ADVERTISEMENT

‘ವಿಠ್ಠಲ್‌ ರಾವ್‌‌’ ಸರ್ಜರಿ –ಭರ್ಜರಿ ಮಾತು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 19:30 IST
Last Updated 21 ಏಪ್ರಿಲ್ 2020, 19:30 IST
ನಟ ರವಿಶಂಕರ್‌ ಗೌಡ
ನಟ ರವಿಶಂಕರ್‌ ಗೌಡ   

‘ಕಲರ್ಸ್‌ ಕನ್ನಡ ವಾಹಿನಿಯಲ್ಲಿ‘ಸಿಲ್ಲಿ ಲಲ್ಲಿ’ ಧಾರಾವಾಹಿ ಮೊದಲ ಆವೃತ್ತಿಯ ಮರು ಪ್ರಸಾರ ವೀಕ್ಷಿಸುತ್ತಿರುವ ವೀಕ್ಷಕರ ಸಂಖ್ಯೆ ಮೂರು ಕೋಟಿಗೂ ಅಧಿಕ. ಇದಕ್ಕಿಂತ ಸಂತೋಷ ನನಗ್ಯಾಕೆ ಬೇಕು.....ನೋಡಿ ಎಂಜಾಯ್‌ ಮಾಡಿ’ ಎನ್ನುತ್ತಲೇ ಈ ಧಾರಾವಾಹಿಯ ಡಾ.ವಿಠಲ್‌ರಾವ್‌ ಪಾತ್ರದ ಪರಕಾಯ ಪ್ರವೇಶಿಸಿದ್ದ ನಟ ರವಿಶಂಕರ್‌ ಗೌಡ‘ಪ್ರಜಾಪ್ಲಸ್‌‘ ಜತೆಗೆಮಾತಿಗಾರಂಭಿಸಿದರು.

ಈಟಿವಿ ಕನ್ನಡ ವಾಹಿನಿಯಲ್ಲಿ ‘ಸಿಲ್ಲಿ ಲಲ್ಲಿ’ ಹಾಸ್ಯ ಧಾರಾವಾಹಿ ಒಂದೂವರೆ ದಶಕದ ಹಿಂದೆ ಪ್ರಸಾರವಾಗುತ್ತಿತ್ತು. ನಿರ್ದೇಶಕವಿಜಯ ಪ್ರಸಾದ್ ತಮ್ಮ ಫೈನಲ್ ಕಟ್ ಪ್ರೊಡಕ್ಷನ್ ಕಂಪನಿ ಅಡಿ ಈ ಧಾರಾವಾಹಿಯ ಮೊದಲ ಅವತರಿಣಿಕೆ ನಿರ್ದೇಶಿಸಿದ್ದರು. ಈ ಧಾರಾವಾಹಿಯ ಕೇಂದ್ರ ಬಿಂದು ವಿಠಲ್ ರಾವ್ ಒಬ್ಬ ವೈದ್ಯ. ವಿಠಲ್ ರಾವ್ ಮತ್ತು ಅವರ ಕುಟು೦ಬದ ದೈನ೦ದಿನ ಘಟನೆಗಳ ಹಾಸ್ಯವೇ ಈ ಧಾರಾವಾಹಿಯ ಜೀವಾಳ. ಈ ಧಾರಾವಾಹಿಯ ನಕ್ಕು ನಗಿಸುವ ಹಾಸ್ಯಕ್ಕೆ ಮಾರುಹೋಗದವರೇ ಇರಲಿಲ್ಲ. ‘ಐ ಆಮ್ ಡಾಕ್ಟರ್ ವಿಠಲ್ ರಾವ್, ವೆರಿ ಫೇಮಸ್ ಇನ್ ಸರ್ಜರಿ ಅನ್ಡ್ ಭರ್ಜರಿ’ ಎನ್ನುವ ಅವರ ಡೈಲಾಗನ್ನು ಈಗಲೂ ಯಾರೂ ಮರೆತಿಲ್ಲ. ಲಾಕ್‌ಡೌನ್‌ನಲ್ಲಿರುವ ಜನರ ಬೇಸರ ನೀಗಿಸಲು ಕಲರ್ಸ್‌ ಕನ್ನಡ ವಾಹಿನಿ ‘ಸಿಲ್ಲಿ ಲಲ್ಲಿ’ಯ ಮರು ಪ್ರಸಾರ ಆರಂಭಿಸಿದೆ. ಪ್ರತಿ ದಿನ ಬೆಳಿಗ್ಗೆ 10 ಗಂಟೆಗೆ ಇದು ಪ್ರಸಾರವಾಗುತ್ತಿದೆ.

