ಪ್ರಿರಿಲೀಸ್ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್, ರವಿಚಂದ್ರನ್
ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ನವರಸನ್ ನಿರ್ಮಾಣ ಮಾಡಿರುವ, ಕಿರಣ್ ಕುಮಾರ್ ನಿರ್ದೇಶನದ ಗಾಯಕ ಚಂದನ್ ಶೆಟ್ಟಿ ನಟಿಸಿರುವ ‘ಸೂತ್ರಧಾರಿ’ಯ ಪ್ರಿರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ನಟರಾದ ಶಿವರಾಜ್‌ಕುಮಾರ್ ಹಾಗೂ ರವಿಚಂದ್ರನ್ ಜೊತೆಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಎಂದಿನಂತೆ ಒಂದಿಷ್ಟು ಕಿವಿಮಾತು, ಹಾಸ್ಯದೊಂದಿಗೆ ಮಾತು ಆರಂಭಿಸಿದ ರವಿಚಂದ್ರನ್, ಶಿವರಾಜ್‌ಕುಮಾರ್ ಅವರ ಜೊತೆಗಿನ ಸ್ನೇಹವನ್ನು ಮೆಲುಕು ಹಾಕಿದರು. ‘ನನಗೆ ಶಿವಣ್ಣ ಬಂದಿರುವುದು ಖುಷಿ. ನಾನು ಊಹಿಸಿರಲಿಲ್ಲ. ಸಾಮಾನ್ಯವಾಗಿ ನಾನಿದ್ದ ವೇದಿಕೆಗೆ ಶಿವಣ್ಣ ಬರುವುದಿಲ್ಲ. ಶಿವಣ್ಣ ಇದ್ದ ವೇದಿಕೆಗೆ ನಾನು ಹೋಗುವುದಿಲ್ಲ. ಏಕೆಂದರೆ ನಾನಿದ್ದರೆ ಅವರಿದ್ದ ಹಾಗೆ, ಅವರಿದ್ದರೆ ನಾನಿದ್ದ ಹಾಗೆ. ಪರಸ್ಪರ ಸ್ನೇಹವನ್ನು ಉಳಿಸಿಕೊಂಡಿದ್ದೇವೆ. ಯುದ್ಧ ಮಾಡದೇ ಇರುವ ಇಬ್ಬರೇ ಸ್ಟಾರ್‌ಗಳು ನಾವು. ನಾವಿಬ್ಬರೂ ಸಿನಿಮಾ ಕನಸು ಕಂಡವರು. ಇಬ್ಬರ ಸಿನಿಮಾಗಳು ಒಟ್ಟಿಗೆ ಬಂದರೂ ಒಬ್ಬರಿಗೊಬ್ಬರು ಹಾರೈಸಿದವರು’ ಎಂದರು.
ಮಾತು ಮುಂದುವರಿಸಿ, ‘ಸದ್ಯದ ಸ್ಥಿತಿಯಲ್ಲಿ ಸಿನಿಮಾ ಹಿಟ್ ಆಗಲು ಏನು ಮಾಡಬೇಕೋ ಅದನ್ನು ಮಾಡುವುದು ಈಗಿನ ತುರ್ತು. ಎಲ್ಲರೂ ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್ ಹಿಂದೆ ಬಿದ್ದಿದ್ದಾರೆ. ಚಿತ್ರಮಂದಿರಕ್ಕೆ ಜನರು ಬರುವಂತೆ ಸಿನಿಮಾ ಹೇಗೆ ಮಾಡಬೇಕು ಎನ್ನುವ ಪ್ರಯತ್ನದಲ್ಲಿರಬೇಕು. ಸಿನಿಮಾದ ಬಗ್ಗೆ ಕುತೂಹಲ ಮೂಡಿಸುವುದು ಬಹಳ ಮುಖ್ಯ. ಸಿನಿಮಾಗೆ ಬನ್ನಿ ಬನ್ನಿ ಎಂದು ಕರೆಯುವುದಲ್ಲ. ಸಿನಿಮಾವೇ ಜನರನ್ನು ಚಿತ್ರಮಂದಿರದತ್ತ ಕರೆಯಬೇಕು. ನಾನು, ಶಿವಣ್ಣ ಬಂದ ತಕ್ಷಣ ಜನರು ಸಿನಿಮಾಗೆ ಬರುತ್ತಾರೆ ಎನ್ನುವುದು ಸುಳ್ಳು. ಚಿತ್ರದ ಪ್ರೊಮೊಗಳಿಗೆ, ಪ್ರಚಾರಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತೀರೋ, ಕಥೆ ಬರೆಯುವಾಗಲೂ ಅಷ್ಟೇ ಸಮಯ ನೀಡಿ. ಆ ಕಥೆಯ ಮೇಲೆ ನಂಬಿಕೆ ಇಟ್ಟು ಮುಂದುವರಿದರೆ ಆ ಸಿನಿಮಾ ಗೆದ್ದೇ ಗೆಲ್ಲುತ್ತದೆ. ಸ್ಕ್ರಿಪ್ಟ್ ತಯಾರಿ ಸಂದರ್ಭದಲ್ಲಿ ಹೆಚ್ಚಿನ ಕೆಲಸ ಮಾಡಿ. ನಾವು ಹಿಂದೆ ಸಿನಿಮಾ ಮಾಡುವ ಸಂದರ್ಭದಲ್ಲಿ ಅದರ ಬಗ್ಗೆ ಮಾತನಾಡುತ್ತಿರಲಿಲ್ಲ. ಜನರು ಬಂದು ಸಿನಿಮಾ ವೀಕ್ಷಿಸಿ ಅದನ್ನು ಗೆಲ್ಲಿಸುತ್ತಿದ್ದರು’ ಎಂದು ಕಿವಿಮಾತು ಹೇಳಿದರು.
ಲವಲವಿಕೆಯಿಂದ ಮಾತಿಗಿಳಿದ ಶಿವರಾಜ್‌ಕುಮಾರ್, ‘ಚಂದನ್ ಶೆಟ್ಟಿ ಹಾಡುಗಳು ನನಗೆ ಇಷ್ಟ. ಆ ಹಾಡುಗಳನ್ನು ಗುನುಗುತ್ತಿರುತ್ತೇನೆ. ‘ಟಗರು’ ಸಿನಿಮಾ ಸಂದರ್ಭದಲ್ಲಿ ಹಾಡೊಂದನ್ನು ನನಗೆ ಬರೆದಿದ್ದರು. ಆತ ಅದ್ಭುತ ಸಂಗೀತ ನಿರ್ದೇಶಕ, ಹಾಡುಗಾರ. ಇದೀಗ ನಾಯಕನಾಗಿ ಹೆಜ್ಜೆ ಇಡುತ್ತಿದ್ದಾರೆ. ನಟನಾಗಿ ಅವರಿಗೆ ಅವರದೇ ಆದ ಸ್ಟೈಲ್ ಇದೆ’ ಎಂದರು.
ಚಿತ್ರದ ನಿರ್ಮಾಪಕ ನವರಸನ್ ಮಾತನಾಡಿ, ‘ಓರ್ವ ಹೀರೊಗೆ ಮೊದಲ ಸಿನಿಮಾ ಬಹಳ ಮುಖ್ಯ. ಸುಮಾರು 40 ಜನರಿಗೆ ಈ ಸಿನಿಮಾ ತೋರಿಸಿ ಅವರ ಅಭಿಪ್ರಾಯಗಳನ್ನು ಪಡೆದುಕೊಂಡು ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ಅಂತಿಮ ಸಿನಿಮಾ ಪ್ರತಿ ಸಿದ್ಧಪಡಿಸಲಾಗಿದೆ. ಮೇ 9ರಂದು ಚಿತ್ರ ಪ್ರೇಕ್ಷಕರೆದುರಿಗೆ ಬರಲಿದೆ’ ಎಂದರು.
ಚಿತ್ರರಂಗಕ್ಕೆ ನನ್ನನ್ನು ಪರಿಚಯಿಸಿದ ಗುರು ರವಿಚಂದ್ರನ್. ‘ಅಪೂರ್ವ’ ಸಿನಿಮಾದಲ್ಲಿ ಅವಕಾಶ ಸಿಗದೇ ಹೋಗಿದ್ದರೆ ಈ ವೇದಿಕೆ ಮೇಲೆ ಇರುತ್ತಿರಲಿಲ್ಲ.–ಅಪೂರ್ವ ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.