ADVERTISEMENT

ವಿಕ್ರಮ್‌ ರವಿಚಂದ್ರನ್‌ ಸಂದರ್ಶನ: ‘ಮನೆಯೇ ಪಾಠ ಶಾಲೆ’

ಶರತ್‌ ಹೆಗ್ಡೆ
Published 23 ಜೂನ್ 2022, 19:30 IST
Last Updated 23 ಜೂನ್ 2022, 19:30 IST
ವಿಕ್ರಮ್‌ ರವಿಚಂದ್ರ
ವಿಕ್ರಮ್‌ ರವಿಚಂದ್ರ   

ಅಪ್ಪ, ಕ್ರೇಜಿಸ್ಟಾರ್‌ ರವಿಚಂದ್ರ ವಿ. ಅವರ ಗರಡಿಯಲ್ಲಿ ಪಳಗಿ, ಮನೆಯನ್ನೇ ನಟನೆಯ ಪಾಠಶಾಲೆಯಾಗಿ ಮಾಡಿಕೊಂಡವರು ವಿಕ್ರಮ್‌. ಅವರ ಚೊಚ್ಚಲ ಚಿತ್ರ ‘ತ್ರಿವಿಕ್ರಮ’ ಇಂದು(ಜೂನ್‌ 24) ಬಿಡುಗಡೆಯಾಗುತ್ತಿದ್ದು, ಈ ಹೊತ್ತಿನಲ್ಲಿ ಒಂದಿಷ್ಟು ಮಾತು..

ನಟನೆಯ ಹಿನ್ನೆಲೆ ಏನು?

ಅಪ್ಪನ (ರವಿಚಂದ್ರ ವಿ.) ಜೊತೆಗೆ ‘ಮಲ್ಲ’, ‘ಹಠವಾದಿ’, ‘ಕ್ರೇಜಿ ಸ್ಟಾರ್‌’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದೆ. ಕೆಲಕಾಲ ಅಭಿನಯ ತರಂಗ ನಟನಾ ಶಾಲೆಯಲ್ಲೂ ಕಲಿತೆ. ಈ ಕ್ಷೇತ್ರಕ್ಕೆ ಬರಲು ಮನೆಯೇ ಕಾರ್ಯಾಗಾರ ಆಗಿತ್ತು. ಚಿಕ್ಕಂದಿನಿಂದಲೂ ಕಲಿಯುತ್ತಲೇ ಬೆಳೆದಿದ್ದೇನೆ.

ADVERTISEMENT

ಅಪ್ಪ, ಅಣ್ಣನ ಪ್ರಭಾವ ನಿಮ್ಮ ಮೇಲೆ ಎಷ್ಟಿದೆ?

ಖಂಡಿತವಾಗಿಯೂ ಇದೆ. ನನ್ನ ಬದುಕಿನ ಬೆನ್ನೆಲುಬು ಅವರೇ. ಕಲಿಸಿ, ತಿದ್ದಿ ತೀಡಿದ್ದಾರೆ. ಅವರು ಜನರ ಪ್ರೀತಿ ಗಳಿಸಿದ್ದಾರೆ. ಅದನ್ನು ಉಳಿಸಿ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನನಗಿದೆ. ಅಪ್ಪ ಹೇಳುವುದು ಒಂದೇ ಮಾತು. ಜನ ಬೆಳೆಸಿದ್ದಾರೆ. ಅವರ ಪ್ರೀತಿ ಉಳಿಸಿಕೊಂಡು ಹೋಗಬೇಕು ಅಷ್ಟೆ.

ತ್ರಿವಿಕ್ರಮ ಸಿನಿಮಾದ ಅನುಭವ?

ಮೊದಲ ಸಿನಿಮಾ ಸಹಜವಾಗಿಯೇ ಖುಷಿ, ಆತಂಕ ಎರಡೂ ಇದೆ. ಒಂದು ಒಳ್ಳೆಯ ಪ್ರಯಾಣ. ಇದರ ಗೆಲುವಿನಲ್ಲೇ ನನ್ನ ಕನಸುಗಳಿವೆ. ಚಿತ್ರೀಕರಣ ಸಂದರ್ಭದ ಅನುಭವಗಳು ಮರೆಯಲಾಗದಂಥವು. ಜನ ಹೇಗೆ ಸ್ವೀಕರಿಸುತ್ತಾರೋ ನೋಡಬೇಕು.

