ಮುಂಬೈ: ‘ವೇವ್ಸ್’ನಲ್ಲಿ ‘ಭಾರತ್ ಪೆವಿಲಿಯನ್’ ಎಂಬ ವೇದಿಕೆ ಇದೆ. ಅಲ್ಲಿ ನವೋದ್ಯಮಗಳಿಗೆಂದೇ ಒಂದು ನಿರ್ದಿಷ್ಟ ಸ್ಥಳ. ಮನರಂಜನಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಹೊಸತನದ ಹುಡುಕಾಟದಲ್ಲಿ ತೊಡಗಿರುವ ಮನಸ್ಸುಗಳು ಅಲ್ಲಿವೆ. ಅಂತಹ ಮನಸ್ಸುಗಳಲ್ಲಿ ಕನ್ನಡದವರೂ ಕಂಡರು. ಒಂದೂವರೆ ದಶಕದ ಹಿಂದೆ ‘ಕಾರಂಜಿ’ ಕನ್ನಡ ಸಿನಿಮಾ ನಿರ್ದೇಶಿಸಿದ್ದ ಶ್ರೀಧರ್ ಈಗ ‘ವಿಷನ್ ಇಂಪ್ಯಾಕ್ಟ್’ ಎಂಬ ನವೋದ್ಯಮದ ಸಿಇಒ ಆಗಿ ಅಲ್ಲಿದ್ದಾರೆ.
ಈಗ ಸಿನಿಮಾಗಳನ್ನು ಅಗತ್ಯಕ್ಕಿಂತ ಅತಿ ಹೆಚ್ಚೇ ಚಿತ್ರೀಕರಿಸುವ ಪರಿಪಾಟವಿದೆ. ಚಿತ್ರೀಕರಿಸಿದ್ದರಲ್ಲಿ ಮೂರನೇ ಒಂದು ಭಾಗವನ್ನಷ್ಟೆ ಸಿನಿಮಾಕ್ಕೆ ಬಳಸುವವರು ಹೆಚ್ಚು. ಬಾಕಿ ಉಳಿದ ಭಾಗಗಳನ್ನು ಒಂದಿಷ್ಟು ವರ್ಷ ಹಾರ್ಡ್ ಡಿಸ್ಕ್‌ನಲ್ಲಿ ಇಟ್ಟುಕೊಳ್ಳಬಹುದು. ಆಮೇಲೆ ಅವನ್ನು ಡಿಲೀಟ್ ಮಾಡದೇ ವಿಧಿಯಿಲ್ಲ. ಶ್ರೀಧರ್ ಅಂತಹ ದೃಶ್ಯಗಳನ್ನು ಸಂರಕ್ಷಿಸಿ ಇಡುವಂತಹ ಆನ್‌ಲೈನ್ ವ್ಯವಸ್ಥೆ ರೂಪಿಸಿದ್ದಾರೆ. ಅದರ ಪೇಟೆಂಟ್‌ಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ.
ಸಿನಿಮಾಕ್ಕೆ ಬಳಸಿಕೊಳ್ಳದೆ ಉಳಿದ ಕೆಲವು ದೃಶ್ಯಗಳನ್ನು ಸಂರಕ್ಷಿಸಿ ಇಡುವುದು ಇವರ ಕಾರ್ಯ. ಹಾಗೆ ಉಳಿಸಿಕೊಂಡ ಕೆಲವು ದೃಶ್ಯಗಳನ್ನು ಬೇರೆ ಚಿತ್ರ ತಯಾರಿಕರಿಗೆ ಪೂರೈಸುವ ಸಾಧ್ಯತೆಯೊಂದರ ಮೇಲೆ ಅವರು ಬೆಳಕು ಚೆಲ್ಲಿದರು. ಟ್ರಾಫಿಕ್, ಜನಸಂದಣಿ, ಸೂರ್ಯೋದಯ, ಸೂರ್ಯಾಸ್ತ, ಯಾವುದೋ ಹಸಿರಿನ ಪರ್ವತ ಹೀಗೆ ಚಿತ್ರೀಕರಿಸಿಕೊಂಡು ಬಳಸಲಾಗದ ಕೆಲವು ದೃಶ್ಯಗಳನ್ನು ಅಗತ್ಯ ಇರುವವರಿಗೆ ದೊರಕಿಸಿಕೊಡಬಹುದು ಎನ್ನುತ್ತಾರೆ ಅವರು.
‘ಫಿಲ್ಮ್ ಫ್ಯೂಷನ್’ ಎನ್ನುವ ಅಭಿಯಾನವೊಂದನ್ನು ಪ್ರಾರಂಭಿಸಲು ಕೂಡ ಶ್ರೀಧರ್ ಮುಂದಾಗಿದ್ದಾರೆ. ಸೆಲೆಬ್ರಿಟಿಗಳಿಂದ ತಲಾ ನೂರು ರೂಪಾಯಿ ದೇಣಿಗೆ ಪಡೆಯುವ ಮೂಲಕ ತಮ್ಮ ಅಭಿಯಾನಕ್ಕೆ ವೇಗ ದಕ್ಕಿಸಿಕೊಡಬೇಕು ಎನ್ನುವುದು ಅವರ ಬಯಕೆ. ಈ ಅಭಿಯಾನವು ‘ವಿಷನ್ ಇಂಪ್ಯಾಕ್ಟ್’ನ ದೂರಾಲೋಚನೆಗೆ ಇಂಬುಗೊಟ್ಟೀತು ಎನ್ನುವುದು ಅವರ ನಿರೀಕ್ಷೆ.
