ADVERTISEMENT

ಕರ್ನಾಟಕ ರತ್ನಾಲಂಕಾರಕ್ಕೆ ವರ್ಷಾಭಿಷೇಕ: ಪುನೀತ್‌ ಭಾವಚಿತ್ರಕ್ಕೆ ಪದಕ ಅರ್ಪಣೆ

ಪುನೀತ್‌ ರಾಜಕುಮಾರ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ l ಮಳೆ ಲೆಕ್ಕಿಸದ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 22:18 IST
Last Updated 1 ನವೆಂಬರ್ 2022, 22:18 IST
ಪುನೀತ್‌ ಪುತ್ರಿ ವಂದಿತಾ ಹಾಗೂ ಪತ್ನಿ ಅಶ್ವಿನಿ ಅವರು ‘ಕರ್ನಾಟಕ ರತ್ನ’ ಚಿನ್ನದ ಪದಕವನ್ನು ಪುನೀತ್‌ ಅವರ ಭಾವಚಿತ್ರಕ್ಕೆ ಅರ್ಪಿಸಿದರು
ಪುನೀತ್‌ ಪುತ್ರಿ ವಂದಿತಾ ಹಾಗೂ ಪತ್ನಿ ಅಶ್ವಿನಿ ಅವರು ‘ಕರ್ನಾಟಕ ರತ್ನ’ ಚಿನ್ನದ ಪದಕವನ್ನು ಪುನೀತ್‌ ಅವರ ಭಾವಚಿತ್ರಕ್ಕೆ ಅರ್ಪಿಸಿದರು   

ಬೆಂಗಳೂರು: ನಾಡಿನ ಮನೆ, ಮನದ ನಿಜರತ್ನ ‘ಅಪ್ಪು’ವಿಗೆ ಅಭೂತಪೂರ್ವ ಅಭಿಮಾನದೊಂದಿಗೆ ‘ಕರ್ನಾಟಕ ರತ್ನ‘ ಪ್ರಶಸ್ತಿಯ ಗೌರವ ನೀಡುವಾಗ ಮಳೆಯೂ ಜತೆಗೂಡಿ ಅಭಿಮಾನದ ಅಭಿಷೇಕ ಮಾಡಿತು. ಭಾವುಕ ಕ್ಷಣದಲ್ಲಿ ಹರಿದ ಕಂಬನಿಯನ್ನೂ ವರ್ಷಧಾರೆ ತೊಳೆದು ಹಾಕಿತು.

ವಿಧಾನಸೌಧದ ಮುಂಭಾಗ ನಡೆದ ಸಮಾರಂಭ ಮಳೆಯ ಕಾರಣದಿಂದ ಕೆಲವೇ ನಿಮಿಷಗಳಲ್ಲಿ ಮುಗಿದು ಹೋಯಿತಾದರೂ ಸಾವಿರಾರು ಅಭಿಮಾನಿಗಳ ಪಾಲಿಗೆ ಅದೊಂದು ಅವಿಸ್ಮರಣೀಯ ಘಳಿಗೆಯಾಗಿ ಉಳಿದುಕೊಂಡಿತು. ಮುಖ್ಯಮಂತ್ರಿ ಸಹಿತ ಹಲವು ಗಣ್ಯರು 30 ವರ್ಷಗಳ ಹಿಂದೆ ಡಾ.ರಾಜ್‌ಕುಮಾರ್ ಅವರಿಗೆ ಇದೇ ಸ್ಥಳದಲ್ಲಿ ‘ಕರ್ನಾಟಕ ರತ್ನ’ ನೀಡಿದ್ದು, ಅಂದೂ ಸಹ ಮಳೆ ಸುರಿದದ್ದನ್ನು ನೆನಪಿಸಿಕೊಂಡರು.

ಸಂಜೆ 4.45ರವೇಳೆಗೆ ಕಡುಗಪ್ಪು ಮೋಡಗಳು ಬಾನಿನಲ್ಲಿ ಆವರಿಸಿ ಭಾರೀ ಮಳೆಯ ಸೂಚನೆ ನೀಡಿದವು. ಕತ್ತಲಾವರಿಸಿದಂತೆ ಭಾಸವಾದಾಗ ವಿಧಾನಸೌಧದ ಹಾಲು ಬಿಳಿ ಕಟ್ಟಡದ ಕಾರಿಡಾರ್‌ಗಳಲ್ಲಿ ಹಳದಿ ಕೆಂಪು ದೀಪಗಳು ಹದವಾಗಿ ಬೆಳಗಿ ಸಮಾರಂಭಕ್ಕೆ ಕನ್ನಡಮಯ ಕಳೆ ನೀಡಿದವು. ಗಾಯಕರ ಹಾಡುಗಳಿಗೆ ತಕ್ಕಂತೆ ದೀಪಗಳು ಮಿನುಗಿದವು.

