ಚಿತ್ರ ಕೃಪೆ: ಕೆವಿಎನ್ ಪ್ರೋಡಕ್ಷನ್ ಹೌಸ್
ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್' ತಮಿಳು ಸಿನಿಮಾದ ಟ್ರೈಲರ್ ಜ.3 (ಶನಿವಾರ) ರಂದು ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ.
ಸಿನಿಮಾದ ಟ್ರೈಲರ್ 2 ನಿಮಿಷ 52 ಸೆಕೆಂಡುಗಳಿದ್ದು, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಎಚ್. ವಿನೋತ್ ನಿರ್ದೇಶನದ ಈ ಚಿತ್ರ ಜ.9ರಂದು ತೆರೆ ಕಾಣುತ್ತಿದೆ.
ಚಿತ್ರದಲ್ಲಿ ವಿಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಮಾಸ್ ಆ್ಯಕ್ಷನ್ ಕಥೆಯನ್ನು ಹೊಂದಿದೆ. ಜತೆಗೆ ತಂದೆ ಮಗಳ ಬಾಂಧವ್ಯವೂ ಚಿತ್ರದ ಪ್ರಮುಖ ಅಂಶ ಎಂಬುದು ಟ್ರೇಲರ್‌ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ. ಕೆವಿಎನ್ ಸಂಸ್ಥೆಯ ವೆಂಕಟ್ ಕೆ. ನಾರಾಯಣ ಅವರು ಬಂಡವಾಳ ಹೂಡಿದ್ದಾರೆ. ಅನಿರುದ್ಧ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಚಿತ್ರಗ್ರಹಣ ಹಾಗೂ ಪ್ರದೀಪ್ ಇ. ರಾಘವ್ ಅವರ ಸಂಕಲನ ಈ ಚಿತ್ರಕ್ಕಿದೆ.
‘ಮಲೇಷ್ಯಾದಲ್ಲಿ ನಡೆದ ಆಡಿಯೋ ಬಿಡುಗಡೆಗೆ ಸಿಕ್ಕ ಅಭೂತಪೂರ್ವ ಸ್ಪಂದನೆಯೇ ವಿಜಯ್ ಮತ್ತು ಅವರ ಅಭಿಮಾನಿಗಳ ನಡುವಿನ ಬಾಂಧವ್ಯಕ್ಕೆ ಸಾಕ್ಷಿ. ಮಲೇಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ನಮ್ಮ ಚಿತ್ರ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯ. ಈಗ ಟ್ರೇಲರ್ ಸೃಷ್ಟಿಸಿರುವ ಈ ಅಬ್ಬರವು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ’ ಎಂದು ನಿರ್ಮಾಪಕರು ಹೇಳಿದ್ದಾರೆ.