ADVERTISEMENT

ನಟ ಜಯ ಪ್ರಕಾಶ್ ರೆಡ್ಡಿ ನಿಧನಕ್ಕೆ ತೆಲುಗಿನಲ್ಲೇ ಸಂತಾಪ ಸೂಚಿಸಿದ ಅಮಿತ್ ಶಾ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 15:24 IST
Last Updated 8 ಸೆಪ್ಟೆಂಬರ್ 2020, 15:24 IST
ಅಮಿತ್ ಶಾ ಮತ್ತು ನಟ ಜಯ ಪ್ರಕಾಶ್‌ ರೆಡ್ಡಿ
ಅಮಿತ್ ಶಾ ಮತ್ತು ನಟ ಜಯ ಪ್ರಕಾಶ್‌ ರೆಡ್ಡಿ   

ಅಮರಾವತಿ: ತೆಲುಗು ನಟ ಜಯ ಪ್ರಕಾಶ್‌ ರೆಡ್ಡಿ (74) ಅವರು ಮಂಗಳವಾರ ಬೆಳಿಗ್ಗೆ ಗುಂಟೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.

ವಿಶೇಷ ಎಂದರೆ ಶಾ ಅವರು ತೆಲುಗಿನಲ್ಲೇ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಪ್ರತಿಭಾವಂತ ತೆಲುಗು ನಟ ಜಯಪ್ರಕಾಶ್ ರೆಡ್ಡಿ ಅವರ ಅಕಾಲಿಕ ನಿಧನವು ನನಗೆ ತೀವ್ರ ದುಃಖವನ್ನು ನೀಡಿದೆ. ವಿಶಿಷ್ಟ ಪಾತ್ರಗಳೊಂದಿಗೆ ತಮ್ಮ ಪರಿಶ್ರಮದಿಂದ ತೆಲುಗು ಚಿತ್ರರಂಗಕ್ಕೆ ಅವರು ಮಾಡಿದ ಸೇವೆ ಸ್ಮರಣೀಯ. ಅವರ ಮರಣದಿಂದಾಗಿ ತೆಲುಗು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ದೇವರು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ADVERTISEMENT

ನಟನ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ತೆಲುಗು ಚಿತ್ರರಂಗದಹಲವು ನಟ–ನಟಿಯರು ಸಂತಾಪ ಸೂಚಿಸಿದ್ದಾರೆ.

ಜಯ ಪ್ರಕಾಶ್‌ ರೆಡ್ಡಿ ಖಳನಾಯಕ ಮತ್ತು ಹಾಸ್ಯ ಪಾತ್ರಗಳಿಗೆ ಹೆಸರುವಾಸಿಯಾಗಿದ್ದರು. ಅವರ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ‘ಸಮರಸಿಂಹ ರೆಡ್ಡಿ, ಪ್ರೇಮಿಂಚುಕುಂದಮು ರಾ, ನರಸಿಂಹ ನಾಯ್ಡು, ರೆಡಿ, ಕಿಕ್, ಜಯಂ ಮನದೇರಾ, ಜಂಬಾ ಲಕಿಡಿ ಪಂಬಾ’ ಪ್ರಮುಖವಾಗಿವೆ. ಇದೇ ವರ್ಷ ಜನವರಿಯಲ್ಲಿ ಬಿಡುಗಡೆಯಾದ ಮಹೇಶ್ ಬಾಬು ಅಭಿನಯದ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ಜಯಪ್ರಕಾಶ್‌ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.