ADVERTISEMENT

Ajay Rao‘s Yuddhakanda: ನಿಧಾನಕ್ಕೆ ಜನಮನ್ನಣೆ ಸಿಗುತ್ತಿದೆ; ಪವನ್ ಭಟ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 23:51 IST
Last Updated 23 ಏಪ್ರಿಲ್ 2025, 23:51 IST
<div class="paragraphs"><p>ಪವನ್ ಭಟ್</p></div>

ಪವನ್ ಭಟ್

   

ಅಜಯ್‌ ರಾವ್‌ ನಟಿಸಿ, ನಿರ್ಮಿಸಿರುವ ‘ಯುದ್ಧಕಾಂಡ’ ಚಿತ್ರ ನಿಧಾನಕ್ಕೆ ಜನರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಮತ್ತು ಮಕ್ಕಳ ದುರ್ಬಳಕೆ ಕುರಿತಾದ ಕಥೆಯನ್ನು ಹೊಂದಿರುವ ಈ ಸಿನಿಮಾ ಏ.18 ರಂದು ತೆರೆಕಂಡಿದೆ.

‘ಗಂಭೀರವಾದ ಕಂಟೆಂಟ್‌ ಹೊಂದಿರುವ ಚಿತ್ರ. ಇಂಥ ಸಿನಿಮಾಗಳಿಗೆ ವೀಕೆಂಡ್‌ನಲ್ಲಿ ಜನ ಬರುತ್ತಾರೆ. ಸಾಮಾನ್ಯವಾಗಿ ವಾರದ ದಿನಗಳಲ್ಲಿ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಸಂಖ್ಯೆ ಕುಸಿಯುತ್ತದೆ. ಹೀಗಾಗಿ ಭಯವಿತ್ತು. ಆದರೆ ಚಿತ್ರ ನಿಧಾನಕ್ಕೆ ಜನರನ್ನು ಸೆಳೆಯುತ್ತಿದೆ. ಸೋಮವಾರ, ಮಂಗಳವಾರ ಬೆಂಗಳೂರಿನಲ್ಲಿ ನಾಲ್ಕೈದು ಚಿತ್ರಮಂದಿರಗಳು ಹೌಸ್‌ಫುಲ್‌ ಆಗಿವೆ. ಸಾಕಷ್ಟು ಚಿತ್ರಮಂದಿರಗಳಲ್ಲಿ ಶೇ 80ರಷ್ಟು ಜನರಿದ್ದರು. ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಚಿತ್ರದ ನಿರ್ದೇಶಕ ಪವನ್ ಭಟ್. 

ADVERTISEMENT

‘ನಾನು ಪ್ರಚಲಿತ ವಿದ್ಯಮಾನಗಳನ್ನು ಹೆಚ್ಚು ಗಮನಿಸುತ್ತೇನೆ. ಆಗೆಲ್ಲ ಅತ್ಯಾಚಾರದಂಥ ಪ್ರಕರಣಗಳಲ್ಲಿ ತೀರ್ಪು ಏನಾಯಿತು ಎಂದಷ್ಟೇ ನೋಡುತ್ತಿದ್ದೆ. ಆದರೆ ಒಂದು ಪ್ರಕರಣದ ತೀರ್ಪು ಬರಲು ಎಷ್ಟು ಕಾಲ ಬೇಕಾಯಿತು ಎಂಬುದರ ಕುರಿತು ಗಮನ ಹರಿಸುವ ಅಗತ್ಯವಿದೆ. ಎಷ್ಟೋ ವರ್ಷದಿಂದ ನ್ಯಾಯಕ್ಕಾಗಿ ಕಾಯುತ್ತಿರುವವರ, ಕೋರ್ಟ್‌ಗೆ ಅಲೆಯುತ್ತಿರುವವರ ಕಥೆ ಏನು ಎನ್ನಿಸಿತು. ಹೀಗಾಗಿ ಆ ವಿಷಯವನ್ನು ಅಧ್ಯಯನ ಮಾಡಿ ಕಥೆ ಸಿದ್ಧಪಡಿಸಿದೆ. ಸಿನಿಮಾ ಎಂದರೆ ಮನರಂಜನೆ ನಿಜ. ಇಂಥ ಪ್ರಕರಣಗಳನ್ನು ಸಿನಿಮಾ ಮಾಡಿದರೆ ವ್ಯವಸ್ಥೆ ಸರಿ ಹೋಗುತ್ತದೆಯಾ ಎಂದು ಬಹಳಷ್ಟು ಜನ ಪ್ರಶ್ನಿಸುತ್ತಾರೆ. ಹಾಗಂತ ಪ್ರಶ್ನೆ ಮಾಡದೆ ಕುಳಿತರೆ ಸಮಸ್ಯೆ ತಾನಾಗಿಯೇ ಪರಿಹಾರವಾಗುತ್ತದೆಯಾ?’ ಎನ್ನುತ್ತಾರೆ ಅವರು.

ಅರ್ಚನಾ ಜೋಯ್ಸ್‌ ಚಿತ್ರದ ನಾಯಕಿ. ಪ್ರಕಾಶ್‌ ಬೆಳವಾಡಿ, ಟಿ.ಎಸ್‌.ನಾಗಾಭರಣ ಮುಖ್ಯ ಪಾತ್ರದಲ್ಲಿದ್ದಾರೆ. ವೃತ್ತಿಯಿಂದ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿರುವ ಪವನ್‌ ಭಟ್‌ಗೆ ಎರಡನೇ ಸಿನಿಮಾವಿದು. ಈ ಹಿಂದೆ ಸಿನಿಮಾ ಸಂಕಲನಕಾರನ ಕುರಿತಾದ ಕಥೆ ಹೊಂದಿರುವ ‘ಕಟಿಂಗ್‌ ಶಾಪ್‌’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.