ADVERTISEMENT

ಸುಶಾಂತ್ ಸಿಂಗ್ ರಜಪೂತ್ ಸಾವು; ಸ್ವಜನಪಕ್ಷಪಾತದ ಬಗ್ಗೆ ನಟ ಪ್ರಕಾಶ್‌ ರಾಜ್ ಮಾತು

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 7:51 IST
Last Updated 17 ಜೂನ್ 2020, 7:51 IST
ಪ್ರಕಾಶ್ ರಾಜ್
ಪ್ರಕಾಶ್ ರಾಜ್   

ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ಸಾವಿನಿಂದ ಇಡಿ ದೇಶವೇ ದಂಗಾಗಿತ್ತು. ಆ ಘಟನೆಯಿಂದ ಇನ್ನೂ ಜನರಿಗೆ ಹೊರ ಬರಲು ಸಾಧ್ಯವಾಗುತ್ತಿಲ್ಲ. ಆ ನಡುವೆ ‘ಖಿನ್ನತೆ’ ಹಾಗೂ ‘ಸ್ವಜನಪಕ್ಷಪಾತ’(depression and nepotism) ಈ ಎರಡು ಶಬ್ದಗಳು ಬಾಲಿವುಡ್‌ ಅಂಗಳದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಈ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆಯೂ ನಡೆಯುತ್ತಿದೆ. ‘ಬಾಲಿವುಡ್‌ನಲ್ಲಿ ಅನೇಕ ಪ್ರತಿಭಾವಂತ ನಟರು ಹೆಸರು ಗಳಿಸಲು ಹಾಗೂ ತಮ್ಮನ್ನು ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ತುಂಬಾನೇ ಕಷ್ಟಪಡುತ್ತಾರೆ. ಪ್ರತಿಭೆ ಇದ್ದರೂ ಅವರನ್ನು ಗುರುತಿಸುವವರು ಕಡಿಮೆ. ಅಂತಹವರನ್ನು ಸಿನಿರಂಗಕ್ಕೆ ಕರೆ ತರುವವರೂ ಕಡಿಮೆ. ಅದರಲ್ಲೂ ಸಿನಿಮಾ ಹಿನ್ನೆಲೆ ಇಲ್ಲದ ಹೊಸ ಮುಖಗಳು ಇಂಡಸ್ಟ್ರಿಯಲ್ಲಿ ಹೆಜ್ಜೆ ಊರಲು ತುಂಬಾನೇ ಕಷ್ಟ ಪಡಬೇಕು’ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಈಗ ಖ್ಯಾತ ನಟ ಪ್ರಕಾಶ್ ರಾಜ್‌ ಕೂಡ ಮೌನ ಮುರಿದಿದ್ದಾರೆ. ಸುಶಾಂತ್ ಸಿಂಗ್‌ ಸಾವಿಗೆ ಸಂತಾಪ ಸೂಚಿಸಿದ ಅವರು ಸ್ವಜನಪಕ್ಷಪಾತದ ಬಗ್ಗೆಯೂ ಮಾತನಾಡಿದ್ದಾರೆ.

‘ಸ್ವಜನಪಕ್ಷಪಾತ ಎಂಬುದು ಸಿನಿರಂಗದಲ್ಲಿ ಮುಂಚಿನಿಂದಲೂ ಇದೆ. ನಾನು ಕೂಡ ಅದನ್ನು ಎದುರಿಸಿಯೇ ಮುಂದೆ ಬಂದಿದ್ದೇನೆ’ ಎಂದು ವಿಷಾದದಿಂದ ಬರೆದುಕೊಂಡಿದ್ದಾರೆ ಬಹುಭಾಷಾ ನಟ ಪ್ರಕಾಶ್‌ ರಾಜ್‌.

ಈ ಬಗ್ಗೆ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ‘ಸ್ವಜನಪಕ್ಷಪಾತದೊಂದಿಗೆ ನಾನು ಬದುಕಿ ಬಂದಿದ್ದೇನೆ. ಅದನ್ನು ಎದುರಿಸಿ ಗೆದಿದ್ದೇನೆ. ನಾನು ಅನುಭವಿಸಿದ ನೋವು ನನ್ನ ಮಾಂಸ ಖಂಡಗಳ ಆಳದೊಳಗೆ ಇಳಿದು ಹೋಗಿವೆ. ಆದರೆ ಈ ಮಗು ಸುಶಾಂತ್‌ ಸಿಂಗ್‌ಗೆ ಅದನ್ನು ಎದುರಿಸಲು ಸಾಧ್ಯವಾಗಲಿಲ್ಲ. ಇಂತಹ ಕನಸು ಕಂಗಳನ್ನು ನಾವು ಸಾಯಲು ಬಿಡಬಾರದು. ಅದರ ಜೊತೆ ಎದ್ದು ನಿಲ್ಲಬೇಕು. ರಾಜನಂತೆ ನಿಲ್ಲಬೇಕು’ ಎಂದು ವಿಷಾದದಿಂದ ಬರೆದುಕೊಂಡಿದ್ದಾರೆ.

ADVERTISEMENT

ಸ್ವಜನಪಕ್ಷಪಾತದ ವಿಷಯವಾಗಿ ಸುಶಾಂತ್‌ ಮಾತನಾಡಿದ್ದ ವಿಡಿಯೊವೊಂದನ್ನು ಕೂಡ ಪ್ರಕಾಶ್ ರಾಜ್ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೊದಲ್ಲಿ ‘ಸ್ವಜನಪಕ್ಷಪಾತ ಎನ್ನುವುದು ಸತ್ಯ ಹಾಗೂ ಅದು ಎಲ್ಲಾ ಕಡೆಯಲ್ಲೂ ಇದೆ. ಇದು ಕೇವಲ ಬಾಲಿವುಡ್‌ಗೆ ಮಾತ್ರ ಸೀಮಿತವಾಗಿಲ್ಲ. ಇದರ ಬಗ್ಗೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಸ್ವಜನಪಕ್ಷಪಾತ ನಮ್ಮೊಂದಿಗೆ ಜೀವಿಸುತ್ತಿದೆ. ಅದಕ್ಕೆ ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ. ಆದರೆ ಇದರಿಂದ ಪ್ರತಿಭೆಗಳಿಗೆ ತಮ್ಮ ಪ್ರತಿಭೆ ತೋರಲು ಅವಕಾಶ ಸಿಗುವುದಿಲ್ಲ. ಅಂತಹ ಸಮಯದಲ್ಲಿ ನಾವು ತೊಂದರೆ ಎದುರಿಸಬೇಕಾಗುತ್ತದೆ. ಇದರಿಂದ ಮುಂದೊಂದಿನ ಇಡೀ ಸಿನಿರಂಗದ ಸ್ವರೂಪವೇ ಬದಲಾಗುತ್ತದೆ’ ಎಂದು ಸುಶಾಂತ್ ಹೇಳಿದ್ದರು.

ಸೋಮವಾರ ಸುಶಾಂತ್ ಅವರ ಅಂತ್ಯಕ್ರಿಯೆ ನಡೆದಿದ್ದು ಕಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಹಾಗೂ ಕೆಲವು ಸಿನಿರಂಗದ ಸ್ನೇಹಿತರು ಇದರಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.