ADVERTISEMENT

ಸಂಕಷ್ಟಕ್ಕೆ ಒಂದಾದ ಸಿನಿಮಾ–ಟಿವಿ ಮಂದಿ: ನೆರವಿಗೊಂದು ವ್ಯವಸ್ಥಿತ ಮಾರ್ಗ

ಶರತ್‌ ಹೆಗ್ಡೆ
Published 14 ಮೇ 2021, 4:07 IST
Last Updated 14 ಮೇ 2021, 4:07 IST
ಎಸ್‌.ವಿ. ಶಿವಕುಮಾರ್‌
ಎಸ್‌.ವಿ. ಶಿವಕುಮಾರ್‌   

ಸಿನಿಮಾ, ಕಿರುತೆರೆ ರಂಗದ ಎಲ್ಲ ಚಟುವಟಿಕೆಗಳು ಬಹುತೇಕ ಸ್ತಬ್ಧವಾಗಿವೆ. ಈ ನಡುವೆ ಮನೆಯಲ್ಲೇ ಉಳಿಯಬೇಕಾದ ಈ ಕ್ಷೇತ್ರದ ಎಲ್ಲರಿಗೂ (ಕಲಾವಿದರು, ತಂತ್ರಜ್ಞರು) ಇಲ್ಲಿನ ಪ್ರಮುಖರು ನೆರವಿನ ಮಹಾಪೂರ ಹರಿಸಿದ್ದಾರೆ.

ಈ ಬಾರಿಯಂತೂ ನೆರವು ನೀಡುವ ಕ್ರಮ ವ್ಯವಸ್ಥಿತವಾಗಿ ನಡೆದಿದೆ.

ಉಪೇಂದ್ರ ಪ್ಲಾನ್‌: ಉಪೇಂದ್ರ ಅವರು ಸುಮಾರು ಮೂರು ಸಾವಿರ ಜನರಿಗೆ ಕಿಟ್‌ ನೀಡಲು ಸಿದ್ಧತೆ ನಡೆಸಿದ್ದರು. ಅದು ಕಾರ್ಯಗತವಾಗುತ್ತಿದ್ದಂತೆಯೇ ಚಲನಚಿತ್ರ, ಟಿವಿ, ಸುಗಮ ಸಂಗೀತ ಕ್ಷೇತ್ರದ ಒಕ್ಕೂಟದ ಹಲವಾರು ಮಂದಿ ಕೈ ಜೋಡಿಸಿದರು. ಹಿರಿಯ ನಟಿ ಸರೋಜಾದೇವಿ, ನಟರಾದ ಸಾಧು ಕೋಕಿಲ, ಎಸ್.ಕೆ. ಸ್ಟೀಲ್‌ ಕಂಪನಿ ಸೇರಿದಂತೆ ಹಲವಾರು ಮಂದಿ ದಾನಿಗಳು ತಮ್ಮಿಂದಾದಷ್ಟು ನೆರವು ನೀಡಿದರು.

ADVERTISEMENT

ಈಗ ಅದನ್ನು ವ್ಯವಸ್ಥಿತವಾಗಿ ತಲುಪಿಸುವ ಹೊಣೆ ಉಪೇಂದ್ರ ಅವರ ತಂಡದ್ದು. ಅದಕ್ಕೆ ಉಪೇಂದ್ರ ಅವರು ಯೋಜನೆ ಹಾಕಿದ್ದಾರೆ. ಉದಾಹರಣೆಗೆ ರೈತರಿಂದ ತರಕಾರಿಗಳನ್ನು ಕೊಳ್ಳುವುದು. ಅವರಿಗೆ ಮಾರುಕಟ್ಟೆ ದರವನ್ನೇ ಪಾವತಿಸಿ ಅದನ್ನು ಅಗತ್ಯ ಉಳ್ಳವರಿಗೆ ನೆರವಿನ ರೂಪದಲ್ಲಿ ಕೊಡುವುದು. ಅತ್ತ ರೈತನಿಗೂ ಸಹಾಯ ಕೊಟ್ಟಂತಾಗುತ್ತದೆ. ಇನ್ನು ಅಗತ್ಯಗಳ ಪಟ್ಟಿಯಲ್ಲಿ ಆಹಾರ ಮಾತ್ರ ಅಲ್ಲ, ಔಷಧ, ಚಿಕಿತ್ಸೆಗೆ ನೆರವು, ತುರ್ತು ಸಹಾಯ ಹೀಗೆ ಹಲವಾರು ಇವೆ. ಅವುಗಳನ್ನು ಬೇಕಾದವರಿಗೆ ತಲುಪಿಸುವ ವ್ಯವಸ್ಥೆಯನ್ನು ಉಪೇಂದ್ರ ಅವರ ತಂಡ ಮಾಡುತ್ತಿದೆ.

