ADVERTISEMENT

ರೀ ಸಿಎಸ್ಪೀ, ನಿಜವಾಗ್ಲೂ ನಿಮ್ಮ ವಯಸ್ಸೆಷ್ಟ್ರೀ? ಜಾನಕಿ ಎಲ್ಲಿ ಹೋದ್ಲು ಹೇಳ್ರೀ..

ಬರ್ತ್‌ಡೇ ಬಾಯ್ ಟಿ.ಎನ್ ಸೀತಾರಾಮ್ ಜತೆ ಹೀಗೊಂದು ಚಿಟ್ ಚಾಟ್

ವೀಣಾಶ್ರೀ
Published 6 ಡಿಸೆಂಬರ್ 2025, 13:08 IST
Last Updated 6 ಡಿಸೆಂಬರ್ 2025, 13:08 IST
<div class="paragraphs"><p>ಟಿ.ಎನ್ ಸೀತಾರಾಮ್</p></div>

ಟಿ.ಎನ್ ಸೀತಾರಾಮ್

   

ಕನ್ನಡದ ಖ್ಯಾತ ಚಿತ್ರ ನಿರ್ದೇಶಕ, ನಿರ್ಮಾಪಕ, ನಟ ಟಿ. ಎನ್‌. ಸೀತಾರಾಮ್ ಇಂದು (ಶನಿವಾರ) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಾದಂಬರಿ, ನಾಟಕ ಹಾಗೂ ಕಿರುತೆರೆ ಲೋಕದಲ್ಲಿ ಸಕ್ರಿಯವಾಗಿರುವ ಇವರು ರಂಗಭೂಮಿಯಲ್ಲೂ ಹಲವು ನಾಟಕಗಳನ್ನು ರಚಿಸಿ, ನಿರ್ಮಾಣ ಮಾಡಿ ಪ್ರಖ್ಯಾತಿ ಪಡೆದುಕೊಂಡಿದ್ದಾರೆ.

ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಟಿ.ಎನ್‌. ಸೀತಾರಾಮ್ ಅವರು ‘ಮಾಯಾಮೃಗ’, ‘ಮನ್ವಂತರ’, ‘ಮುಕ್ತ ಮುಕ್ತ’, ‘ಮಗಳು ಜಾನಕಿ’ ಸೇರಿದಂತೆ ಸೂಪರ್ ಹಿಟ್‌ ಧಾರಾವಾಹಿಗಳನ್ನು ಕೊಟ್ಟು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂದು ಟಿ. ಎನ್‌. ಸೀತಾರಾಮ್ ಹುಟ್ಟುಹಬ್ಬದ ನಿಮಿತ್ತ ‘ಪ್ರಜಾವಾಣಿ’ ಡಿಜಿಟಲ್ ಅವರನ್ನು ಸಂಪರ್ಕಿಸಿತು. ‘ಪ್ರಜಾವಾಣಿ’ ಡಿಜಿಟಲ್ ಜೊತೆಗೆ ಟಿ.ಎನ್.ಸೀತಾರಾಮ್ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ADVERTISEMENT

ಒಂದಷ್ಟು ಪಾಟೀಸವಾಲು ಹಾಕ್ತೀನಿ ಸರ್, ಭಗವದ್ಗೀತೆ ಮೇಲೆ ಕೈಯಿಟ್ಟು’ ಸತ್ಯವನ್ನೇ ಹೇಳುತ್ತೀನಿ, ಸತ್ಯವನ್ನಲ್ಲದೇ ಬೇರೇನನ್ನೂ ಹೇಳೋದಿಲ್ಲ‘ ಅಂತ ಪ್ರಮಾಣ ಮಾಡಿ ಉತ್ತರ ಕೊಡ್ಬೇಕು. ಓಕೆನಾ ಸರ್? ನಿಮ್ಮೊಳಗಿನ ಸಿಎಸ್‌ಪಿ ಸಾಹೇಬ್ರ ಬುದ್ಧಿವಂತಿಕೆಯನ್ನು ಇಲ್ಲಿ ಪ್ರಯೋಗಿಸಿಕೂಡದು ಸರ್.

