ADVERTISEMENT

ಭಯೋತ್ಪಾದನೆಯ ಬೆಂಬಲಿಗರಿಂದ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಟೀಕೆ: ಅಗ್ನಿಹೋತ್ರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2022, 7:57 IST
Last Updated 25 ಮಾರ್ಚ್ 2022, 7:57 IST
ದಿ ಕಾಶ್ಮೀರ ಫೈಲ್ಸ್ ಸಿನಿಮಾ ಪೋಸ್ಟರ್
ದಿ ಕಾಶ್ಮೀರ ಫೈಲ್ಸ್ ಸಿನಿಮಾ ಪೋಸ್ಟರ್   

'ದಿ ಕಾಶ್ಮೀರ್ ಫೈಲ್ಸ್‌' ಸಿನಿಮಾ ಕುರಿತು ಟೀಕೆ ಮಾಡುವವರ ವಿರುದ್ಧ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವವರುತಮ್ಮ ಸಿನಿಮಾ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್ ಮತ್ತಿತರರು ನಟಿಸಿರುವ 'ದಿ ಕಾಶ್ಮೀರ್ ಫೈಲ್ಸ್‌' ಸಿನಿಮಾ ಚಿತ್ರಮಂದಿರಗಳಲ್ಲಿ ಈಗಾಗಲೇ₹ 200 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ಕಾಶ್ಮೀರ್ ಫೈಲ್ಸ್‌ ಕೋಮು ಧ್ರುವೀಕರಣ ಮಾಡುತ್ತಿರುವ ಸಿನಿಮಾ ಎಂದು ಕೇಳಿಬರುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅಗ್ನಿಹೋತ್ರಿ, 'ಒಳಿತು ಮತ್ತು ಕೆಡಕುಗಳನ್ನು ಪ್ರತ್ಯೇಕಿಸಿ ನೋಡುತ್ತಿರುವುದುಪ್ರಜಾಪ್ರಭುತ್ವಕ್ಕೆ ಸಲ್ಲಿಸುವ ದೊಡ್ಡ ಸೇವೆಯಾಗಿದೆ.ವಾಸ್ತವವಾಗಿ ನಾನು 'ಧ್ರುವೀಕರಣ' ಪದ ಬಳಸುವುದಿಲ್ಲ. ಮಾನವೀಯತೆಯ ಪರ ಇರುವವರು, ಮಾನವೀಯ ಮೌಲ್ಯಗಳು, ಮಾನವ ಹಕ್ಕುಗಳ ಮೇಲೆ ನಂಬಿಕೆ ಇಟ್ಟಿರುವವರು ಮತ್ತು ಭಯೋತ್ಪಾದನೆಯಿಂದ ಬಂದವರನ್ನು ‍ಪ್ರತ್ಯೇಕಿಸಿ ಎಂದು ಹೇಳಲು ಬಯಸುತ್ತೇನೆ. ಭಯೋತ್ಪಾದನೆಗೆ ಬೌದ್ಧಿಕ, ಸೈದ್ಧಾಂತಿಕ ಬೆಂಬಲ ನೀಡುತ್ತಿರುವ ಸಣ್ಣ ಪ್ರಮಾಣದ ಜನರು ಒಂದು ಕಡೆ ಇದ್ದಾರೆ. ಮಾನವೀಯತೆಯಲ್ಲಿ ನಂಬಿಕೆ ಇಟ್ಟಿರುವ ಬಹಳ ದೊಡ್ಡ ಪ್ರಮಾಣದ ಜನರು ಮತ್ತೊಂದು ಕಡೆಇದ್ದಾರೆ' ಎಂದಿದ್ದಾರೆ.

ADVERTISEMENT

ಮುಂದುವರಿದು,'ಸಿನಿಮಾ ನೋಡಿರುವ 2 ಕೋಟಿ ಜನರಲ್ಲಿ, ಈ ಚಿತ್ರ ಜನರನ್ನು ಧ್ರುವೀಕರಿಸುತ್ತಿದೆ ಎನ್ನುವ ಒಬ್ಬರನ್ನು ನೀವು ಹುಡುಕಲಾರಿರಿ. ಭಯೋತ್ಪಾದನೆ ಸಂಘಟನೆಗಳನ್ನು ಬೆಂಬಲಿಸುವರು ಸಿನಿಮಾವನ್ನು ಟೀಕಿಸುತ್ತಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್‌' ಜನರನ್ನು ವಿಭಜಿಸುತ್ತಿಲ್ಲ ಅಥವಾ ಧೃವೀಕರಿಸುತ್ತಿಲ್ಲ. ಇದು ರಾಮ ಮತ್ತು ರಾವಣರನ್ನು ಪ್ರತ್ಯೇಕಿಸುತ್ತಿದೆ' ಎಂದು ತಮ್ಮ ಸಿನಿಮಾವನ್ನು ಸಮರ್ಥಿಸಿಕೊಂಡಿದ್ದಾರೆ.

ಸಿನಿಮಾ ಟೀಕಿಸುವವರಿಗೆ ಏನು ಹೇಳಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಭಯತ್ಪಾದಕರಿಗೆ ನಾನು ಏನನ್ನಾದರೂ ಏಕೆ ಹೇಳಲಿ' ಎಂದು ಮರುಪ್ರಶ್ನೆ ಹಾಕಿದ್ದಾರೆ.

ದೇಶದಹಲವು ರಾಜಕಾರಣಿಗಳು,ಬಾಲಿವುಡ್‌ನ ಹಲವು ದಿಗ್ಗಜರು ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಮೀರ್‌ ಖಾನ್ ಅವರು, ಪ್ರತಿಯೊಬ್ಬರೂ 'ದಿ ಕಾಶ್ಮೀರ್ ಫೈಲ್ಸ್‌' ವೀಕ್ಷಿಸುವಂತೆ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.