ADVERTISEMENT

ನಟ ವಿಜಯ್‌ ಜನ್ಮದಿನಕ್ಕೆ ‘ಮಾಸ್ಟರ್‌’ ಪೋಸ್ಟರ್‌ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 7:45 IST
Last Updated 23 ಜೂನ್ 2020, 7:45 IST
‘ಮಾಸ್ಟರ್’ ವಿಶೇಷ ಪೋಸ್ಟರ್‌ 
‘ಮಾಸ್ಟರ್’ ವಿಶೇಷ ಪೋಸ್ಟರ್‌    

ಪ್ರತಿ ವರ್ಷ ಅದ್ಧೂರಿಯಾಗಿ ನಡೆಯುತ್ತಿದ್ದ ತಮಿಳು ನಟ ವಿಜಯ್‌ ಜನ್ಮದಿನಾಚರಣೆ, ‘ಕೊರೊನಾ‘ ಕಾರಣದಿಂದಾಗಿ ಈ ವರ್ಷ ಸರಳವಾಗಿ ನಡೆದಿದೆ. ಆದರೆ, ‘ಮಾಸ್ಟರ್‌‘ ಚಿತ್ರತಂಡ ನಟ ವಿಜಯ್‌ ಅವರ ವಿಶೇಷ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಅವರಿಗೆ ವಿಶೇಷ ಉಡುಗೊರೆ ನೀಡಿದೆ. ಈ ಚಿತ್ರದಲ್ಲಿ ದಳಪತಿ ವಿಜಯ್‌ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರತಿ ವರ್ಷ ಅಭಿಮಾನಿಗಳು ವಿಜಯ್‌ ಜನ್ಮದಿನವನ್ನು ಭರ್ಜರಿಯಾಗಿ ಆಚರಿಸುತ್ತಿದ್ದರು. ವಿಜಯ್‌ ಅಭಿನಯದ ಚಿತ್ರಗಳನ್ನು ಮರು ಬಿಡುಗಡೆ ಮಾಡಿ ಸಂಭ್ರಮಿಸುತ್ತಿದ್ದರು. ರಕ್ತದಾನ, ಅನ್ನಸಂತರ್ಪಣೆ, ಪುಸ್ತಕ ವಿತರಣೆಯಂತಹ ಸಾಮಾಜಿಕ ಕಾರ್ಯಗಳ ಮೂಲಕ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದರು.

ಒಂದು ಕಡೆ ಕೊರೊನಾ ಕಾರಣ, ಇನ್ನೊಂದು ಕಡೆ ಸ್ವತಃ ವಿಜಯ್‌ ಅವರೇ ‘ಈ ಬಾರಿ ಸಂಭ್ರಮಾಚರಣೆ ಬೇಡ‘ ಎಂದು ಮನವಿ ಮಾಡಿದ್ದ ಕಾರಣ, ಸರಳವಾಗಿ ಹುಟ್ಟು ಹಬ್ಬ ಆಚರಿಸಿದ್ದಾರೆ ಅಭಿಮಾನಿಗಳು. ‘ಮಾಸ್ಟರ್‌‘ ಚಿತ್ರ ತಂಡ ಮಾತ್ರ ವಿಜಯ್‌ಗೆ ಜನ್ಮದಿನದ ನೆನಪಿಗಾಗಿ ವಿಶೇಷ ಪೋಸ್ಟರ್‌ ಅನ್ನು ಉಡುಗೊರೆಯಾಗಿ ನೀಡಿದೆ.

ADVERTISEMENT

ಲೋಕೇಶ್‌ ಕನಕರಾಜ್‌ ನಿರ್ದೇಶನದ ‘ಮಾಸ್ಟರ್‌’ ಚಿತ್ರದಲ್ಲಿ ವಿಜಯ್‌ ಕಾಲೇಜು‌ ಪ್ರಾಧ್ಯಾಪಕರಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್‌ ಸೇತುಪತಿ ವಿಲನ್‌ ಪಾತ್ರದಲ್ಲಿ ಖದರ್ ತೋರಿದ್ದಾರೆ. ‘ಪೆಟ್ಟಾ’ ಚಿತ್ರದಲ್ಲಿ ರಜನಿಕಾಂತ್ ಜತೆ ನಾಯಕಿಯಾಗಿ ನಟಿಸಿದ್ದ ಮಾಳವಿಕಾ ಮೋಹನನ್ ಈ ಚಿತ್ರದಲ್ಲಿ ವಿಜಯ್‌ಗೆ ಸಾಥ್‌ ನೀಡಲಿದ್ದಾರೆ.

ತಮಿಳಿನ ಯುವ ಸ್ಟಾರ್‌ ನಿರ್ದೇಶಕ ಅಟ್ಲೀ ನಿರ್ದೇಶನದ ಬ್ಲ್ಯಾಕ್‌ ಬಸ್ಟರ್‌ ‘ಬಿಗಿಲ್‌’ ಚಿತ್ರದ ನಂತರ ವಿಜಯ್ ನಟಿಸುತ್ತಿರುವ ‘ಮಾಸ್ಟರ್’. ಹಾಗಾಗಿ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. 2019ರ ಯಶಸ್ವಿ ಚಿತ್ರ ‘ಬಿಗಿಲ್’, ₹290 ಕೋಟಿ ಬಾಚಿಕೊಂಡಿತ್ತು. ಇದು ಕಳೆದ ವರ್ಷ ಅತ್ಯಂತ ಹೆಚ್ಚು ಹಣ ಗಳಿಸಿದ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಜಯ್‌ ಮುಂದಿನ ಚಿತ್ರವನ್ನು‌ ತಮಿಳಿನ ಖ್ಯಾತ ನಿರ್ದೇಶಕ ಎ.ಆರ್‌. ಮುರುಗದಾಸ್‌ ಅಥವಾ ನಿರ್ದೇಶಕಿ ಸುಧಾ ಕೊಂಗರಾ ನಿರ್ದೇಶಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಚಿತ್ರಕ್ಕಿನ್ನೂ ಹೆಸರು ಇಟ್ಟಿಲ್ಲ. ಹಾಗೇ ಈ ಸಿನಿಮಾವನ್ನು ಯಾರು ನಿರ್ದೇಶಿಸುತ್ತಾರೆ ಎಂಬುದಿನ್ನೂ ಅಂತಿಮವಾಗಿಲ್ಲ.

ಚಿತ್ರಕ್ಕೆ ಸನ್‌ ಪಿಕ್ಚರ್ಸ್‌ ಬಂಡವಾಳ ಹೂಡಿದ್ದು, ಈಗಾಗಲೇ ವಿಜಯ್‌ಗೆ‌ ₹50 ಕೋಟಿ ಮುಂಗಡ ಹಣ ನೀಡಿ, ಡೇಟ್ಸ್‌ ಕಾಯ್ದಿರಿಸಿದೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಇದೇ ತಿಂಗಳು ಚಿತ್ರದ ಬಗ್ಗೆಅಧಿಕೃತ ಮಾಹಿತಿ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.