ಸುಮಾರು ಒಂದು ಸಾವಿರದ ನೂರು ಎಪಿಸೋಡ್‌ಗಳವರೆಗೆ ಡಾ.ವಿಠಲ್‌ ರಾವ್‌ ಆಗಿ ಕಾಣಿಸಿಕೊಂಡ ನಟ ರವಿಶಂಕರ್‌ ಗೌಡ ಕಿರುತೆರೆ ವೀಕ್ಷಕರ ಮನದಲ್ಲಿ ಕಾಯಂ ಜಾಗ ಗಿಟ್ಟಿಸಿಕೊಂಡಿದ್ದಾರೆ. ಈಗ ಸಿನಿಮಾ ರಂಗದಲ್ಲಿ ಹಾಸ್ಯ ನಟನಾಗಿ ಅವರು ಬ್ಯುಸಿ.

ADVERTISEMENT

‘ಸಿಲ್ಲಿ ಲಲ್ಲಿ’ಯಿಂದ ನಿಮಗೆ ಸಿಕ್ಕಿದ್ದೇನು? ಎಂದರೆ, ‘ಒಂದಂತು ಸತ್ಯ, ದೊಡ್ಡಮಟ್ಟದ ಜನಪ್ರಿಯತೆ ಸಿಕ್ಕಿತು. ಇನ್ನೂಸಿಗುತ್ತಲೇ ಇದೆ. ಅದು ಮರು ಪ್ರಸಾರವಾದಾಗಲೆಲ್ಲ ನನ್ನ ಜನಪ್ರಿಯತೆ ಹೆಚ್ಚುತ್ತಲೇ ಹೋಗುತ್ತಿದೆ. 2003ರಲ್ಲಿ ಆರಂಭವಾದ ಧಾರಾವಾಹಿ 2007ರವರೆಗೆ ಮುಂದುವರಿದಿತ್ತು. ಈ ಧಾರಾವಾಹಿಯ ಮೊದಲ ಅವತರಿಣಿಕೆಯನ್ನು ನಾಲ್ಕೂವರೆ ವರ್ಷ ಶೂಟಿಂಗ್‌ ಮಾಡಲಾಗಿತ್ತು. ಐದು ವರ್ಷ ಪ್ರಸಾರವಾಯಿತು. 2007ರಿಂದ 2020ರ ನಡುವೆ ನಾಲ್ಕು ಬಾರಿ ಮರು ಪ್ರಸಾರವಾಗುತ್ತಿರುವುದು ದೇಶದಲ್ಲೇ ಅಪರೂಪದ ದಾಖಲೆ.ತುಂಬಾ ಖುಷಿಯ ವಿಚಾರವೂ ಹೌದು’ ಎನ್ನುವ ಮಾತು ಸೇರಿಸಿದರು.

