ADVERTISEMENT

ಚಂದನವನದ ‘ಟೆಲಿಗ್ರಾಂ’ ಸಮಸ್ಯೆ

ವಿಜಯ್ ಜೋಷಿ
Published 9 ಫೆಬ್ರುವರಿ 2020, 19:30 IST
Last Updated 9 ಫೆಬ್ರುವರಿ 2020, 19:30 IST
ಮಂಸೋರೆ
ಮಂಸೋರೆ    

ನಟ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಬಗ್ಗೆ ಅವರ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. 2019ರ ಸೆಪ್ಟೆಂಬರ್‌ 12ರಂದು ತೆರೆಗೆ ಬಂದ ಈ ಬಹುಭಾಷಾ ಚಿತ್ರವು ಜನಪ್ರಿಯ ಆ್ಯಂಡ್ರಾಯ್ಡ್‌ ಆ್ಯಪ್‌ ಟೆಲಿಗ್ರಾಂ ಹಾಗೂ ಅಂತರ್ಜಾಲದ ಕೆಲವು ತಾಣಗಳ ಮೂಲಕ ಸೋರಿಕೆ ಆಯಿತು. ಇದರಿಂದಾಗಿ ನಿರ್ಮಾಪಕರು ನಷ್ಟ ಅನುಭವಿಸಬೇಕಾಯಿತು.

ಈ ವಿಚಾರವಾಗಿ ‘ಪೈಲ್ವಾನ್’ ನಿರ್ಮಾಪಕಿ ಸ್ವಪ್ನಾ ಕೃಷ್ಣ ಪೊಲೀಸರಿಗೆ ದೂರು ನೀಡಿದರು. ಆದರೆ, ಟೆಲಿಗ್ರಾಂ ಆ್ಯಪ್‌ ಮೂಲಕ ಸಿನಿಮಾ ಸೋರಿಕೆ ಆಗುವುದು ಅಲ್ಲಿಗೇ ನಿಲ್ಲಲಿಲ್ಲ. ಒಟಿಟಿ (ಸ್ಮಾರ್ಟ್‌ಫೋನ್‌ ಮೂಲಕ ಮನರಂಜನಾ ಕಾರ್ಯಕ್ರಮ ಒದಗಿಸುವುದು) ವೇದಿಕೆಗಳ ಮೂಲಕ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮಗಳೂ ಈ ಆ್ಯಪ್‌ ಮೂಲಕ ಸೋರಿಕೆಯಾಗುತ್ತಿವೆ.

‘ನಾನು ನಿರ್ದೇಶಿಸಿದ ನಾತಿಚರಾಮಿ ಚಿತ್ರವು ಒಟಿಟಿ ವೇದಿಕೆ ಮೂಲಕ ಪ್ರಸಾರವಾದ ಮೂರೇ ಗಂಟೆಗಳಲ್ಲಿ ಟೆಲಿಗ್ರಾಂ ಆ್ಯಪ್‌ ಮೂಲಕ ಸೋರಿಕೆ ಆಯಿತು. ಸಿನಿಮಾ ಹಾಗೂ ಇತರ ಮನರಂಜನಾ ಕಾರ್ಯಕ್ರಮಗಳು ಈ ಆ್ಯಪ್ ಮೂಲಕ ಸೋರಿಕೆ ಆಗುತ್ತಿರುವುದನ್ನು ತಡೆಯಲು ಸರ್ಕಾರವೇ ಏನಾದರೂ ಕ್ರಮ ಕೈಗೊಳ್ಳಬೇಕು. ಈ ಕಾರ್ಯದಲ್ಲಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳೂ ಕೈಜೋಡಿಸಬಹುದು’ ಎನ್ನುತ್ತಾರೆ ನಿರ್ದೇಶಕ ಮಂಸೋರೆ.

ADVERTISEMENT

ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳ ಡಿಜಿಟಲ್ ಹಕ್ಕುಗಳನ್ನು ಖರೀದಿ ಮಾಡುತ್ತಿರುವ ಒಟಿಟಿ ವೇದಿಕೆಗಳು, ಆ ಕಾರ್ಯಕ್ರಮಗಳನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬುದರ ಆಧಾರದಲ್ಲಿ ಆದಾಯದ ಪಾಲು ಹಂಚಿಕೊಳ್ಳುವ ವ್ಯವಸ್ಥೆಯನ್ನು ತರುತ್ತಿವೆ. ಹೀಗಿರುವಾಗ ಇಂತಹ ಆ್ಯಪ್‌ಗಳ ಮೂಲಕ ಸಿನಿಮಾಗಳು, ವೆಬ್ ಸರಣಿಗಳು ಸೋರಿಕೆ ಆಗುವುದನ್ನು ತಡೆಯದಿದ್ದರೆ ಆದಾಯದ ಮೂಲಕ್ಕೇ ಏಟು ಬೀಳುತ್ತದೆ ಎನ್ನುವ ಆತಂಕವನ್ನು ಮಂಸೋರೆ ವ್ಯಕ್ತಪಡಿಸುತ್ತಾರೆ.

ಟೆಲಿಗ್ರಾಂ ಆ್ಯಪ್ ಮೂಲಕ 1.5 ಜಿ.ಬಿ. ಗಾತ್ರದ ಕಡತಗಳನ್ನೂ (ವಿಡಿಯೊ, ಆಡಿಯೊ, ಫೋಟೊ ಇತ್ಯಾದಿ) ಸುರಕ್ಷಿತವಾಗಿ ಇನ್ನೊಬ್ಬರಿಗೆ ರವಾನಿಸಬಹುದು. ಅಲ್ಲದೆ, ಖಾಸಗಿತನ ಹಾಗೂ ಗೋಪ್ಯತೆ ಕಾಪಾಡಿಕೊಳ್ಳುವ ವಿಚಾರದಲ್ಲಿ ಈ ಆ್ಯಪ್ ಮುಂದಿದೆ ಎಂದು ಐ.ಟಿ. ತಜ್ಞರು ಹೇಳುತ್ತಾರೆ. ಇದು ಕೂಡ ಸಿನಿಮಾಗಳ ನಕಲು ಪ್ರತಿಗಳನ್ನು ಕಳುಹಿಸುವುದಕ್ಕೆ ನೆರವಾಗುತ್ತಿದೆ.

‘ಈ ಆ್ಯಪ್ ಮೂಲಕ ಸಿನಿಮಾದ ನಕಲು ಪ್ರತಿಗಳು ಹಂಚಿಕೆ ಆಗುವುದನ್ನು ತಡೆಯಲು ಸಾಧ್ಯವೇ ಇಲ್ಲ. ನಾನು ನಿರ್ದೇಶಿಸಿದ ಬಜಾರ್ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಮಾರನೆಯ ದಿನವೇ ಟೆಲಿಗ್ರಾಂ ಆ್ಯಪ್‌ನ‌ ಮೂಲಕ ಸೋರಿಕೆ ಆಗಿತ್ತು. ಯೂಟ್ಯೂಬ್‌ ಸೇರಿದಂತೆ ಇತರ ಕೆಲವು ವೆಬ್‌ಸೈಟ್‌ಗಳಲ್ಲಿ ಕೂಡ ಇದು ಸೋರಿಕೆ ಆಗಿತ್ತು. ಆ ವೆಬ್‌ಸೈಟ್‌ಗಳ ಮೂಲಕ ಪ್ರಸಾರವಾಗುವುದನ್ನು ತಡೆಯಲು ನಮಗೆ ಸಾಧ್ಯವಾಯಿತು. ಆದರೆ, ಟೆಲಿಗ್ರಾಂ ಆ್ಯಪ್‌ ಮೂಲಕ ಇದು ಒಬ್ಬರಿಂದ ಇನ್ನೊಬ್ಬರಿಗೆ ತಲುಪುವುದನ್ನು ತಡೆಯಲು ನಮ್ಮಿಂದ ಸಾಧ್ಯವಾಗಲೇ ಇಲ್ಲ’ ಎಂದು ಹೇಳುತ್ತಾರೆ ನಿರ್ದೇಶಕ ಸಿಂಪಲ್ ಸುನಿ.

