ADVERTISEMENT

ನಟ ಸುದೀಪ್‌ ಅಭಿನಯದ 46ನೇ ಸಿನಿಮಾ ‘ಮ್ಯಾಕ್ಸ್‌’ ಡಿ.25ಕ್ಕೆ ರಿಲೀಸ್‌

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 12:18 IST
Last Updated 28 ನವೆಂಬರ್ 2024, 12:18 IST
ಸುದೀಪ್‌ 
ಸುದೀಪ್‌    

ನಟ ಸುದೀಪ್‌ ಅಭಿನಯದ 46ನೇ ಸಿನಿಮಾ ‘ಮ್ಯಾಕ್ಸ್‌’ನ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಕೊನೆಗೂ ಘೋಷಿಸಿದೆ. ಡಿ.25ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಮೂಲಕ ಎರಡು ವರ್ಷದ ಬಳಿಕ ಸುದೀಪ್‌ ಸಿನಿಮಾವೊಂದು ತೆರೆಕಾಣಲಿದೆ.  

2022ರ ಜುಲೈನಲ್ಲಿ ‘ವಿಕ್ರಾಂತ್‌ ರೋಣ’ ಬಿಡುಗಡೆಯಾಗಿತ್ತು. ಇದಾದ ಬಳಿಕ ಅವರ ಯಾವ ಸಿನಿಮಾವೂ ರಿಲೀಸ್‌ ಆಗಿಲ್ಲ. 2023ರಲ್ಲಿ ಸೆಟ್ಟೇರಿದ್ದ ‘ಮ್ಯಾಕ್ಸ್‌’ ಸಿನಿಮಾ ರಿಲೀಸ್‌ ಯಾವಾಗ ಎನ್ನುವ ಅಭಿಮಾನಿಗಳ ಪ್ರಶ್ನೆ ನಿರಂತರವಾಗಿತ್ತು. ಎರಡು ತಿಂಗಳ ಹಿಂದೆ ‘ಮ್ಯಾಕ್ಸಿಮಮ್‌ ಮಾಸ್‌’ ಎಂಬ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ ಬಿಡುಗಡೆಯನ್ನು ಮುಂದೂಡುತ್ತಲೇ ಬಂದಿತ್ತು. ಎಲ್ಲ ಭಾಷೆಗಳಲ್ಲಿ ಏಕಕಾಲದಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ಇದೀಗ ನಿರ್ಧರಿಸಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಾಣುತ್ತಿದೆ. ಸುದೀಪ್‌ ಜೊತೆಗೆ ‘ಪುಷ್ಪ’ ಖ್ಯಾತಿಯ ಸುನೀಲ್‌, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಶರತ್‌ ಲೋಹಿತಾಶ್ವ, ಪ್ರಮೋದ್ ಶೆಟ್ಟಿ ಮುಂತಾದವರು ಈ ಸಿನಿಮಾದ ತಾರಾಬಳಗದಲ್ಲಿದ್ದಾರೆ. 

ಸಿನಿಮಾದ ಬಹುತೇಕ ಚಿತ್ರೀಕರಣ ತಮಿಳುನಾಡಿನ ಮಹಾಬಲಿಪುರಂನಲ್ಲಿ ಹಾಕಿದ್ದ ಸೆಟ್‌ನಲ್ಲಿ ನಡೆದಿತ್ತು. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು, ವಿ‌ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್. ತನು ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಸ್ಯಾಟಲೈಟ್‌ ಹಕ್ಕುಗಳನ್ನು ‘ಜೀ ಕನ್ನಡ’ ಖರೀದಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.