ADVERTISEMENT

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣ: ಗಂಭೀರ ಪ್ರಶ್ನೆ ಎತ್ತಿದ ಚೇತನ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 9:28 IST
Last Updated 1 ಸೆಪ್ಟೆಂಬರ್ 2020, 9:28 IST
ಚೇತನ್
ಚೇತನ್   

ಸ್ಯಾಂಡಲ್‌ವುಡ್‌ಗೆ ಅಂಡಿಕೊಂಡಿರುವ ಡ್ರಗ್ಸ್ ಮಾಫಿಯಾ ಕಳಂಕ‌ದ ಬಗ್ಗೆ ‘ಆ ದಿನಗಳು’ ಚಿತ್ರ ಖ್ಯಾತಿಯ ನಟ ಚೇತನ್‌ ಧ್ವನಿ ಎತ್ತಿದ್ದಾರೆ. ಡ್ರಗ್ಸ್ ದಂಧೆ ಜತೆಗೆ ಕೆಲವೊಂದಿಷ್ಟು ಗಂಭೀರ ವಿಷಯಗಳ ಬಗ್ಗೆಯೂ ಅವರು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಚೇತನ್‌ ತಮ್ಮ ಫೇಸ್‌ಬುಕ್ ಖಾತೆಯ‌ ಪುಟದಲ್ಲಿ ಹಂಚಿಕೊಂಡಿರುವ ಬರಹವೊಂದು ಈಗ ‌ಚರ್ಚೆಗೆ ಗ್ರಾಸ ಒದಗಿಸಿದೆ. ಚೇತನ್‌ ಅವರನೇರ ನಡೆನುಡಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ, ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಪ್ರಸ್ತುತವಾಗಿ ಎಲ್ಲರ ಗಮನ ಮಾದಕ ವಸ್ತುಗಳನ್ನು ಖಾಸಗಿಯಾಗಿ ಬಳಸುವ ಚಲನಚಿತ್ರರಂಗದ ಸಿಬ್ಬಂದಿ ಮತ್ತು ನಟರನ್ನು ಬಹಿರಂಗಪಡಿಸುವುದರ ಮೇಲಿದೆ. ಕೇವಲ ಹಣಕ್ಕಾಗಿ ಮದ್ಯ (ಸೋಡ), ಗುಟ್ಕಾ/ಪಾನ್ ಮಸಾಲಾ, ಜೂಜು (ರಮ್ಮಿ), ಇನ್ನು ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ‘ಸ್ಟಾರ್ಸ್’ಗಳ ಮೇಲೆ ಬೆರಳು ತೋರಿಸದಿರುವುದು ಮೋಸವಲ್ಲವೇ? ಇವರು ಸಾಮಾಜಿಕ ದುಷ್ಕೃತ್ಯಗಳ ‘ರಾಯಭಾರಿಗಳಲ್ಲವೇ’? ಎಂದು ಚೇತನ್‌ ಕಿಡಿಕಾರಿದ್ದಾರೆ.

ಕನ್ನಡ ಚಿತ್ರರಂಗದಲ್ಲೂ ಡ್ರಗ್ಸ್ ಮಾಫಿಯಾ ಇದೆ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ನೀಡಿದ್ದ ಹೇಳಿಕೆ ಮತ್ತು ಅವರು ಸಿಸಿಬಿಗೆ ಒದಗಿಸಿರುವ ಮಾಹಿತಿಯಿಂದ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ತಳಮಳ ಉಂಟಾಗಿದೆ. ಕೆಲವು ನಟ– ನಟಿಯರು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸುವಾಗ ಇಂದ್ರಜಿತ್‌ ಲಂಕೇಶ್‌ ಎತ್ತಿದ್ದ ಕೆಲವು ಪ್ರಶ್ನೆಗಳ ಕುರಿತು ಈಗಾಗಲೇ ಚಿತ್ರರಂಗದಲ್ಲೂ ಪರ– ವಿರೋಧ ಚರ್ಚೆಗಳು ನಡೆಯುತ್ತಿವೆ.

