ADVERTISEMENT

ಪಕ್ಷಪಾತದ ಆರೋಪ ನಿರಾಕರಿಸಿದ ಸುನಿಲ್‌ ಪುರಾಣಿಕ್‌

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 16:11 IST
Last Updated 7 ಜೂನ್ 2021, 16:11 IST
ಸುನಿಲ್‌ ಪುರಾಣಿಕ್‌
ಸುನಿಲ್‌ ಪುರಾಣಿಕ್‌   

ಬೆಂಗಳೂರು: ‘ಸೆನ್ಸಾರ್‌ ಮಂಡಳಿಯ ಸಲಹಾ ಸಮಿತಿಯ ಸದಸ್ಯರ ನೇಮಕ ವಿಚಾರ ಸಂಬಂಧಿಸಿದಂತೆ ತಾವು ಯಾವುದೇ ಸ್ವಜನ ಪಕ್ಷಪಾತ ಮಾಡಿಲ್ಲ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್‌ ಪುರಾಣಿಕ್‌ ಹೇಳಿದ್ದಾರೆ.

ತಮ್ಮ ಪುತ್ರ ಸಾಗರ್‌ ಪುರಾಣಿಕ್‌ ಸೆನ್ಸಾರ್‌ ಮಂಡಳಿಯ ಸಲಹಾ ಸಮಿತಿಯ ಸದಸ್ಯರಾಗಿ ನೇಮಕಗೊಂಡಿರುವ ಬಗ್ಗೆ ಸ್ಪಷ್ಟಪಡಿಸಿರುವ ಅವರು, ‘ಸಾಗರ್‌ ನಾಟಕ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ತನ್ನದೇ ಆದ ನೆಲೆಯಲ್ಲಿ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಅವರ ಹೆಸರು ಸೇರಿಸುವಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ನನ್ನ ಪುತ್ರ ಎಂಬ ಕಾರಣಕ್ಕೆ ಅವನ ನಿರ್ಮಾಣದ ‘ಡೊಳ್ಳು’ ಚಿತ್ರವನ್ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಾ ವಿಭಾಗದಿಂದ ಹೊರಗಿಟ್ಟಿದ್ದೇನೆ. ಹಾಗಾಗಿ ಸಾಗರ್‌ ತಮ್ಮ ಪುತ್ರ ಎನ್ನುವುದನ್ನು ಬಿಟ್ಟರೆ ಸೆನ್ಸಾರ್‌ ಮಂಡಳಿಯ ನೆಮಕಕ್ಕೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದಿದ್ದಾರೆ.

‘ಚಲನಚಿತ್ರ ಅಕಾಡೆಮಿಯು ರಾಜ್ಯದ ಸಿನಿಮಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರಾತಿನಿಧ್ಯ ಕೊಡುವುದಕ್ಕೆ ಸೀಮಿತವಾಗಿದೆ. ಅಕಾಡೆಮಿಯು ಯಾವುದೇ ಪಟ್ಟಿಯನ್ನು ಶಿಫಾರಸು ಮಾಡುವುದಿಲ್ಲ. ಕೇಂದ್ರ ಸರ್ಕಾರದ ಸೆನ್ಸಾರ್‌ ಮಂಡಳಿಯ ವಿಚಾರಗಳಲ್ಲಿ ಅಕಾಡೆಮಿಯು ಹಸ್ತಕ್ಷೇಪ ಮಾಡುವುದಿಲ್ಲ. ಈಗಾಗಲೇ ಪಟ್ಟಿಯೊಂದು ಹರಿದಾಡುತ್ತಿದ್ದು ಅದು ಅಧಿಕೃತವೇ ಅಲ್ಲವೇ ಎಂಬುದೂ ತಮಗೆ ತಿಳಿದಿಲ್ಲ’ ಎಂದಿದ್ದಾರೆ.

ADVERTISEMENT

ಕೆಲವರು ವಿನಾಕಾರಣ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮೇಲೆ ಸ್ವಜನ ಪಕ್ಷಪಾತದ ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ. ಇದು ಮುಂದುವರಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.