ADVERTISEMENT

ಎರಡು ಭಾಗಗಳಲ್ಲಿ ವಿಜಯ್ ಸೇತುಪತಿ ಮತ್ತು ಸೂರಿ ನಟನೆಯ ‘ವಿಡುದಲೈ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 8:13 IST
Last Updated 4 ಸೆಪ್ಟೆಂಬರ್ 2022, 8:13 IST
‘ವಿಡುದಲೈ’ ಚಿತ್ರದ ಸ್ಟಿಲ್‌
‘ವಿಡುದಲೈ’ ಚಿತ್ರದ ಸ್ಟಿಲ್‌   

ವಿಜಯ್ ಸೇತುಪತಿ ಮತ್ತು ಸೂರಿ ನಟಿಸುತ್ತಿರುವ ತಮಿಳು ಚಿತ್ರ ‘ವಿಡುದಲೈ’ ಇದೀಗ ಎರಡು ಭಾಗಗಳಲ್ಲಿ ನಿರ್ಮಾಣವಾಗಿದ್ದು, ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರವನ್ನು ರೆಡ್ ಜಯಂಟ್ ಮೂವಿಸ್‌ ಉದಯನಿಧಿ ಸ್ಟಾಲಿನ್ ಅರ್ಪಿಸಿದ್ದಾರೆ. ಆರ್.ಎಸ್. ಇನ್ಫೋಟೈನ್ಮೆಂಟ್‌ ಅಡಿಎಲ್ರೆಡ್ ಕುಮಾರ್ ನಿರ್ಮಿಸುತ್ತಿದ್ದಾರೆ.

ಕಾಲಿವುಡ್‌ ಜನಪ್ರಿಯ ನಿರ್ದೇಶಕರಲ್ಲಿ ವೆಟ್ರಿಮಾರನ್ ಪ್ರಮುಖರು. ಕೆಲವು ತಿಂಗಳುಗಳ ಹಿಂದೆ ಅವರು ‘ವಿಡುದಲೈ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಘೋಷಿಸಿದಾಗಲೇ, ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಇತ್ತು. ಕ್ರಮೇಣ ಜನಪ್ರಿಯ ಕಲಾವಿದರು ಮತ್ತು ತಂತ್ರಜ್ಞರು ಚಿತ್ರತಂಡಕ್ಕೆ ಸೇರ್ಪಡೆಯಾದರು.

ಸದ್ಯ, ‘ವಿಡುದಲೈ’ ಚಿತ್ರದ ಭಾಗ ಒಂದರ ಚಿತ್ರೀಕರಣ ಸಂಪೂರ್ಣವಾಗಿದೆ. ಪೋಸ್ಟ್‌ ಪ್ರೊಡಕ್ಷನ್‌ಕೆಲಸಗಳು ಪ್ರಗತಿಯಲ್ಲಿವೆ. ಎರಡನೆಯ ಭಾಗದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ. ಸಿರುಮಲೈ, ಕೊಡೈಕೆನಾಲ್ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈ ಎರಡು ಚಿತ್ರಗಳು ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿವೆ.

ADVERTISEMENT

ಈ ಚಿತ್ರವನ್ನು ಕೋಟ್ಯಂತರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿದ್ದು, ಚಿತ್ರಕ್ಕಾಗಿ ವಿಶೇಷವಾಗಿ ₹10 ಕೋಟಿ ವೆಚ್ಚದ ರೈಲು ಮತ್ತು ರೈಲ್ವೆ ಸೇತುವೆಯ ಸೆಟ್ ನಿರ್ಮಾಣ ಮಾಡಲಾಗಿದೆ. ನಿಜವಾದ ರೈಲು ಬೋಗಿಗಳು ಮತ್ತು ಸೇತುವೆಯನ್ನು ನಿರ್ಮಿಸುವುದಕ್ಕೆ ಬಳಸಲಾಗುವ ಪರಿಕರಗಳನ್ನೇ ಈ ಸೆಟ್ ನಿರ್ಮಾಣಕ್ಕೂ ಬಳಸಲಾಗಿರುವುದು ವಿಶೇಷ. ಇದಲ್ಲದೆ, ಸಿರುಮಲೈ ಬಳಿ ಜಾಕಿ ಅವರ ಕಲಾ ನಿರ್ದೇಶನದಲ್ಲಿ ಒಂದು ಹಳ್ಳಿಯನ್ನು ನಿರ್ಮಿಸಲಾಗಿದೆ.

ಸದ್ಯ ಕೊಡೈಕೆನಾಲ್ನಲ್ಲಿ ಪೀಟರ್ ಹೇನ್ಸ್ ನಿರ್ದೇಶನದಲ್ಲಿ ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸುವುದಕ್ಕೆ ತಯಾರಿ ನಡೆಸಲಾಗಿದೆ. ಇದಕ್ಕಾಗಿ ಬಲ್ಗೇರಿಯಾದಿಂದ ಸಾಹಸ ಕಲಾವಿದರನ್ನು ಕರೆಸಲಾಗಿದೆ. ಈ ಆ್ಯಕ್ಷನ್‌ ದೃಶ್ಯಗಳಲ್ಲಿ ಬಲ್ಗೇರಿಯಾದ ಸಾಹಸ ಕಲಾವಿದರು ಸಹ ಭಾಗವಹಿಸುತ್ತಿದ್ದಾರೆ.

‘ವಿಡುದಲೈ’ ಚಿತ್ರದಲ್ಲಿ ವಿಜಯ್ ಸೇತುಪತಿ, ಸೂರಿ, ಭವಾನಿಶ್ರೀ, ಪ್ರಕಾಶ್ ರಾಜ್, ಗೌತಮ್ ವಾಸುದೇವ ಮೆನನ್, ರಾಜೀವ್ ಮೆನನ್ ಮುಂತಾದವರು ನಟಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಇಳಯರಾಜ ಈ ಚಿತ್ರದ ಸಂಗೀತದ ಜವಾಬ್ದಾರಿ ಹೊತ್ತಿದ್ದು, ವೇಲ್ರಾಜ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ರೆಡ್ ಜೈಂಟ್ ಮೂವೀಸ್ ವಹಿಸಿಕೊಂಡಿದೆ. ಸದ್ಯದಲ್ಲೇ ‘ವಿಡುದಲೈ’ ಮೊದಲ ಭಾಗದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.