ಎರಡನೇ ಅವತರಣಿಕೆಯಲ್ಲಿ ನಟಿಸುವ ಅವಕಾಶ ನಿರಾಕರಿಸಿದಕಾರಣವನ್ನು ಅವರು ಬಿಚ್ಚಿಟ್ಟಿದ್ದಾರೆ. ‘ಎರಡನೇ ಅವತರಿಣಿಕೆಯಲ್ಲಿ ನಟಿಸಲು ಅವಕಾಶ ಬಂದಿತ್ತು. ಪಾತ್ರ ಒಂದು ಹಂತಕ್ಕೆ ಮುಟ್ಟಿದ ಮೇಲೆ ಅದಕ್ಕಿಂತ ಉತ್ಕೃಷ್ಟವಾದುದು ಇದ್ದರೆ ಮಾತ್ರ ಮಾಡಬೇಕು, ಸುಮ್ಮನೇ ಅದನ್ನೇ ಅನುಕರಿಸುತ್ತಾ, ಜಗ್ಗುತ್ತಾ ಹೋಗುವುದು ನನಗೆ ಇಷ್ಟ ಇರಲಿಲ್ಲ. ಎರಡನೇ ಅವತರಿಣಿಕೆ ಬಗ್ಗೆಯೂ ನನ್ನದೇ ಆದ ಭಿನ್ನಾಭಿಪ್ರಾಯಗಳಿವೆ. ಮೊದಲ ಅವತರಣಿಕೆಯ ನಕಲು ಎರಡನೇ ಅವತರಿಣಿಕೆಯಲ್ಲಿ ಮುಂದುವರಿಯಿತು. ಆದರೆ, ನಮ್ಮ ತಂಡದಲ್ಲಿದ್ದ ಕಲಾವಿದರಾದಮಂಜುಭಾಷಿಣಿ (ಲಲ್ಲಿ),ರೂಪಾ ಪ್ರಭಾಕರ್ (ಸಿಲ್ಲಿ) ಸೇರಿ ನಮ್ಮ ತಂಡದ ಯಾರೂ ಬೇರೆಯವರನ್ನು ಅನುಕರಿಸಲಿಲ್ಲ. ಇಡೀ ಪಾತ್ರಗಳು ಸ್ವಂತ ಛಾಪು ಮೂಡಿಸಿದವು. ನಾವೆಲ್ಲರೂ ಆನ್‌ಸ್ಪಾಟ್ ಸ್ಕ್ರಿಪ್ಟ್‌ನಲ್ಲಿ ಇಲ್ಲದ್ದನ್ನೂ ಪಾತ್ರಕ್ಕೆ ಬೇಕೆನಿಸಿದ ಹೊಸತನ್ನು ಸೇರಿಸುವ, ಸನ್ನಿವೇಶಕ್ಕೆ ತಕ್ಕ ಸಂಭಾಷಣೆಯಪ್ರಯೋಗ ನಡೆಸುವ ಸ್ವಾತಂತ್ರ್ಯವನ್ನು ನಿರ್ದೇಶಕರಿಂದ ಪ‍ಡೆದಿದ್ದೆವು. ಹಾಗಾಗಿ ಆ ಧಾರಾವಾಹಿ ಅಷ್ಟೊಂದು ಜನಪ್ರಿಯವಾಯಿತು ಮತ್ತು ಜನರನ್ನು ರಂಜಿಸಿತು’ ಎನ್ನುವ ಮಾತು ಸೇರಿಸಿದರು ರವಿಶಂಕರ್‌.

ಕಿರುತೆರೆ ಜರ್ನಿಯ ಬಗ್ಗೆ ಮೆಲುಕು ಹಾಕುವ ಅವರು, 1999ರಲ್ಲಿ ಶುರುವಾದ ‘ಜನನಿ’ ನನ್ನ ಮೊದಲ ಧಾರಾವಾಹಿ. ಆಗ ನನಗೆ 18ರ ಹರೆಯ. ನಟಿ ಭಾರತೀ ಅವರ ಅಳಿಯನ ಪಾತ್ರಕ್ಕೆ ಬಣ್ಣ ಹಚ್ಚಿದ್ದೆ. 25 ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಕಿರುತೆರೆ ನನಗೆ ಎಲ್ಲವನ್ನೂ ಕೊಟ್ಟಿದೆ. ಕಿರುತೆರೆ ಎಂದಿಗೂ ಮರೆಯುವುದಿಲ್ಲ. ಒಳ್ಳೆಯ ಸ್ಕ್ರಿಪ್ಟ್‌ ಬಂದರೆ ಮತ್ತೆ ಕಾಣಿಸಿಕೊಳ್ಳಲು ರೆಡಿ’ ಎನ್ನುವುದು ಅವರ ಸಮಜಾಯಿಷಿ.

ಸಿನಿಮಾ ಬಗ್ಗೆ ಮಾತು ಹೊರಳಿದಾಗ, ‘ಕೋಟಿಗೊಬ್ಬ 3’ ಚಿತ್ರದಲ್ಲಿ ಅತಿಥಿ ಪಾತ್ರ, ‘ಪುರುಸೊತ್‌ರಾಮ’ದಲ್ಲಿ ಪ್ರಮುಖ ಪಾತ್ರ ಹಾಗೂ ಎಸ್‌.ನಾರಾಯಣ್‌ ಅವರ ಪುತ್ರ ಪವನ್‌ ನಾಯಕನಾಗಿರುವ'ಮುತ್ತು ರತ್ನ' ಚಿತ್ರದಲ್ಲಿ ಹಾಸ್ಯ ಪಾತ್ರವನ್ನು ರವಿಶಂಕರ್‌ ನಿಭಾಯಿಸಿದ್ದಾರೆ. ಈ ಚಿತ್ರಗಳು ಇನ್ನಷ್ಟೇ ತೆರೆ ಕಾಣಬೇಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.