ADVERTISEMENT

ಉಕ್ರೇನ್‌–ರಷ್ಯಾ ಬಿಕ್ಕಟ್ಟು: ಸಾಮರಸ್ಯಕ್ಕೆ ಮನವಿ ಮಾಡಿದ ಬಾಲಿವುಡ್‌ ತಾರೆಯರು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2022, 11:47 IST
Last Updated 26 ಫೆಬ್ರುವರಿ 2022, 11:47 IST
ಸೋನು ಸೂದ್‌, ಪ್ರಿಯಾಂಕ
ಸೋನು ಸೂದ್‌, ಪ್ರಿಯಾಂಕ   

ಉಕ್ರೇನ್​ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ಜಗತ್ತಿನಾದ್ಯಂತ ಭೀತಿಯ ವಾತಾವರಣ ನಿರ್ಮಾಣ ಮಾಡಿದ್ದುಭಾರತ ಸೇರಿದಂತೆ ನೂರಾರು ದೇಶಗಳು ಉಭಯ ರಾಷ್ಟ್ರಗಳಿಗೆ ಸಾಮರಸ್ಯಕ್ಕಾಗಿ ಮನವಿ ಮಾಡಿವೆ.

ಉಕ್ರೇನ್‌ನಲ್ಲಿ ಶೆಲ್‌ ಹಾಗೂ ಬಾಂಬ್‌ ದಾಳಿಯ ಪರಿಣಾಮ ನಾಗರೀಕರು ಸೇರಿದಂತೆ ನೂರಾರು ಸೈನಿಕರು ಮೃತಪಟ್ಟಿದ್ದಾರೆ. ಭೀತಿಯಿಂದಾಗಿ ಉಕ್ರೇನ್‌ನಲ್ಲಿರುವ ವಿದೇಶಿಯರು ತಮ್ಮ ನಾಡಿನತ್ತ ಮುಖ ಮಾಡಿದ್ದಾರೆ. ಇತ್ತ ರಷ್ಯಾ ದಾಳಿಯನ್ನು ಅಂತರರಾಷ್ಟ್ರೀಯ ಸಮುದಾಯ ತೀವ್ರವಾಗಿ ಖಂಡಿಸಿದೆ

ಉಕ್ರೇನ್‌ ಮೇಲಿನ ರಷ್ಯಾ ದಾಳಿ ಕುರಿತಾಗಿ ಬಾಲಿವುಡ್‌ ಜನರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಮಸ್ಯೆಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು, ಯುದ್ಧ ಮಾಡುವುದೇಪರಿಹಾರ ಅಲ್ಲ, ಪರಸ್ಪರ ಶಾಂತಿ, ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ADVERTISEMENT

‘18 ಸಾವಿರ ವಿದ್ಯಾರ್ಥಿಗಳು ಮತ್ತು ಹಲವಾರು ಕುಟುಂಬಗಳು ಉಕ್ರೇನ್​ನಲ್ಲಿ ಸಿಲುಕಿಕೊಂಡಿವೆ. ಅವರನ್ನುಕರೆತರಲು ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದೆ ಎಂಬ ನಂಬಿಕೆ ಇದೆ. ಅವರನ್ನುಕರೆತರಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಭಾರತೀಯ ರಾಯಭಾರ ಕಚೇರಿಯನ್ನು ಒತ್ತಾಯಿಸುತ್ತೇನೆ. ಅವರ ಸುರಕ್ಷೆತೆಗಾಗಿ ಪ್ರಾರ್ಥಿಸುತ್ತೇನೆ’ ಎಂದು ನಟ ಸೋನು ಸೂದ್​ ಟ್ವೀಟ್‌ ಮಾಡಿದ್ದಾರೆ.

ಕೋವಿಡ್‌ ಪರಿಣಾಮ ಜಾಗತಿಕವಾಗಿ ಜನರು ಬದುಕು ಜರ್ಜರಿತವಾಗಿದೆ, ಇಂತಹ ಪರಿಸ್ಥಿಯಲ್ಲಿ ದಾಳಿ ಮಾಡುವುದು ಅವಿವೇಕತನ. ಈ ಯುದ್ಧ ನಿಲ್ಲಬೇಕು ಎಂದು ನಟಿ ತಿಲೋತ್ತಮಾ ಶೋಮೆ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಕ್ರೇನ್​ನಲ್ಲಿ ನಡೆಯುತ್ತಿರುವ ಘಟನೆಗಳು ಭಯಾನಕವಾಗಿವೆ. ತಮ್ಮ ಪ್ರೀತಿಪಾತ್ರರಜೀವ ಉಳಿಸಿಕೊಳ್ಳಲು ಜನರು ಭಯದಲ್ಲಿ ಬದುಕುತ್ತಿದ್ದಾರೆ. ಈ ಕಾಲದಲ್ಲೂ ಇಂತಹ ದಾಳಿಗಳು ನಡೆಯುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ. ಜಾಗತಿಕವಾಗಿ ಅಮಾಯಕರ ರಕ್ಷಣೆ ನಡೆಯಬೇಕಾಗಿದೆ ಎಂದು ನಟಿ ಪ್ರಿಯಾಂಕಾ ಚೋಪ್ರಾತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕೂಡಲೇ ಯುದ್ಧ ನಿಲ್ಲಿಸಬೇಕು ಮತ್ತು ಉಭಯ ದೇಶಗಳ ಮಧ್ಯೆ ಸಹಬಾಳ್ವೆ ಏರ್ಪಡಬೇಕು ಎಂದು ಸಾಕಷ್ಟು ಬಾಲಿವುಡ್‌ ತಾರೆಯರುಸಾಮಾಜಿಕ ಮಾಧ್ಯಮಗಳ ಮೂಲಕ ಹೇಳಿದ್ದಾರೆ.

ರಿಚಾ ಚಡ್ಡಾ, ಜಾವೀದ್‌ ಅಖ್ತರ್‌, ಸ್ವರಾ ಬಾಸ್ಕರ್‌, ಶೃತಿ ಸೇಠ್‌, ಅರ್ಷಾದ್‌ ವಾರ್ಸಿ ಸೇರಿದಂತೆ ಹಲವಾರು ನಟ, ನಟಿಯರು ಸಾಮರಸ್ಯಕ್ಕೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.