ADVERTISEMENT

ಬದುಕಿಗೂ ಒಂದು ‘ಸಪ್ಲಿಮೆಂಟರಿ’

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 4:46 IST
Last Updated 17 ಜನವರಿ 2019, 4:46 IST
‘ಸಪ್ಲಿಮೆಂಟರಿ ಎಕ್ಸಾಂ’ ಚಿತ್ರದ ನಾಯಕ ನಟ ಖುಷ್‌
‘ಸಪ್ಲಿಮೆಂಟರಿ ಎಕ್ಸಾಂ’ ಚಿತ್ರದ ನಾಯಕ ನಟ ಖುಷ್‌   

ಪರೀಕ್ಷೆಯಲ್ಲಿ ಫೇಲ್ ಆದ್ರೆ ಸಪ್ಲಿಮೆಂಟರಿ ಎಕ್ಸಾಂ ಬರೆಯುವ ಚಾನ್ಸ್‌ ಇದೆಯಲ್ಲ! ಹಾಗೆಯೇ ಬದುಕಿನಲ್ಲಿ ಫೇಲ್ ಆದವರಿಗೂ ಮತ್ತೊಂದು ಚಾನ್ಸ್‌ ಸಿಕ್ಕೇ ಸಿಗುತ್ತದಲ್ಲವೇ.. ಇಂಥ ಆಶಾವಾದದ ಎಳೆಯೊಂದಿಗೆ ಕಟ್ಟಿಕೊಂಡ ಸಿನಿಮಾ ‘ಸಪ್ಲಿಮೆಂಟರಿ’. ತುಮಕೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿರುವ ದೇವರಾಜ್‌ ಎಸ್‌. ಅವರು ವಿದ್ಯಾರ್ಥಿಗಳ ಬದುಕನ್ನು ಕೇಂದ್ರವಾಗಿಟ್ಟುಕೊಂಡು, ಉತ್ತಮ ಸಂದೇಶ ನೀಡುವ ಉಮೇದಿಯೊಂದಿಗೆ ಈ ಸಿನಿಮಾ ನಿರ್ದೇಶಿಸಿದ್ದಾರೆ.

ಜನವರಿ 25ಕ್ಕೆ ತೆರೆಯ ಮೇಲೆ ಎಕ್ಸಾಂ ಬರೆಯಲು ಚಿತ್ರ ರೆಡಿಯಾಗಿದೆ. ಚಿತ್ರಕ್ಕೆ ದೇವರಾಜ್‌ ಅವರದೇ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ.

‘ಇದು ಶಿಕ್ಷಣ ಕ್ಷೇತ್ರವನ್ನು ಆಧರಿಸಿದ ಸಿನಿಮಾ. ಸಾಮಾನ್ಯವಾಗಿ ಪರೀಕ್ಷೆಯಲ್ಲಿ ವಿಫಲರಾದಾಗ ಎಲ್ಲರೂ ಡಿಪ್ರೆಶನ್‌ಗೆ ಹೋಗುತ್ತಾರೆ. ಆದರೆ ಅದರಾಚೆಗೂ ಬದುಕಿದೆ ಎನ್ನುವುದನ್ನು ಮನದಟ್ಬಟು ಮಾಡುವ ಪ್ರಯತ್ನ ನಮ್ಮದು. ಜತೆಗೆ ನವಿರಾದ ಪ್ರೇಮಕಥೆಯೂ ಇದೆ. ಖುಷ್ ಮತ್ತು ಶ್ರದ್ಧಾ ಭಟ್ ನಾಯಕ–ನಾಯಕಿಯಾಗಿ,ಮಹೇಂದ್ರ ಮುನೋಟ್‌ ಮತ್ತಿತರ ಕಲಾವಿದರು ನಟಿಸಿದ್ದಾರೆ. ಇದು ಗುರು ಶಿಷ್ಯರ ಸಂಬಂಧ ಹೇಳುವ ಸಿನಿಮಾ. ನಾಗರಹಾವು ಸಿನಿಮಾ ನಂತರ ಗುರು ಶಿಷ್ಯರ ಸಂಬಂಧವನ್ನು ಇಷ್ಟು ಚೆನ್ನಾಗಿ ಯಾರೂ ತೋರಿಸಿಲ್ಲ’ ಎನ್ನುವ ಆತ್ಮವಿಶ್ವಾಸ ನಿರ್ದೇಶಕರದು.

ADVERTISEMENT

ಉತ್ತರ ಕರ್ನಾಟಕದಲ್ಲಿ ಈ ಸಿನಿಮಾಗೆ ಒಳ್ಳೆಯ ಸ್ಪಂದನ ಸಿಗುತ್ತಿದೆಯಂತೆ. ತಮ್ಮ ಪಾತ್ರದ ಕುರಿತು ಮಾತನಾಡಿದ ಮಹೇಂದ್ರ ಮುನೋಟ್‌ ‘ಇದು ನನ್ನ ಸಿನಿಮಾ ಬದುಕಿಗೆ ಸಪ್ಲಿಮೆಂಟರಿ. ಆದರೆ ನಿರ್ದೇಶಕರಿಗೆ ಸಪ್ಲಿಮೆಂಟರಿ ಎಕ್ಸಾಂ ಅಲ್ಲ’ ಎಂದರು.

ಖುಷ್‌ ಈ ಚಿತ್ರದಲ್ಲಿ ಏಜು– ಟೀನೇಜು ಎರಡೂ ಬಗೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

‘ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ಸಿನಿಮಾದಲ್ಲಿನ ಸನ್ನಿವೇಶಗಳು ತಮ್ಮ ನಿಜಜೀವನದಲ್ಲಿ ನಡೆದಿವೆ ಅನಿಸುತ್ತದೆ. ಮನುಷ್ಯನಿಗೆ ಒಂದೇ ಅವಕಾಶ ಇರುವುದಿಲ್ಲ. ಒಮ್ಮೆ ವಿಫಲವಾದರೆ ಮತ್ತೊಂದು ಅವಕಾಶ ಇದ್ದೇ ಇರುತ್ತದೆ. ಅದನ್ನು ಬಳಸಿಕೊಂಡು ಬೆಳೆಯಬೇಕು ಎಂಬುದು ಸಿನಿಮಾ ಸಂದೇಶ’ ಎಂದರು ಖುಷ್. ನಾಯಕಿ ಶ್ರದ್ಧಾ ಭಟ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.