು ಒಳ್ಳೆಯ ಕಥೆ ಇತ್ತು. ನಾನು ಅವರು ಚರ್ಚಿಸುವಾಗ ಈ ಕಥೆ ನನಗೆ ತುಂಬಾ ಇಷ್ಟವಾಯಿತು. ನಾನು ಈ ಚಿತ್ರದಲ್ಲಿ ನಟಿಸುತ್ತೀನೊ ಇಲ್ಲವೋ ಗೊತ್ತಿಲ್ಲ, ಆದರೆ, ಈ ಚಿತ್ರ ನಾನೇ ನಿರ್ಮಿಸುತ್ತೇನೆ ಎಂದಿದ್ದೆ. ಅದು ಒಂದೊಳ್ಳೆಯ ಸ್ಕ್ರಿಪ್ಟ್‌. ಅದರಲ್ಲಿ ನಾನು ನಟಿಸದಿದ್ದರೂ ನಮ್ಮಲ್ಲಿ ಇನ್ನು ಒಳ್ಳೊಳ್ಳೆಯ ಕಲಾವಿದರು ಇದ್ದಾರೆ. ಅವರನ್ನು ಹಾಕಿಕೊಂಡು ಈ ಸಿನಿಮಾ ಮಾಡುತ್ತೇವೆ.

* 2021 ವರ್ಷದಲ್ಲಿ ಅಭಿಮಾನಿಗಳಿಗೆ ಮತ್ತು ನಾಡಿನ ಜನರಿಗೆ ಏನು ಹೇಳಲು ಇಷ್ಟಪಡುವಿರಿ...

ಖುಷಿ, ಯಶಸ್ಸು ಏನೆಂದು ಗೊತ್ತಾಗಬೇಕೆಂದರೆ ದುಃಖ, ಕಷ್ಟ, ಸೋಲು ಇವೆಲ್ಲವನ್ನೂ ಅನುಭವಿಸಬೇಕಾಗುತ್ತದೆ. ಇವೆಲ್ಲವನ್ನೂ ಅನುಭವಿಸಿದಾಗಲೇ ಮುಂದೆ ಬರಲಿರುವ ಒಳ್ಳೆಯ ದಿನಗಳ ಬೆಲೆ ಗೊತ್ತಾಗುತ್ತದೆ. ಆಗಷ್ಟೇ ಯಶಸ್ಸು, ಖುಷಿ ಎಂದರೆ ಏನೆಂದು ಗೊತ್ತಾಗುವುದು. 2020 ಕೆಟ್ಟದ್ದು ಎನ್ನುವುದಕ್ಕಿಂತ ಸಾಕಷ್ಟು ಪಾಠಗಳನ್ನು ನಮಗೆ ಕಲಿಸಿದೆ. ನಮ್ಮ ಸತ್ಯಗಳನ್ನು ನಮ್ಮ ಎದುರು ಬಿಚ್ಚಿಟ್ಟಿದೆ. ಮನುಷ್ಯನಾಗಿ ನಾವು ಎಷ್ಟು ಸ್ಟ್ರಾಂಗು, ಎಷ್ಟು ವೀಕ್‌ ಎನ್ನುವುದನ್ನು ಅನಾವರಣಗೊಳಿಸಿದೆ. ದುಡ್ಡು, ಜೀವನ, ಸಂಬಂಧ ಹಾಗೂ ಊಟದ ಬೆಲೆ... ಹೀಗೆ ಎಲ್ಲದರ ಬೆಲೆ ಎಷ್ಟೆಂಬುದನ್ನು ತೋರಿಸಿಕೊಟ್ಟಿದೆ. ಮನುಷ್ಯರು ಎಲ್ಲವೂ ನಮಗಾಗಿಯೇ ಇರುವುದೆಂದು ಭಾವಿಸಿ ಅಹಂಕಾರದಲ್ಲಿ ಜೀವನ ನಡೆಸುತ್ತಿದ್ದೆವು. ಕೋವಿಡ್‌ ಕಾಲದಲ್ಲಿ ಒಂದು ಈರುಳ್ಳಿ, ಟೊಮೆಟೊಗೂ ಒದ್ದಾಡುವ ಸ್ಥಿತಿ ಬಂದೋಯಿತು. ಒಂದಂತು ಸತ್ಯ, ಕಲಿಯುವವನಿಗೆ ಇಷ್ಟೇ ಸಾಕು, ಕಲಿತವರಿಗೆಲ್ಲರಿಗೂ 2021 ಚೆನ್ನಾಗಿರುತ್ತದೆ. ಚಿಕ್ಕಚಿಕ್ಕದರಲ್ಲೇ ಬದುಕುವ ಕಲೆ, ಬುದ್ಧಿಯನ್ನು ಗಳಿಸಿಕೊಂಡಿದ್ದಾರೆ. ಕಲಿಯದವರಿಗೆ 2020 ಅಲ್ಲ, 2020ಯದು ಪಾರ್ಟ್‌ 2 ಬಂದರೂ ಅವರು ಕಲಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.