‘ಈ ವಿಚಾರದಲ್ಲಿ ಕೇಂದ್ರ ಸರ್ಕಾರವೇ ಸಿನಿಮಾ ರಂಗದವರ ನೆರವಿಗೆ ಬರಬೇಕು’ ಎನ್ನುವುದು ಸುನಿ ಅವರ ಅಭಿಪ್ರಾಯ. ಪೈರೆಸಿ ತಡೆಯಲು ಜನರೇ ಮುಂದಾಗಬೇಕು ಎಂಬುದು ಮಂಸೋರೆ ಅವರ ಮಾತು.

ನಷ್ಟದ ಅಂದಾಜು ಇಲ್ಲ
'ಹೊಸ ಸಿನಿಮಾಗಳು ಟೆಲಿಗ್ರಾಂ ಆfಯಪ್ ಮೂಲಕ ಸೋರಿಕೆ ಆಗುವುದರಿಂದ ನಿರ್ಮಾಪಕರಿಗೆ ಆಗುವ ನಷ್ಟ ನಿರ್ದಿಷ್ಟವಾಗಿ ಎಷ್ಟು ಎಂಬುದನ್ನು ಅಂದಾಜಿಸಿರುವ ಉದಾಹರಣೆ ನನ್ನ ಗಮನಕ್ಕೆ ಬಂದಿಲ್ಲ. ಆದರೆ ಈ ರೀತಿ ಸೋರಿಕೆ ಆಗುವುದರಿಂದ ನಿರ್ಮಾಪಕರಿಗೆ ನಷ್ಟ ಖಚಿತ ಎಂಬುದರಲ್ಲಿ ಎರಡು ಮಾತಿಲ್ಲ' ಎಂದರು ನಿರ್ಮಾಪಕರೂ ಆಗಿರುವ ರಿಷಬ್ ಶೆಟ್ಟಿ.

‘ಏನೂ ಮಾಡಲು ಆಗುವುದಿಲ್ಲ’

ಸಿನಿಮಾದ ನಕಲು ಪ್ರತಿಗಳನ್ನು ವೆಬ್‌ಸೈಟ್‌ ಮೂಲಕ ಯಾರು ಹಂಚಿಕೆ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಬಹುದು. ಆದರೆ, ಟೆಲಿಗ್ರಾಂ ಆ್ಯಪ್‌ ಮೂಲಕ ಯಾರು ಹಂಚಿಕೆ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಲು ಆಗದು ಎನ್ನುತ್ತಾರೆ ನಿರ್ದೇಶಕ ಹಾಗೂ ಸಾಫ್ಟ್‌ವೇರ್‌ ತಂತ್ರಜ್ಞ ಗಂಗಾಧರ ಸಾಲಿಮಠ.

‘ಟೆಲಿಗ್ರಾಂ ಆ್ಯಪ್‌ ಮೂಲಕ ಸಿನಿಮಾಗಳನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಕಳುಹಿಸಲಾಗುತ್ತದೆ. ಪ್ರತಿ ವ್ಯಕ್ತಿಯ ಮೊಬೈಲ್‌ ಮೂಲಕ ಏನೇನು ರವಾನೆ ಆಗುತ್ತದೆ ಎಂಬುದರ ಮೇಲೆ ನಿಗಾ ಇಡುವುದು ಆಗದ ಕೆಲಸ’ ಎನ್ನುವುದು ಅವರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.