ADVERTISEMENT

ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗದಂತೆ ವಿಲ್ ಸ್ಮಿತ್‌ಗೆ 10 ವರ್ಷಗಳ ನಿಷೇಧ

ರಾಯಿಟರ್ಸ್
Published 9 ಏಪ್ರಿಲ್ 2022, 3:11 IST
Last Updated 9 ಏಪ್ರಿಲ್ 2022, 3:11 IST
ವಿಲ್ ಸ್ಮಿತ್: ವಿಡಿಯೊ ಸ್ಕ್ರೀನ್ ಗ್ರ್ಯಾಬ್
ವಿಲ್ ಸ್ಮಿತ್: ವಿಡಿಯೊ ಸ್ಕ್ರೀನ್ ಗ್ರ್ಯಾಬ್   

ಲಾಸ್ ಏಂಜಲೀಸ್: ಆಸ್ಕರ್ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಸಹ ನಟನ ಕೆನ್ನೆಗೆ ಬಾರಿಸಿ ಸುದ್ದಿಯಾಗಿದ್ದ ವಿಲ್ ಸ್ಮಿತ್ ಅವರನ್ನು ಹಾಲಿವುಡ್ ಫಿಲ್ಮ್ ಅಕಾಡೆಮಿಯು 10 ವರ್ಷಗಳ ಕಾಲ ಆಸ್ಕರ್‌ ಪ್ರಶಸ್ತಿ ಸಮಾರಂಭಗಳಿಂದ ನಿಷೇಧಿಸಿದೆ.

'ವಿಲ್ ಸ್ಮಿತ್ ಅವರ ರಾಜೀನಾಮೆಯನ್ನು ಅಂಗೀಕರಿಸುವುದರ ಜೊತೆಗೆ ಏಪ್ರಿಲ್ 8, 2022 ರಿಂದ 10 ವರ್ಷಗಳ ಅವಧಿಗೆ ಆಸ್ಕರ್ ಪ್ರಶಸ್ತಿ ಸಮಾರಂಭಗಳಿಗೆ ಭೌತಿಕ ಮತ್ತು ವರ್ಚುವಲ್ ಆಗಿ ಹಾಜರಾಗಲು ಅನುಮತಿ ನೀಡದಿರಲು ಮಂಡಳಿಯ ಸಭೆ ನಿರ್ಧರಿಸಿದೆ’ ಎಂದು ಅಧ್ಯಕ್ಷ ಡೇವಿಡ್ ರೂಬಿನ್ ಮತ್ತು ಸಿಇಒ ಡಾನ್ ಹಡ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಆಸ್ಕರ್ ಪ್ರಶಸ್ತಿ ಸಮಾರಂಭವು ಹಿಂದಿನ ವರ್ಷ ಸಿನಿಮಾ ರಂಗದಲ್ಲಿ ಅಸಾಧಾರಣ ಕೆಲಸ ಮಾಡಿದ ವ್ಯಕ್ತಿಗಳ ಸಂಭ್ರಮದ ಕ್ಷಣವಾಗಿತ್ತು. ಅಂತಹ ಕ್ಷಣಗಳನ್ನು ಹಾಳುಮಾಡಿದ ಸ್ಮಿತ್ ಅವರ ವರ್ತನೆಯು ಸ್ವೀಕಾರರ್ಹವಲ್ಲ’ ಎಂದು ಅಕಾಡೆಮಿ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಈ ಕುರಿತಂತೆ ಪ್ರತಿಕ್ರಿಯಿಸಿರುವವ ಸ್ಮಿತ್, ‘ನಾನು ಅಕಾಡೆಮಿಯ ನಿರ್ಧಾರವನ್ನು ಸ್ವೀಕರಿಸುತ್ತೇನೆ ಮತ್ತು ಗೌರವಿಸುತ್ತೇನೆ‘ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ನೀಡಿದ್ದ ಹೇಳಿಕೆಯಲ್ಲಿ ನಟ ರಾಕ್, ನಿರ್ಮಾಪಕರು, ನಾಮನಿರ್ದೇಶಿತರು ಮತ್ತು ವೀಕ್ಷಕರಿಗೆ ತಮ್ಮ ವರ್ತನೆ ಕುರಿತಂತೆ ಸ್ಮಿತ್ ಕ್ಷಮೆಯಾಚಿಸಿದ್ದರು.

ಚಲನಚಿತ್ರ ಜಗತ್ತಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಆಸ್ಕರ್‌ ಸೇರಿದಂತೆ ಇತರ ಎಲ್ಲಾ ಅಕಾಡೆಮಿ ಕಾರ್ಯಕ್ರಮಗಳಿಂದ ಸ್ಮಿತ್ ಅವರನ್ನು 10 ವರ್ಷಗಳವರೆಗೆ ನಿಷೇಧಿಸಲಾಗಿದೆ.

ಆದರೆ, ಈ 10 ವರ್ಷಗಳ ಅವಧಿಯಲ್ಲಿ ಅವರು ಆಸ್ಕರ್‌ಗೆ ನಾಮನಿರ್ದೇಶನಗೊಳ್ಳಲು ಅನರ್ಹರಾಗುತ್ತಾರೆಯೇ? ಎಂಬುದನ್ನು ಮಂಡಳಿ ಹೇಳಿಲ್ಲ. ವ್ಯಕ್ತಿಯೊಬ್ಬ ಗುಲಾಮಗಿರಿಯಿಂದ ತಪ್ಪಿಸಿಕೊಳ್ಳುವ ಕಥಾಧರಿತ ಸ್ಮಿತ್ ಅವರ ಮುಂದಿನ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಎಮಾನ್ಸಿಪೇಶನ್’, ಈ ವರ್ಷದ ಕೊನೆಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.