ಅಪ್ಪನ ರೊಮ್ಯಾನ್ಸ್‌ ದೃಶ್ಯಗಳನ್ನು ವಿಕ್ರಮ್‌ ಕೂಡಾ ಮಾಡಬಹುದೇ?

ಕನ್ನಡಕ್ಕೊಬ್ಬರೇ ಕ್ರೇಜಿಸ್ಟಾರ್‌. ಅದನ್ನೆಲ್ಲ ನನ್ನಿಂದ ಮಾಡಲಾಗದು. ಆದರೆ, ರೊಮ್ಯಾನ್ಸ್‌ ಅನ್ನು ಕಥೆ ಬಯಸಿದರೆ, ನಿರ್ದೇಶಕರು ಹೇಳಿದರೆ ಮಾಡಲೇಬೇಕಾಗುತ್ತದೆ. ಹಾಗೆಂದು ಅದೊಂದೇ ಆದ್ಯತೆ ಅಲ್ಲ.

ನಿರ್ಮಾಣಕ್ಕೆ 8 ವರ್ಷ ಬೇಕಾಯಿತೇ?

ನಿರ್ಮಾಣವೊಂದೇ ಅಲ್ಲ. ಕಥೆಯ ಕುರಿತ ಬೇರೆ ಬೇರೆ ಸ್ವರೂಪದ ಪ್ರಸ್ತುತಿಗೆ, ಅಧ್ಯಯನಕ್ಕೆ ನಿರ್ದೇಶಕರು (ಸಹನಾಮೂರ್ತಿ) ಸಮಯ ಮೀಸಲಿಟ್ಟರು. ನಾನು ಈ ತಂಡ ಸೇರಿದ್ದು 2019ರಲ್ಲಿ. ಮಧ್ಯೆ ಕೋವಿಡ್‌ ಬಂದು ಎಲ್ಲವೂ ಸ್ಥಗಿತಗೊಂಡಿತು. ನಿರ್ದೇಶಕರಿಗೆ ಬದ್ಧತೆ, ಅಧ್ಯಯನದ ಆಸಕ್ತಿ ತುಂಬಾ ಇದೆ. ಎಲ್ಲೂ ರಾಜಿಯಾಗುವವರಲ್ಲ. ಹಾಗಾಗಿ ಚಿತ್ರ ಅದ್ಭುತವಾಗಿ ಬರಲು ಸಾಧ್ಯವಾಯಿತು.

‘ತ್ರಿವಿಕ್ರಮ’ದ ಮಧ್ಯಮವರ್ಗದ ಹುಡುಗ ಹೇಗಿದ್ದಾನೆ?

ತುಂಬಾ ಬಿಂದಾಸ್‌ ಆಗಿದ್ದಾನೆ. ಮಧ್ಯಮವರ್ಗದ ಜನ ಅಂದರೆ ಗೊತ್ತಲ್ಲಾ. ಒಂಥರಾ ಹೊಂದಾಣಿಕೆಯ ಬದುಕು. ಒಂದಿಷ್ಟು ಲೆಕ್ಕಾಚಾರ, ಜೀವಮಾನವಿಡೀ ಹಾಗೇ ಇರುತ್ತಾರೆ. ಅಂಥದ್ದೊಂದು ಪಾತ್ರ ನನಗೆ ಸಿಕ್ಕಿದೆ. ಇದು ಕುಟುಂಬ ಸಮೇತ ನೋಡಬಹುದಾದ ಚಿತ್ರ. ಕಥೆ ನವಿರಾಗಿ ನೋಡಿಸಿಕೊಂಡು ಹೋಗುತ್ತದೆ.

ಚಿತ್ರದಾಚೆ ನಿಮ್ಮ ಆಸಕ್ತಿಗಳು?

ನಾನು ಓದಿದ್ದು ಬಿಬಿಎ. ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರಮಟ್ಟದ ಟೆನಿಸ್‌ ಆಟಗಾರನಾಗಿದ್ದೆ. ಸದ್ಯ ಈಗ ಸಿನಿಮಾ ನೋಡುವುದು, ನಟನೆ ಅಭ್ಯಾಸ, ಕತೆ ಬರೆಯುವುದು, ಸಿನಿಮಾ ನಿರ್ಮಾಣ, ವಿತರಣೆಗೆ ಸಂಬಂಧಿಸಿದ ಯೋಜನೆ ರೂಪಿಸುವುದು ಎಲ್ಲವನ್ನೂ ಮಾಡುತ್ತಿರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.