‘ಎಲ್ಲರೂ ಕೈ ಜೋಡಿಸಿದ್ದಾರೆ. ಅದರಲ್ಲಿ ನನ್ನದೇನಿದೆ? ಕೈಲಾದಷ್ಟು ಅದನ್ನು ತಲುಪಿಸಬೇಕು. ಇದರಲ್ಲಿ ನಾನೊಂದು ಚಾನೆಲ್‌ ಅಷ್ಟೇ’ ಎಂದು ವಿನಮ್ರರಾಗಿ ಹೇಳುತ್ತಾರೆ ಉಪೇಂದ್ರ.

ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌: ಕರ್ನಾಟಕ ಟೆಲಿವಿಷನ್‌ ಅಸೋಸಿಯೇಷನ್‌ ಎಲ್ಲ ಬಗೆಯ ಟಿವಿ ಕಾರ್ಯಕ್ರಮ ನಿರ್ಮಾಣ ಸ್ಥಗಿತಗೊಳಿಸಲು ಆದೇಶಿಸಿದೆ. ‘ಮೇ 24ರವರೆಗೆ ಪರಿಸ್ಥಿತಿಯನ್ನು ಅವಲೋಕಿಸಿ ನೆರವು ನೀಡಲು ಯೋಜನೆ ರೂಪಿಸಿದೆ’ ಎಂದು ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ವಿ. ಶಿವಕುಮಾರ್‌ ಹೇಳಿದರು.

‘ಸಂಘದಲ್ಲಿ ಒಂದು ಆಂತರಿಕ ಸಮಿತಿ ಮಾಡಿದ್ದೇವೆ. ನಮ್ಮ ಕ್ಷೇತ್ರಗಳ 33 ವಲಯಗಳ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ನೆರವಿನ ಅಗತ್ಯವುಳ್ಳವರನ್ನು ಗುರುತಿಸುತ್ತಾರೆ. ಅಥವಾ ಅಗತ್ಯವುಳ್ಳವರು ಅವರನ್ನು ಸಂಪರ್ಕಿಸಬಹುದು. ಹಾಗೆ ಏನಾದರೂ ಅಗತ್ಯ ವಸ್ತುಗಳನ್ನು ಖರೀದಿಸಿದಲ್ಲಿ ಅದರ ಬಿಲ್‌ನ್ನು ಆಯಾ ಅಂಗಡಿಗೆ ನಮ್ಮ ಸದಸ್ಯರು ಆನ್‌ಲೈನ್‌ (ಗೂಗಲ್‌ ಪೇ, ಪೇಟಿಎಂ, ಯುಪಿಐ) ಮೂಲಕ ಪಾವತಿಸುತ್ತಾರೆ. ಯಾರೂ ಗುಂಪು ಸೇರುವ ಅಗತ್ಯ ಇಲ್ಲ. ಆದ್ದರಿಂದ ಸದ್ಯದ ತುರ್ತಿಗೆ ಬೇಕಾದಷ್ಟು ಮೀಸಲು ನಿಧಿ ಇದೆ. ವೈಯಕ್ತಿಕವಾಗಿಯೂ ನೆರವು ನೀಡುತ್ತೇನೆ. ಇನ್ನೂ ಕೊರತೆ ಆದಲ್ಲಿ ದಾನಿಗಳ ಮೂಲಕವಾದರೂ ಕೊಡಿಸುತ್ತೇವೆ. ಯಾರೂ ಹಸಿದುಕೊಂಡಿರದಂತೆ ನೊಡಿಕೊಳ್ಳುವ ಜವಾಬ್ದಾರಿ ನಮ್ಮದು’ ಎಂದು ಶಿವಕುಮಾರ್‌ ಹೇಳಿದರು.

ಹೀಗೆ ಸಂಕಟದ ಕಾಲದಲ್ಲಿ ಸಿನಿಮಾ ಟಿವಿ ಕ್ಷೇತ್ರ ಎಂಬ ಬೇಧ ಇಲ್ಲದೆ ಎಲ್ಲರೂ ಒಂದಾಗಿದ್ದಾರೆ. ನೆರವಿನ ಹರಿವು ಬರುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.