ಜಡ್ಜ್ ಮೆಂಟೇ ಕೊಟ್ಟಾಗೊಯ್ತಲ್ಲಮ್ಮಾ ನೀವು. ಇನ್ನೇನು ಮಾಡೋಕಾಗುತ್ತೆ. ಕೇಳಿ. ಗೊತ್ತಿದ್ದಷ್ಟು ಹೇಳ್ತೀನಿ.

ಟಿ. ಎನ್‌. ಸೀತಾರಾಮ್ ಅವರ ವಯಸ್ಸು?

ನಿಜವಾದ ವಯಸ್ಸು 75 ಪ್ಲಸ್. ಯುಂಗ್‌ ಆಗಿ ಕಾಣೋಕೆ ಸರ್ಕಸ್ ಇದ್ದೇ ಇದೆ. ಅದರಲ್ಲಿ ಸ್ವಲ್ಪ ಸಕ್ಸಸ್ ಕೂಡ ಆಗಿದ್ದೀನಿ. ಹೇರ್ ಡ್ರೈ ಹಾಕಿರೋದಕ್ಕೆ ಯಂಗ್ ಆಗಿ ಕಾಣ್ತಾ ಇದ್ದೀನಿ. ಹಾಗಂತ ಇದನ್ನೆಲ್ಲ ಪ್ರಕಟಿಸಿ ನನ್ನ ಯೌವನದ (?) ಗುಟ್ಟನ್ನು ಬೇರೆಯವರಿಗೆ ಹೇಳ್ಬೇಡಿ.

ನೀವು ಸ್ಕ್ರೀನ್‌ನಲ್ಲಿ ಕಾಣುವಂತೆ, ಕಾಲೇಜು ಲೈಫಲೂ (ಅಂದ್ರೆ ಟೀನೇಜಲ್ಲಿ) ಇಷ್ಟೇ ಸೀರಿಯಸ್ಸಾಗಿ ಇದ್ದೀರಾ?

ಹೂಂ. ಸೀರಿಯಸ್ಸಾಗಿದ್ದೆ ಅಂತ ಹೇಳಿದ್ರೆ ಪ್ರಮಾಣ ಮಾಡಿದ ಭಗವದ್ಗೀತೆಗೆ ಅಪಚಾರ ಆಗಲ್ವಾ? ಸತ್ಯ ಹೇಳಿದ್ರೆ ನೀವು ಕಾಲೆಳಿತೀರಾ. ಒಳ್ಳೆ ಧರ್ಮ ಸಂಕಟಾನಪ್ಪಾ.. ಅರ್ಧ ಸತ್ಯ ಹೇಳ್ತೀನಿ. ಬಂಕ್‌ ಹಾಕ್ತಾ ಇದ್ದೆ. ಆದ್ರೆ, ಚೆನ್ನಾಗಿ ಓದ್ತಾನೂ ಇದ್ದೆ. ಓದಬೇಕಾದರೆ ಸೀರಿಯಸ್ಸು. ಬೇರೆ ಟೈಮಲ್ಲಿ.. ನೀವು ಅಂದ್ಕೊಂಡ ಹಾಗೇ ಇದ್ದೆ!

ನಿಜ ಹೇಳಿ, ಲೈನ್ ಹಾಕೋದು, ಕಾರಿಡಾರ್ ತಿರೊಗೋದು, ಯಾರಿಗಾದ್ರೂ ಪ್ರಪೋಸ್ ಮಾಡಿದ್ದು?

ಇಲ್ಲಪ್ಪಾ. ಆ ಥರ ಎಲ್ಲ ಏನೂ ಮಾಡಿಲ್ಲ. ಇದು ಮಾತ್ರ ಸತ್ಯ. ಒಂದಷ್ಟು ಹುಡ್ಗೀರಿಗೆ ಕ್ರಶ್ ಆಗಿದ್ನಂತೆ.. ನನಗಂತೂ ಇದ್ಯಾವುದೂ ಇರ್ಲಿಲ್ಲಪ್ಪ. ಸತ್ಯವಾಗ್ಲೂ.. ಏನ್ರೀ ನೀವು ಬುಡಕ್ಕೇ ತಂದಿಡ್ತೀರಾ.. ಲಾ ಓದಿದೀರಾ?

ಹೋಗ್ಲಿ ಸೀರಿಯಸ್ಸಾಗಿ ಓದ್ತಿದ್ದೆ ಅಂದ್ರಿ, ನಿಮಗೆ ಇಷ್ಟವಾದ ಸಬ್ಜೆಕ್ಟ್ ಯಾವುದಾಗಿತ್ತು?

