ಅಲ್ಲು ಅರ್ಜುನ್
ಹೈದರಾಬಾದ್: ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ– 2’ ಚಿತ್ರದ ದೃಶ್ಯವೊಂದರಲ್ಲಿ ಪೊಲೀಸರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ತೆಲಂಗಾಣ ಕಾಂಗ್ರೆಸ್ ನಾಯಕ ತಿನ್ಮಾರ್ ಮಲ್ಲಣ್ಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ಮೇಡಿಪಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ಚಿತ್ರದ ನಾಯಕ ನಟ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಮತ್ತು ನಿರ್ಮಾಪಕರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಚಿತ್ರದ ಒಂದು ದೃಶ್ಯದಲ್ಲಿ ಪೊಲೀಸ್ ಅಧಿಕಾರಿ ಬನ್ವರ್ ಸಿಂಗ್ ಶೇಖಾವತ್(ಫಹದ್ ಫಾಸಿಲ್) ಈಜುಕೊಳದಲ್ಲಿ ಇರುವಾಗ ಪುಷ್ಪರಾಜ್(ಅಲ್ಲು ಅರ್ಜುನ್) ಮೂತ್ರ ವಿಸರ್ಜನೆ ಮಾಡುತ್ತಾನೆ.
ಈ ದೃಶ್ಯವನ್ನು ಅವಹೇಳನಕಾರಿ ಎಂದು ಕರೆದಿರುವ ಮಲ್ಲಣ್ಣ, ಪೊಲೀಸರಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ. ಅಲ್ಲದೇ ಚಿತ್ರ ನಿರ್ಮಾಪಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸಂಧ್ಯಾ ಚಿತ್ರಮಂದಿರಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆಯೊಬ್ಬಳು ಮೃತಪಟ್ಟು, ಆಕೆಯ ಮಗ ಗಾಯಗೊಂಡಿದ್ದನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.