ಹೈದರಾಬಾದ್: ‘ಪುಷ್ಪ–2’ ಚಿತ್ರಪ್ರದರ್ಶನದ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ನೀಡಲಾಗಿರುವ ಜಾಮೀನಿನ ಷರತ್ತುಗಳ ಅನ್ವಯ ನಟ ಅಲ್ಲು ಅರ್ಜುನ್ ಅವರು ಶ್ಯೂರಿಟಿ ಮತ್ತು ಬಾಂಡ್‌ಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಶನಿವಾರ ಸಲ್ಲಿಸಿದರು.
‘ನ್ಯಾಯಾಲಯದ ನಿರ್ದೇಶನದಂತೆ ಅಲ್ಲು ಅರ್ಜುನ್ ನೇರವಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು’ ಎಂದು ಅರ್ಜುನ್ ಪರ ವಕೀಲ ಅಶೋಕ್ ರೆಡ್ಡಿ ತಿಳಿಸಿದರು. ಈ ವೇಳೆ ಅರ್ಜುನ್ ಜೊತೆ ಅವರ ಮಾವ ಚಂದ್ರಶೇಖರ್ ರೆಡ್ಡಿ ಕೂಡ ಇದ್ದರು.
ಎರಡನೇ ಹೆಚ್ಚುವರಿ ಮೆಟ್ರೊಪಾಲಿಟನ್ ಸೆಷನ್ಸ್ ನ್ಯಾಯಾಧೀಶರು ಅಲ್ಲುಗೆ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದರು.
ಎರಡು ತಿಂಗಳು ಅಥವಾ ದೋಷಾರೋಪ ಪಟ್ಟಿ ಸಲ್ಲಿಕೆ ಆಗುವವರೆಗೆ ಪ್ರತಿ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರ ನಡುವೆ ತನಿಖಾಧಿಕಾರಿಯ ಮುಂದೆ ಹಾಜರಾಗುವುದು ಸೇರಿದಂತೆ ಹಲವು ಷರತ್ತುಗಳನ್ನು ನ್ಯಾಯಾಲಯ ಅಲ್ಲು ಅರ್ಜುನ್‌ಗೆ ವಿಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.