ದಿಶಾ ಮದನ್
ಬೆಂಗಳೂರು: ನಟಿ ಹಾಗೂ ಮಾಡೆಲ್ ದಿಶಾ ಮದನ್ ಅವರು ಪ್ರತಿಷ್ಠಿತ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ ಮಿಂಚಿದ್ದಾರೆ.
ಫ್ರಾನ್ಸ್‌ನ ಕಾನ್ ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ (2025) ದಿಶಾ ಭಾಗವಹಿಸಿ ಭಾರತೀಯ ಚಿತ್ರರಂಗದವರ ಗಮನ ಸೆಳೆದಿದ್ದಲ್ಲದೇ ವಿಶೇಷ ಉಡುಗೆಯಲ್ಲಿ ಕನ್ನಡದ ಕಂಪನ್ನು, ದಕ್ಷಿಣ ಭಾರತದ ಸಂಸ್ಕೃತಿಯನ್ನು ಪಸರಿಸಿದ್ದಾರೆ.
ದಿಶಾ ಅವರು ಈ ಪ್ರತಿಷ್ಟಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಚೆಟ್ಟಿನಾಡ್ ಬಳಿ ವಿಶೇಷ ಕುಶಲಕರ್ಮಿಗಳು ರೇಷ್ಮೆ ಹಾಗೂ ಚಿನ್ನದ ಎಳೆಗಳಿಂದ ನೇಯ್ದ ವಿಶೇಷ ಕಾಂಚಿವರಂ ಸೀರೆ ಹಾಗೂ ರವಿಕೆಯಲ್ಲಿ ಮಿಂಚಿದ್ದಾರೆ. ಅಲ್ಲದೇ ಗಜರಾಜ್ ಜ್ಯೂವಲರಿಯ ಹಳೆಯ ಸಂಗ್ರಹದಲ್ಲಿನ ವಿಶೇಷ ಚಿನ್ನ, ವಜ್ರಾಭರಣಗಳನ್ನು ಧರಿಸಿದ್ದರು.
‘ತಮಿಳುನಾಡಿನ ಚೆಟ್ಟಿನಾಡ್ ಭಾಗದಲ್ಲಿ 1950ರಲ್ಲಿ ಪ್ರಖ್ಯಾತಿಯಾಗಿದ್ದ ವಧುವಿನ ಉಡುಗೆಯನ್ನು ನಾನು ಧರಿಸಿದ್ದೆ. ಇದು ನನಗೆ ವೇಷಭೂಷಣಕ್ಕಿಂತಲೂ ಹೆಚ್ಚಿನದಾಗಿತ್ತು. ಕಳೆದು ಹೋದ ಸಂಸ್ಕೃತಿಯನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ನೆನಪಿಸಿದ್ದು ಹೆಮ್ಮೆ ಮೂಡಿಸಿತು’ ಎಂದು ದಿಶಾ ಇನ್‌ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
#FromKarnatakatoCannes ಎಂಬ ಹ್ಯಾಶ್‌ಟ್ಯಾಗ್ ಮೂಲಕ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದನ್ನು ಸಂಭ್ರಮಿಸಿದ್ದಾರೆ. ದಿಶಾ ಅವರ ಪ್ರಯತ್ನವನ್ನು ಹಲವರು ಕೊಂಡಾಡಿದ್ದು ಲಕ್ಷಾಂತರ ಜನ ಮೆಚ್ಚಿಕೊಂಡಿದ್ದಾರೆ.
ಮಾಡೆಲಿಂಗ್, ಧಾರಾವಾಹಿ ಲೋಕದಲ್ಲಿ ಸಕ್ರಿಯವಾಗಿರುವ ದಿಶಾ ಮದನ್ ‘ಫ್ರೆಂಚ್ ಬಿರಿಯಾನಿ’ ಎಂಬ ಸಿನಿಮಾದಲ್ಲಿ ಹಾಗೂ ‘ಹಂಬಲ್ ಪೊಲಿಟಿಷಿಯನ್ ನೊಗರಾಜ್’ ಎಂಬ ವೆಬ್ ಸಿರೀಸ್‌ನಲ್ಲಿ ಅಭಿನಯಿಸಿದ್ದಾರೆ.
ಜಗತ್ತಿನ ಖ್ಯಾತ ನಟ, ನಟಿಯರು, ಮಾಡೆಲ್‌ಗಳು ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಾರೆ. ವಾರಗಳ ಕಾಲ ನಡೆಯುವ ಈ ಉತ್ಸವದ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವುದು, ಸಿನಿಮಾ, ಜಾಹೀರಾತು, ಧಾರಾವಾಹಿ ಮಂದಿಗೆ ದೊಡ್ಡ ಆಸೆ.
ಮೊದಲು ‘ಫ್ರಾನ್ಸ್ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ ಎಂದು ಗುರುತಿಸಿಕೊಂಡಿದ್ದ ಕಾನ್ ಚಿತ್ರೋತ್ಸವ ಫ್ರಾನ್ಸ್‌ನ ಬೀಚ್ ನಗರಿ ಕಾನ್‌ನ ಸೌಂದರ್ಯದಿಂದಾಗಿ ಇತ್ತೀಚೆಗೆ ಕಾನ್ ಚಿತ್ರೋತ್ಸವ ಎಂದು ಖ್ಯಾತಿಯಾಗಿದೆ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ಈ ಸಿನಿ ಉತ್ಸವ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.