
ಮಂಗಳೂರು: ಫೆ.27ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿರುವ ವೀರ ಕಂಬಳ ಸಿನಿಮಾವನ್ನು ಇಂಗ್ಲಿಷ್‌ಗೆ ಡಬ್ ಮಾಡುವ ಯೋಜನೆ ಇದೆ ಎಂದು ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.
ನಗರದಲ್ಲಿ ಶನಿವಾರ ನಡೆದ ವೀರ ಕಂಬಳ ಮತ್ತು ಬಿರ್ದ್‌ದ ಕಂಬಳ (ತುಳು) ಚಿತ್ರಗಳ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ₹ 14 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಚಿತ್ರ ಯಶಸ್ಸು ಕಾಣುವ ನಿರೀಕ್ಷೆ ಇದೆ. ಇಡೀ ದೇಶದಲ್ಲೇ ಚರ್ಚೆಯಾಗಲಿರುವ ಕಥಾವಸ್ತು ಮತ್ತು ದೃಶ್ಯಗಳನ್ನು ಚಿತ್ರ ಒಳಗೊಂಡಿದೆ. ಕನ್ನಡ ಮತ್ತು ತುಳುವಿನಲ್ಲಿ ಯಶಸ್ಸು ಕಂಡರೆ ಹಿಂದಿ, ತಮಿಳು ಮತ್ತು ತೆಲುಗಿಗೆ ಚಿತ್ರ ಡಬ್ ಆಗಲಿದೆ. ನಂತರ ಇಂಗ್ಲಿಷ್‌ಗೆ ತಲುಪಿಸಿ ಪ್ರಾಣಿಗಳನ್ನು ಬಳಸಿಕೊಂಡು ನಮ್ಮಲ್ಲಿ ನಡೆಯುವ ಕ್ರೀಡೆಯ ರಸಮಯ ಪ್ರಸಂಗವನ್ನು ತೋರಿಸಲಾಗುವುದು ಎಂದರು.
ಕನ್ನಡ ಚಿತ್ರ 27ರಂದು ಕರ್ನಾಟಕದಾದ್ಯಂತ ಬಿಡುಗಡೆ ಆಗಲಿದೆ. ತುಳು ಚಿತ್ರ ತುಳುನಾಡಿನೆಲ್ಲೆಡೆ ಏಕಕಾಲದಲ್ಲಿ ಚಿತ್ರಮಂದಿರಗಳನ್ನು ತಲುಪಲಿದ್ದು ಬೆಂಗಳೂರು, ಮುಂಬೈ ಮತ್ತು ದುಬೈಯಲ್ಲೂ ಬಿಡುಗಡೆ ಮಾಡುವ ಚಿಂತನೆ ಇದೆ ಎಂದು ಅವರು ತಿಳಿಸಿದರು.
‘ಚಿತ್ರದಲ್ಲಿ ಪ್ರಕಾಶ್ ರಾಜ್ ಅಭಿನಯಿಸಿದ್ದಾರೆ. ಕೋಣಗಳನ್ನು ಓಡಿಸುವ ಶ್ರೀನಿವಾಸ ಗೌಡ ಅವರನ್ನೇ ನಾಯಕನನ್ನಾಗಿ ಮಾಡಲಾಗಿದೆ. ಅವರ ಬದಲಿಗೆ ಸ್ಟಾರ್ ನಟನನ್ನು ಹಾಕಿದ್ದರೆ ದೊಡ್ಡ ಅಭಾಸ ಆಗುತ್ತಿತ್ತು. ಸಿನಿಮಾ ರಂಗದ ಕೆಲವು ಸಂಪ್ರದಾಯಗಳನ್ನು ಈ ಚಿತ್ರದಲ್ಲಿ ಮುರಿಯಲಾಗಿದೆ. ಅದು ಕೂಡ ಯಶಸ್ಸಿಗೆ ಕಾರಣವಾಗುವ ಭರವಸೆ ಇದೆ’ ಎಂದು ಅವರು ಹೇಳಿದರು.
ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್ ಮಾತನಾಡಿ ಇಡೀ ಸಿನಿಮಾದಂತೆ ಹಾಡುಗಳಲ್ಲೂ ನೈಜತೆಯನ್ನು ಕಾಪಾಡಿಕೊಳ್ಳಲಾಗಿದೆ ಎಂದರು. ನಿರ್ಮಾಪಕ ಅರುಣ್ ರೈ ತೋಡಾರ್, ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಕುಡ್ಲ, ಗಾಯಕ ಹಾಗೂ ನಟ ಮೈಮ್ ರಾಮದಾಸ್, ರಾಜ್ಯ ಕಂಬಳ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಕಲ್ಕುಡೆ, ಗುಣಪಾಲ ಕಡಂಬ, ರಶ್ಮಿತ್ ಶೆಟ್ಟಿ ಒಕ್ಕಾಡಿಗೋಳಿ, ನಟ ರಾಜೇಶ್ ಶೆಟ್ಟಿ ಹಾಗೂ ಗೀತ ರಚನೆಗಾರ ಕೆ.ಕೆ ಪೇಜಾವರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.