ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ ‘ಮಹಾನ್’ ಚಿತ್ರದ ಪ್ರಮುಖಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ವರ್ಷ ಬೊಳ್ಳಮ್ಮ ಕಾಣಿಸಿಕೊಳ್ಳುತ್ತಿದ್ದಾರೆ. ಪಿ.ಸಿ.ಶೇಖರ್ ನಿರ್ದೇಶನದ ಚಿತ್ರವಿದು. ಪ್ರಕಾಶ್ ಬುದ್ದೂರು ಬಂಡವಾಳ ಹೂಡಿದ್ದಾರೆ.
ವರ್ಷ ಬೊಳ್ಳಮ್ಮ ತಮಿಳಿನ ‘ಬಿಗಿಲ್’, ‘96’ ಸೇರಿದಂತೆ ತೆಲುಗು, ಮಲೆಯಾಳದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಮೂಲತಃ ಕನ್ನಡದವಳಾದ ನಾನು ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈಗ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅವಕಾಶ ಸಿಕ್ಕಿದೆ. ಮಾತೃಭಾಷೆಯ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ರೈತರ ಕುರಿತಾದ ಚಿತ್ರವಿದು. ರೈತರ ಬದುಕಿನ ಬವಣೆಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ’ ಎಂದಿದ್ದಾರೆ ವರ್ಷ.
ರಾಧಿಕಾ ನಾರಾಯಣ್, ಮಿತ್ರ, ನಮ್ರತ ಗೌಡ ಮುಂತಾದವರು ಚಿತ್ರದಲ್ಲಿದ್ದಾರೆ. ‘ಐದಾರು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಆದರೆ ಈ ಮಾಡಿರುವು ಪ್ರಯೋಗಾರ್ಥ ರೀತಿಯ ಚಿತ್ರೀಕರಣ. ಅಕ್ಟೋಬರ್ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭವಾಗಿದೆ. ಮಂಡ್ಯದ ಸುತ್ತಮುತ್ತ ಬಹುಪಾಲು ಚಿತ್ರೀಕರಣ ನಡೆಯಲಿದೆ ರೈತರ ಹೋರಾಟಕ್ಕೆ ಸಂಬಂಧಿಸಿದ ಕಥೆ. ವಿಜಯ್ ರಾಘವೇಂದ್ರ ತಂಗಿಯಾಗಿ ವರ್ಷ ಕಾಣಿಸಿಕೊಳ್ಳುತ್ತಾರೆ. ವಿಜಯ್ ರಾಘವೇಂದ್ರ ರೈತ ಹಾಗೂ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳು ಇವೆ. ರಾಜಕೀಯ, ರೈತರ ಬದುಕು ಬವಣೆಯ ಜತೆಗೆ ಮನರಂಜನೀಯ ಅಂಶಗಳೂ ಇವೆ’ ಎನ್ನುತ್ತಾರೆ ಪಿ.ಸಿ.ಶೇಖರ್.
‘ಚಿತ್ರದ ತಾಂತ್ರಿಕ ವರ್ಗ ಕೂಡ ಪೂರ್ತಿಯಾಗಿ ಅಂತಿಮವಾಗಿಲ್ಲ. ಎಲ್ಲವನ್ನೂ ಹಂತಹಂತವಾಗಿ ತಿಳಿಸುತ್ತ ಹೋಗುತ್ತೇವೆ’ ಎಂದು ನಿರ್ದೇಶಕರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.