ಚೇತನ್‌ ಬರಹಕ್ಕೆ ಬೆಂಬಲಿಸಿರುವ ಜಾಲತಾಣಿಗರು, ‘ಹೌದು ನೀವು ಸರಿಯಾದ ಮಾತುಗಳನ್ನೇ ಹೇಳಿದ್ದೀರಿ. ಉತ್ತಮ ಪ್ರಶ್ನೆಯನ್ನೇ ಎತ್ತಿದ್ದೀರಿ.ನಿಷ್ಕಲ್ಮಶ ಚರ್ಚೆಗೆ ನಾಂದಿ ಹಾಡಿದ್ದಿರಿ. ನಮ್ಮನ್ನು ಅಂದರೆ ಚಿತ್ರರಂಗವನ್ನು ನಾವು ವಿಮರ್ಶಿಸಿಕೊಳ್ಳುವ ನಿಮ್ಮ ನಡೆ ಸರ್ವರಿಗೂ ಮಾದರಿ.ಹೌದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಸರಕಿಗೆ ಜಾಹೀರಾತು ನೀಡುವ ನೀತಿಯೇ ಬದಲಾಗಬೇಕು.ಸರಿಯಾಗಿ ಹೇಳಿದ್ರಿ ಮೊದ್ಲು ಆನ್ಲೈನ್ ರಮ್ಮಿ ಮತ್ತು ಜಾಹೀರಾತನ್ನು ನಿಷೇಧಿಸಬೇಕು. ಅದರಿಂದ ಎಷ್ಟೋ ಜನ ದಿನಗೂಲಿ ದುಡ್ಡನ್ನು ಕಳೆದುಕೊಂಡು ಪರದಾಡುತ್ತಿದ್ದಾರೆ’ ಎಂದು ಅಭಿಪ್ರಾಯ ದಾಖಲಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಡ್ರಗ್ಸ್ ದಂಧೆಯ ಪ್ರಕರಣ ಚರ್ಚೆಯ ಮುನ್ನೆಲೆಗೆ ಬಂದಾಗ, ಚೇತನ್‌ ಅವರು ಆ.30ರಂದು ಫೇಸ್‌ಬುಕ್‌ನಲ್ಲಿ ಬರಹವೊಂದನ್ನು ಹಂಚಿಕೊಂಡು, ಇತ್ತೀಚೆಗೆ ಮೃತಪಟ್ಟ ನಟ ಚಿರಂಜೀವಿ ಹೆಸರು ನೇರವಾಗಿ ಉಲ್ಲೇಖಿಸದೆ ಅವರ ಬೆಂಬಲಕ್ಕೆ ನಿಂತಿದ್ದರು.

‘ಸಿಗರೇಟು, ಮದ್ಯ, ಮಾದಕ ಮತ್ತು ಪಾರ್ಟಿಗೆ ಹೋಗುವ ಅಭ್ಯಾಸಗಳು ನನಗಿಲ್ಲ. ಕನ್ನಡ ಚಿತ್ರರಂಗದ ಯಾವುದೇ ಸಾಮಾಜಿಕ ಅಭ್ಯಾಸಗಳ ಬಗ್ಗೆ ಗೊತ್ತಿಲ್ಲದ ನನಗೆ ನಮ್ಮ ನಡುವೆ ಇಲ್ಲದ ವ್ಯಕ್ತಿಯ ಮೇಲೆ ಕೆಸರೆರಚಾಟ ಮಾಡುತ್ತಿರುವುದರ ಬಗ್ಗೆ ದುಃಖವಿದೆ. ನಾವು ಯಾವುದೇ ಆರೋಪಗಳನ್ನು ಹೋರಿಸಿದರೂ ಅದನ್ನು ಸಮರ್ಥಿಸಲು ಅಥವಾ ಉತ್ತರಿಸಲು ಆ ಧ್ವನಿಯೇ ಇಲ್ಲದಿರುವ ಸಮಯದಲ್ಲಿ ಅವರ ಮೇಲೆ ಕೆಸರು ಎರಚುವುದನ್ನು ನಾನು ಖಂಡಿಸುತ್ತೇನೆ’ ಎಂದು ಬರೆದುಕೊಂಡಿದ್ದರು.

ಜತೆಗೆ; ‘ಬೇಕಾಗಿರುವುದು: ಮಾದಕ ವಸ್ತುವಿನ ಜಾಗೃತಿ ಅಭಿಯಾನ, ಪುನರ್ವಸತಿ ಕಾರ್ಯಕ್ರಮಗಳು, ಸರ್ಕಾರದ ಉತ್ತಮ ನೀತಿಗಳು ಮತ್ತು ಸರಿಯಾದ ತನಿಖೆಗಳು. ಬೇಡವಾದದ್ದು: ಮಸಿ ಬಳಿಯುವುದು/ಉದ್ರೇಕಕಾರಿ ಹೇಳಿಕೆಗಳು.’ ಎಂದು ಚೇತನ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.