ADVERTISEMENT

ವಡಿವೇಲು ವೆಬ್‌ ಸರಣಿಯಲ್ಲಿ ಕಾಮಿಡಿಯೂ ಉಂಟು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 10:22 IST
Last Updated 4 ಆಗಸ್ಟ್ 2020, 10:22 IST
ವಡಿವೇಲು
ವಡಿವೇಲು   

ಕಾಲಿವುಡ್‌ನ ಹಾಸ್ಯನಟ ವಡಿವೇಲು ಅಭಿನಯಿಸಿದ ಕೊನೆಯ ಚಿತ್ರ ‘ಮರ್ಸೆಲ್‌’. ಇದು ತೆರೆಕಂಡಿದ್ದು ಮೂರು ವರ್ಷಗಳ ಹಿಂದೆ. ‘ತಲೈವಾ ಇರುಕ್ಕಿರನ್‌’ ಚಿತ್ರದ ಮೂಲಕ ಮತ್ತೆ ನಟನೆಯತ್ತ ಚಿತ್ತ ಹರಿಸಿದ್ದ ಅವರಿಗೆ ಕೋವಿಡ್‌–19 ಅಡ್ಡಗಾಲು ಹಾಕಿದೆ. ಇದು 1992ರಲ್ಲಿ ತೆರೆಕಂಡಿದ್ದ ಕಮಲಹಾಸನ್‌ ನಟನೆಯ ‘ದೇವರ್‌ ಮಗನ್‌’ ಚಿತ್ರದ ಸೀಕ್ವೆಲ್‌. ಇದರ ಶೂಟಿಂಗ್ ಮುಂದೂಡಿಕೆಯಾಗಿರುವುದು ಅವರಿಗೆ ಬೇಸರ ತರಿಸಿದೆ. ಹಾಗೆಂದು ಅವರು ಸುಮ್ಮನೇ ಕೂರುವ ಮನಸ್ಥಿತಿಯಲ್ಲಿಲ್ಲ.

ಒಂದು ದಶಕದ ಹಿಂದೆ ವಡಿವೇಲು ಅವರ ಕಾಲ್‌ಶೀಟ್‌ಗಾಗಿ ನಿರ್ದೇಶಕರು ಕಾಯುತ್ತಿದ್ದರು. ಪರದೆ ಮೇಲೆ ಅವರ ಕಾಮಿಡಿ ಪ್ರೇಕ್ಷಕರಿಗೆ ಮೋಡಿ ಮಾಡುತ್ತಿತ್ತು. ಈಗ ನಿರ್ದೇಶಕ ‌ಸೂರಜ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ವೆಬ್‌ ಸರಣಿಯೂ ಹಾರರ್‌ ಕಾಮಿಡಿ ಕಥಾಹಂದರ ಹೊಂದಿದೆ. ಈ ವೆಬ್‌ ಸರಣಿಯಲ್ಲಿ ಪ್ರಧಾನ ಪಾತ್ರ ನಿಭಾಯಿಸುತ್ತಿರುವ ವಡಿವೇಲು ಹಾಸ್ಯದ ರಸ ಉಣಬಡಿಸಲು ಮುಂದಾಗಿದ್ದಾರೆ.

ಈ ಇಬ್ಬರೂ ಪರದೆ ಮೇಲೆ ಒಟ್ಟಾಗಿ ಕೆಲಸ ಮಾಡುತ್ತಿರುವುದು ಇದು ಮೊದಲೇನಲ್ಲ. ‘ಥಲೈ ನಾಗರಂ’, ‘ಮಾರುಧಾಮಲೈ’ ಹಾಗೂ ‘ಕಥಿ ಸಂದೈ’ ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ.

ADVERTISEMENT

ಈ ವರ್ಷದ ಆರಂಭದಲ್ಲಿಯೇ ಹೊಸ ಸಿನಿಮಾ ಮಾಡಲು ಇಬ್ಬರು ನಿರ್ಧರಿಸಿದ್ದು ಉಂಟು. ಆದರೆ, ವಡಿವೇಲು ಈ ಚಿತ್ರದ ಸ್ಕ್ರಿಪ್ಟ್‌ ಅನ್ನೇ ವೆಬ್‌ ಸರಣಿಯಾಗಿ ಬದಲಾಯಿಸಲು ಸೂರಜ್‌ಗೆ ಸೂಚಿಸಿದರಂತೆ. ಹಾಗಾಗಿ, ಈ ಸರಣಿಯು 10 ಎಪಿಸೋಡ್‌ಗಳಲ್ಲಿ ನಿರ್ಮಾಣವಾಗಲಿದೆ. ಈಗಾಗಲೇ ಪ್ರೀಪ್ರೊಡಕ್ಷನ್‌ ಕೆಲಸವೂ ಆರಂಭಗೊಂಡಿದೆ. ಮತ್ತೊಂದೆಡೆ ವಡಿವೇಲು ಸರಣಿಯ ಬಿಡುಗಡೆ ಸಂಬಂಧ ಅಮೆಜಾನ್‌ ಪ್ರೈಮ್‌ ಮತ್ತು ನೆಟ್‌ಫ್ಲಿಕ್ಸ್‌ ಜೊತೆಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ ಎಂಬ ಸುದ್ದಿ ತಮಿಳು ಚಿತ್ರರಂಗದ ಅಂಗಳದಿಂದ ಹೊರಬಿದ್ದಿದೆ.

ಇತ್ತೀಚೆಗೆ ಅವರು ಕೊರೊನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಹಾಡಿದ್ದ ವಿಡಿಯೊ ಸಾಂಗ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಪ್ರಕೃತಿಯ ನಾಶದಿಂದ ಮನುಕುಲ ಹೇಗೆಲ್ಲಾ ಸಂಕಷ್ಟಕ್ಕೆ ಸಿಲುಕಿದೆ ಎನ್ನುವುದನ್ನು ಹಾಡು ತೆರೆದಿಟ್ಟಿತ್ತು. ‘ನಾವು ಕೊರೊನಾ ವಿರುದ್ಧ ಜಯಗಳಿಸುತ್ತೇವೆ’ ಎಂದಿದ್ದರು ವಡಿವೇಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.