ಕೆಮಿಸ್ಟ್ರಿ ನನಗೆ ತುಂಬಾ ಇಷ್ಟವಾದ ವಿಷಯ. ಅದರ ಜೊತೆಗೆ ಸಾಹಿತ್ಯದ ಮೇಲೆ ತುಂಬಾ ಆಸಕ್ತಿ ಇತ್ತು.

ಓ ಅದ್ಕೇ ನಿಮ್ಮ ಧಾರಾವಾಹಿಲೂ ಸಾಹಿತ್ಯ–ಕಾನೂನಿನ ನಿಮ್ಮ ಕೆಮೆಸ್ಟ್ರೀ ಚೆನ್ನಾಗಿ ವರ್ಕ್ ಆಗ್ತೀರೋದಾ?

ಸತ್ಯ ಹೇಳ್ಳಾ? ಮೊದಲು ಈ ಕೆಮೆಸ್ಟರೀ ಗಿಮಿಸ್ಟ್ರೀ ಅಂತ ಇರಲಿಲ್ಲ. ಆದರೆ ನೋಡುಗರು ಇದನ್ನು ಮೆಚ್ಚಿದ ಮೇಲೆ ಅದೇ ಮುಂದುವರೀತು. ಈಗ ಸೀತಾರಾಮ್ ಕೆಮ್ಮು–ಹಿಸ್ಟರಿ ಸೇರಿ ಸಕ್ಸಸ್ ಆಗಿದೆರೀ.

ನೆಚ್ಚಿನ ತಿಂಡಿ ಯಾವುದು?

ಒತ್ತಿ ಒತ್ತಿ ಹೇಳ್ತೀನಿ ಕೇಳಿ, ನನಗೆ ಒತ್ತು ಶಾವಿಗೆ ಅಂದ್ರೆ ಇಷ್ಟ. ಚಿಕ್ಕವನಾಗಿದ್ದಾಗ ಹಾಲು ಇಷ್ಟ ಇತ್ತೋ ಇಲ್ವೋ, ಆದರೆ ಈಗಲೂ ಹಾಲುಬಾಯಿ ಅಂದ್ಬಂತೂ ಮುಗಿದ್ಹೋಯ್ತು.. ಬೇರೇನೂ ಬೇಡ.

ಕನ್ನಡಿಗರು ನಿಮ್ಮ ಎಲ್ಲ ಧಾರಾವಾಹಿ ಮೆಚ್ಚಿಕೊಂಡಿದ್ದಾರೆ. ಆದ್ರೆ ನಿಮಗೆ ನಿಮ್ಮ ಯಾವ ಧಾರಾವಾಹಿ ಇಷ್ಟ?

ಅದೇನೋ ಹೇಳ್ತಾರಲ್ಲ, ಹೆತ್ತವರಿಗೆ ಹೆಗ್ಗಣ ಮುದ್ದು ಅಂತ. ನಾನು ಎಲ್ಲವನ್ನೂ ಇಷ್ಟ ಪಟ್ಟೇ ಮಾಡಿದ್ದು. ಆದ್ರೂ ನೀವು ಕೇಳಿದ್ದಕ್ಕೆ ಹೇಳ್ತೀನಿ, ಮಕ್ಕಳಲ್ಲಿ ಹಿರಿಮಗಳು–ಕಿರಿಮಗ ಅಂತೆಲ್ಲ ಇರುತ್ತಲ್ಲಾ, ಹಾಗೆ ನನ್ನ ಧಾರಾವಾಹಿಗಳಲ್ಲಿ ‘ಮನ್ವಂತರ’ ನನಗಿಷ್ಟ.

ಹೌದು, ನೀವು ಬರೀ ಲಾಯರ್‌ ಪಾತ್ರನೇ ಮಾಡೋದು ಏಕೆ? ಕೋರ್ಟ್ ಅಲ್ಲಿ ಪ್ರಾಕ್ಟೀಸ್ ಮಾಡಕ್ಕೆ ಆಗ್ತಿಲ್ಲ ಅಂತ ಟೀವಿ ಪರದೇ ಮೇಲೆ ಮಾಡ್ತೀರಾ?

