ವಿಕ್ರಂ ರವಿಚಂದ್ರನ್
ವಿಕ್ರಂ ರವಿಚಂದ್ರನ್ ನಟನೆಯ ‘ಮುಧೋಳ್’ ಚಿತ್ರಕ್ಕೆ ಮತ್ತೆ ಮರುಜೀವ ಸಿಕ್ಕಿದೆ. ಜತೆಗೆ ಇನ್ನೊಂದಷ್ಟು ಸಿನಿಮಾಗಳನ್ನು ಎದುರು ನೋಡುತ್ತಿರುವ ಅವರು ಚಿತ್ರರಂಗದಲ್ಲಿ ತಮ್ಮ ಭವಿಷ್ಯದ ಕನಸುಗಳ ಕುರಿತು ಮಾತನಾಡಿದ್ದಾರೆ.
‘ಚಿತ್ರ ದ್ವೇಷದ ಕುರಿತ ಕಥೆ ಹೊಂದಿದೆ. ‘ಮುಧೋಳ್’ ಎಂಬುದು ಒಂದು ಊರಿನ ಹೆಸರು. ಕರ್ನಾಟಕದ ತಳಿ ಕೂಡ. ನಾವು ತಳಿಯ ಮೇಲೆ ಹೋಗಿದ್ದೇವೆ. ಒಂದು ಪಾತ್ರವನ್ನು ಆ ತಳಿ ಆಧಾರಿತವಾಗಿ ವಿನ್ಯಾಸಗೊಳಿಸಿದ್ದೇವೆ. ನಾಯಕ ದ್ವೇಷ ತೀರಿಸಿಕೊಳ್ಳುವ ರೀತಿ, ನಿಯತ್ತು ಮುಂತಾದ ಅಂಶಗಳು ಪಾತ್ರದಲ್ಲಿದೆ. ಹೀಗಾಗಿ ಈ ಶೀರ್ಷಿಕೆ ಇಟ್ಟಿದ್ದೇವೆ’ ಎಂದು ಮಾತು ಪ್ರಾರಂಭಿಸಿದರು ವಿಕ್ರಂ.
‘ನನ್ನ ಪಾತ್ರದ ಹೆಸರು ಶಶಿ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ಅದರಲ್ಲಿ ಪಾತ್ರದ ಕುರಿತು ಸಾಕಷ್ಟು ವಿವರ ಸಿಗುತ್ತದೆ. ದ್ವೇಷದ ಜತೆಗೆ ಸಾಕಷ್ಟು ಭಾವನಾತ್ಮಕ ಅಂಶಗಳೂ ಇವೆ. ಹದಿನೈದು ದಿನಗಳ ಚಿತ್ರೀಕರಣ ಬಾಕಿಯಿದೆ. ಎರಡು ಹಾಡುಗಳು ಬಾಕಿ ಇವೆ. 8 ದಿನದ ಮಾತಿನ ಭಾಗದ ಚಿತ್ರೀಕರಣ ಬಾಕಿಯಿದೆ. ಈ ವರ್ಷವೇ ತೆರೆಗೆ ತರಲು ಆಲೋಚಿಸಿದ್ದೇವೆ. ಅಕ್ಟೋಬರ್ ಅಂತ್ಯಕ್ಕೆ ಸಿನಿಮಾ ಸಿದ್ಧವಾಗುತ್ತದೆ’ ಎಂದರು.
‘ಸೂಕ್ತವಾದ ಸಹಭಾಗಿತ್ವಕ್ಕೆ ಕಾಯುತ್ತಿದ್ದೆವು. ನಮ್ಮಂಥ ಯುವಕರಿಗೆ ಬೆಂಬಲ ಬೇಕು. ಅಮೃತ ಸಿನಿಕ್ರಾಫ್ಟ್ಸ್ ಆ ಸಹಭಾಗಿತ್ವ ನೀಡಿದೆ. ಸಿನಿಮಾ ನನ್ನ ಪ್ರಕಾರ ತಡವಾಗಿಲ್ಲ. ನಮ್ಮಂಥ ಯುವಕರು ಸರಿಯಾದ ಸಮಯದಲ್ಲಿ ಸಿನಿಮಾ ತೆರೆಗೆ ತರಬೇಕು. ನಮ್ಮ ಕೆಲ ಹಳೆಯ ಸಿನಿಮಾಗಳು ಸರಿಯಾದ ಸಮಯದಲ್ಲಿ ಬರಲಿಲ್ಲ. ಸರಿಯಾದ ಸಮಯ, ಸರಿಯಾದ ವ್ಯಕ್ತಿಗಳೊಂದಿಗೆ ಬಂದಾಗ ಸಿನಿಮಾ ಚೆನ್ನಾಗಿ ಆಗಬಹುದೆಂಬ ಆಸೆ. ಒಂದು ಸಿನಿಮಾ ತೆರೆಕಂಡ ನಂತರ ಮತ್ತೊಂದು ಸಿನಿಮಾಕ್ಕೆ ಮೂರು ವರ್ಷಗಳನ್ನು ತೆಗೆದುಕೊಳ್ಳಬಾರದು. ‘ಮುಧೋಳ್’ ಬಿಡುಗಡೆ ಬಳಿಕ ನನ್ನದು