ಬಳ್ಳಾರಿ ಹುಡುಗನ ನವೋದ್ಯಮ: ಮುಂಬೈನಲ್ಲಿ ನೆಲಸಿರುವ ಮನ್ವೇಂದ್ರ ಹಾಗೂ ಮಹಾವೀರ್ ಸೇರಿ ‘ಟ್ರೈಬಲ್ ಗೊರಿಲ್ಲಾ’ ಎಂಬ ನವೋದ್ಯಮ ಕಟ್ಟಿದ್ದಾರೆ. ಮಹಾವೀರ್ ಅವರು ಸಿನಿಮಾ ನಿರ್ದೇಶನದ ಕನಸು ಕಾಣುತ್ತಿದ್ದು, ಬಳ್ಳಾರಿಯಿಂದ ನಾಲ್ಕು ವರ್ಷಗಳ ಹಿಂದೆ ಮುಂಬೈಗೆ ವಲಸೆ ಬಂದರು.
ಚಿತ್ರಕಥೆಯ ಸಂಕ್ಷಿಪ್ತ ಸ್ಕ್ರಿಪ್ಟ್ ನೀಡಿದರೆ, ಅದನ್ನು ದೃಶ್ಯವತ್ತಾದ ‘ಸ್ಟೋರಿ ಬೋರ್ಡ್’ ಆಗಿ ಈ ಸಂಸ್ಥೆ ಮಾಡಿಕೊಡುತ್ತದೆ. ಎರಡು ವರ್ಷಗಳಿಂದ ಜಾಹೀರಾತು ಚಿತ್ರಗಳನ್ನು ಮಾಡುತ್ತಾ ಬಂದಿರುವ ಮಹಾವೀರ್ ಹಾಗೂ ಮನ್ವೇಂದ್ರ, ನಾಲ್ಕು ತಿಂಗಳ ಹಿಂದಷ್ಟೆ ತಮ್ಮ ಹೊಸ ಕಂಪನಿ ಪ್ರಾರಂಭಿಸಿದ್ದಾರೆ. ‘ವೇವ್ಸ್’ನಲ್ಲಿ ತಮ್ಮ ಕೆಲಸ ನೋಡಿದ ಅನೇಕರು ತಮ್ಮ ನೆರವು ಪಡೆಯಲು ಉತ್ಸಾಹ ತೋರಿರುವುದಾಗಿ ಅವರು ಹೆಮ್ಮೆಯಿಂದ ಹೇಳಿದರು.
ಆಸ್ಕರ್ ದಾರಿಯಲ್ಲಿ ‘ಕಾಂತಾರ ಪ್ರೀಕ್ವೆಲ್’ ಪಯಣ
ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಸಹ ಸಂಸ್ಥಾಪಕ ಚಲುವೇಗೌಡ ಅವರು ‘ಕಾಂತಾರ ಪ್ರೀಕ್ವೆಲ್’ ಚಿತ್ರವನ್ನು ಆಸ್ಕರ್ ಸ್ಪರ್ಧೆಯ ಅಂಗಳಕ್ಕೆ ತಲುಪಿಸಲು ಈಗಿನಿಂದಲೇ ಪ್ರಯತ್ನ ನಡೆಸಿರುವುದಾಗಿ ಸಂವಾದವೊಂದರಲ್ಲಿ ತಿಳಿಸಿದರು. ಆಸ್ಕರ್‌ಗೆ ಅರ್ಜಿ ಹಾಕುವ ಮಾರ್ಗದಿಂದ ಹಿಡಿದು ಅದಕ್ಕಾಗಿ ನಡೆಸಬೇಕಾಗಿರುವ ಸಂಕೀರ್ಣ ಪ್ರಯತ್ನಗಳ ಬಗ್ಗೆ ಚಿತ್ರರಂಗದ ಬಹುತೇಕರಿಗೆ ಅರಿವಿಲ್ಲ. ಅದಕ್ಕೆ ಒಂದು ಕಾರ್ಯಾಗಾರವನ್ನೇ ನಡೆಸಬೇಕಾದೀತು ಎನ್ನುತ್ತಾರೆ ಅವರು. ‘ವೇವ್ಸ್ ಬಜಾರ್’ ವೇದಿಕೆಯ ಸಹಯೋಗ ಪಾಲುದಾರ ಸಂಸ್ಥೆಯಾಗಿಯೂ ‘ಹೊಂಬಾಳೆ’ ಗುರುತಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.