ನೋಡಿಮಾ.. ನಟನೆ ಬೇರೆ ಅಲ್ಲ, ಜೀವನ ಬೇರೆ ಅಲ್ಲ. ಬದುಕಿನ ಪಾತ್ರಗಳನ್ನೇ ನಾವು ಸ್ಕ್ರೀನ್ ಮೇಲೆ ತೋರಿಸೊದು. ನೀವೇ ಹೇಳಿದ್ರಲ್ವಾ, ನಾನು ಲಾಯರ್. ಅದನ್ನೇ ಇಲ್ಲೂ ಮಾಡಿದ್ದೀನಿ. ಬೇರೆದರ ಅನುಭವ ಇಲ್ದೇ ಇರೋದ್ರಿಂದ, ಅಂತ ಪಾತ್ರಗಳಲ್ಲಿ ನಟಿಸುವುದಕ್ಕೆ ಬರೋದಿಲ್ಲ. ಹಾಗಾಗಿ ಕೇವಲ ಲಾಯರ್‌ ಪಾತ್ರ ಮಾಡುತ್ತೇನೆ.

ನಿಮ್ಮನ್ನು ಅಷ್ಟೊಂದು ಪ್ರೀತಿ ಮಾಡೋ ನಿಮ್ಮ ‘ಮಗಳು ಜಾನಕಿ’ ಮುನಿಸಿಕೊಂಡು ಹೋಗಿದ್ಯಾಕೆ? ನಿಮ್ಮ ಅವಳ ನಡುವೆ ಅಂಥದ್ದೇನು ನಡೀತು? ಸತ್ಯ ಹೇಳಿ!

ಇದೊಳ್ಳೇ ಕಥೆ ಆಯ್ತಲ್ಲಾ.. ಮೊದ್ಲೇ ಪ್ರಮಾಣ ಮಾಡಿಸ್ಕೊಂಡು ಮತ್ತೆ ಮತ್ತೆ ಸತ್ಯ ಹೇಳಿ ಅಂತೀರಲ್ಲಮ್ಮಾ.. ಸತ್ಯನೇ ಹೇಳ್ಳೀನಿ ಕೇಳಿ. ಅವಳಿಗೆ ಕರೋನಾ ಕಾಡಿ ಬಿಡ್ತು. ಅದು ಬಿಟ್ಟು ಅಂಥದ್ದೇನೂ ಕಾರಣ ನೀವಂದುಕೊಂಡ ಹಾಗೆ ಇಲ್ಲ. ಜೋಕ್ಸ್ ಅಪಾರ್ಟ್, ಕೋವಿಡ್ ಕಾರಣದಿಂದ ಎಲ್ಲ ಮಾದ್ಯಮಗಳಿಗೆ ಸಮಸ್ಯೆ ಆದಂತೆ, ಇಲ್ಲೂ ಆಗಿ ‘ಮಗಳು ಜಾನಕಿ’ ಧಾರಾವಾಹಿ ಮುಗಿಸಬೇಕಾಗಿ ಬಂತು. ಮತ್ತೆಲ್ಲಾದ್ರೂ, ಮತ್ತೊಂದು ಅವಕಾಶ ಸಿಕ್ಕರೆ ಖಂಡಿತವಾಗಿಯೂ ತೆರೆ ಮೇಲೆ ಜಾನಕಿಯನ್ನು ತರ್ತೇನೆ.

ಪಾಟೀ ಸವಾಲು ಸಿಕ್ಕಾಪಟ್ಟೆ ಇದೆ, ನಿಮ್ಮ ಬರ್ತ್ ಡೇ ಇವತ್ತು. ಎಲ್ಲವನ್ನೂ ಇವತ್ತೇ ಕೇಳಿ ನಿಮಗೆ ನೀರಿಳಿಸೋದಕ್ಕೆ ನನಗೆ ಇಷ್ಟ ಇಲ್ಲ, ಪಾಪ. ಸೋ.. ಮುಂದಿನ ಹಿಯರಿಂಗ್‌ಗೆ ತಪ್ಪದೇ ಹಾಜರಾಗಬೇಕು.. ಎಂಬ ಷರತ್ತಿನೊಂದಿಗೆ ಇಂಟ್ರವ್ಯೂ ಮುಗಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.