ವರ್ಷಕ್ಕೆ ಎರಡು ಸಿನಿಮಾ ಬರಬೇಕು. ಇಲ್ಲಿಂದ ನನ್ನ ಪಯಣ ಭಿನ್ನ. ನಾನು ಯಾವುದೇ ಸಿನಿಮಾ ಮಾಡಿದರೂ, ಅದು ನನ್ನ ಹಿಂದಿನ ಸಿನಿಮಾಕ್ಕಿಂತ ದೊಡ್ಡದಾಗಿರುತ್ತದೆ. ನಾವು ಈ ಸಿನಿಮಾ ಪ್ರಾರಂಭಿಸಿದ ಸ್ಥಿತಿಗೆ ಹೋಲಿಸಿಕೊಂಡರೆ, ಈಗ ಸಂಪೂರ್ಣ ಚಿತ್ರಣ ಬದಲಾಗಿದೆ. ಮಾರುಕಟ್ಟೆ ಬದಲಾಯಿತು. ಸಿನಿಮಾ ಹಕ್ಕುಗಳ ಖರೀದಿ ನಿಂತಿತು. ನಾವು ಸಿನಿಮಾ ಶುರು ಮಾಡಿದಾಗ ಹಕ್ಕುಗಳು ಹೋಗುತ್ತಿತ್ತು. ಹೀಗಾಗಿ ಈ ನಾವು ಸಿನಿಮಾವನ್ನು ಪ‍್ರಸ್ತುತಪಡಿಸುವ ರೀತಿ ಬದಲಾಗಬೇಕು. ಅದಕ್ಕೆ ಸಮಯ ತೆಗೆದುಕೊಂಡೆವು’ ಎಂದು ಸಿನಿಮಾ ವಿಳಂಬವಾಗಿರುವುದಕ್ಕೆ ಸಮಜಾಯಿಷಿ ನೀಡಿದರು.
‘ವರ್ಷಕ್ಕೆ 5–10 ಸಿನಿಮಾ ಮಾಡಬೇಕೆಂಬ ಆಸೆಯಿದೆ. ಆದರೆ ಇಲ್ಲಿ ಅದಕ್ಕೆ ಬೇಕಾದ ಮನಸ್ಥಿತಿ ಇಲ್ಲ. 2–3 ಸಿನಿಮಾ ಜನಕ್ಕೆ ತಕ್ಕಂತೆ ಮಾಡಬೇಕು. ಒಮ್ಮೆ ಯಶಸ್ಸಾದರೆ ಮಾತ್ರ ಅವಕಾಶಗಳು ಹೆಚ್ಚುತ್ತವೆ’ ಎನ್ನುತ್ತಾರೆ ವಿಕ್ರಂ.
‘ಬೇರೆ ಕೆಲವಷ್ಟು ಸಿನಿಮಾಗಳ ಮಾತುಕತೆ ನಡೆದಿದೆ. ಎಲ್ಲವೂ ಹೊಸಬರ ಜತೆ. ನಾನು ಹೆಚ್ಚಾಗಿ ನಾನು ಹೊಸಬರ ಜತೆಯೇ ಕೆಲಸ ಮಾಡಲು ಬಯಸುತ್ತೇನೆ. ನನಗೆ ಉತ್ತಮ ಕಂಟೆಂಟ್ ಇರಬೇಕು. ಮನರಂಜನೀಯ ಸಿನಿಮಾಗಳನ್ನೇ ಮಾಡುತ್ತೇನೆ’ ಎಂದು ಮಾತಿಗೆ ವಿರಾಮವಿತ್ತರು.
‘ನಾನು ಸ್ಟಾರ್ ಮಗನಾಗಿದ್ದರೂ ನೆಪೋಟಿಸಂ ಅಸ್ತಿತ್ವದಲ್ಲಿಲ್ಲ. ತುಂಬ ನಾಯಕರ ಮಕ್ಕಳು ಬಂದು ವಿಫಲರಾಗಿರುವುದೇ ಹೆಚ್ಚು. ಅಪ್ಪನ ಹೆಸರು ಕಾಪಾಡಿಕೊಂಡವರು ಕಡಿಮೆ. ಪರದೆಯಲ್ಲಿ ನೆಪೋಟಿಸಂ ಕೆಲಸ ಮಾಡುವುದಿಲ್ಲ. ಪರದೆಯಲ್ಲಿ ನಾವು ಚೆನ್ನಾಗಿ ಮಾಡಿದಾಗ ಮಾತ್ರ ಜನ ಒಪ್ಪಿಕೊಳ್ಳುತ್ತಾರೆ. ₹200 ಕೊಟ್ಟು ಟಿಕೆಟ್ ಖರೀದಿಸಿದ ಪ್ರೇಕ್ಷಕರನ್ನು ಮನರಂಜಿಸುವುದೇ ನಿಜವಾದ ಸವಾಲು. ಯಾವ ಜಾನರ್‌ನ ಸಿನಿಮಾಗಳನ್ನು ಬೇಕಾದರೂ ಮಾಡಿ, ಆದರೆ ಪ್ರೇಕ್ಷಕರನ್ನು ಮನರಂಜಿಸಬೇಕು’ ಎಂಬುದು ಅವರ ಅಭಿಮತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.