ADVERTISEMENT

ಪ್ರಶಸ್ತಿ ಪ್ರದಾನದ ವೇಳೆ ಧೋ... ಎಂದು ಜೋರಾಗಿ ಸುರಿದ ಮಳೆಯನ್ನು ಅಭಿಮಾನಿಗಳು ಲೆಕ್ಕಿಸಲಿಲ್ಲ. ತಾವಿರುವಲ್ಲಿಯೇ ಕದಲದೆ ನಿಂತಿದ್ದರು. ಮಳೆಯೇ ತನ್ನ ಆರ್ಭಟ ಕಡಿಮೆ ಮಾಡಬೇಕಾಯಿತು.

ಕಾರ್ಯಕ್ರಮ ಮುಗಿದ ಬಳಿಕವೂ ಅಭಿಮಾನದ ಕೂಗು, ಕಲಾ ಮೇಳಗಳ ವಾದ್ಯಗಳ ಸದ್ದು, ಅಪ್ಪುವಿಗೆ ಜಯಘೋಷ ನಿಂತಿರಲಿಲ್ಲ. ದಾರಿಯುದ್ದಕ್ಕೂ ಘೋಷಣೆಗಳು ಮೊಳಗಿದವು. ಬಸ್‌, ಮೆಟ್ರೊಗಳ ಒಳಗೂ ಘೋಷಣೆಗಳು ಜೋರಾಗಿಯೇ ಕೇಳಿಬಂದವು.

ವಿಧಾನಸೌಧದ ಮುಖ್ಯ ರಸ್ತೆಯಲ್ಲಿ ನಾಡು, ನುಡಿ, ಕಲೆ, ಸಂಸ್ಕೃತಿ ಬಿಂಬಿಸುವ ಯಕ್ಷಗಾನ, ವೀರಗಾಸೆ, ಗೊಂಬೆಯಾಟದ ಪ್ರತಿಕೃತಿಗಳು ಗಮನ ಸೆಳೆದವು. ತಮ್ಮ ನೆಚ್ಚಿನ ತಾರೆಯರನ್ನು ನೇರವಾಗಿ ನೋಡಿದ ಅಭಿಮಾನಿಗಳು ದೂರದಲ್ಲೇ ನಿಂತು ಸೆಲ್ಫಿ ತೆಗೆದುಕೊಂಡರು. ವಿಡಿಯೊಗಳನ್ನು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು.

ರಜನಿಕಾಂತ್‌, ಜೂನಿಯರ್‌ ಎನ್‌ಟಿಆರ್‌ ಅತಿಥಿಗಳಾಗಿ ಬಂದ ಕಾರಣ ಅವರ ಅಭಿಮಾನಿಗಳೂ ಭಾರೀ ಸಂಖ್ಯೆಯಲ್ಲಿ ಸೇರಿ ಅವರ ಹೆಸರನ್ನು ಕೂಗುತ್ತಿದ್ದರು. ರಜನಿಕಾಂತ್‌ ವೇದಿಕೆಯೇರಿದಾಗಲಂತೂ ‘ತಲೈವಾ....’ ಕೂಗು ಜೋರಾಗಿಯೇ ಇತ್ತು. ಉಭಯ ನಟರು ಕನ್ನಡದಲ್ಲಿ ಮಾತನಾಡಿದ ಕಾರಣ ಕನ್ನಡ ಪ್ರೇಕ್ಷಕರು ಜೈಕಾರ ಕೂಗಿದರೆ, ನಮ್ಮ ಭಾಷೆಯ ನಟರು ಎಂದು ತಮಿಳು, ತೆಲುಗು ಜನರು ಅಭಿಮಾನ ಮೆರೆದರು. ಹೀಗೆ ಭಾಷಾ ಭಾವೈಕ್ಯಕ್ಕೂ ಸಮಾರಂಭ ವೇದಿಕೆಯಾಯಿತು.

ಅವ್ಯವಸ್ಥೆ, ಗೊಂದಲ: ನಿಗದಿಗಿಂತಲೂ ಹೆಚ್ಚು ಸಂಖ್ಯೆಯ ಪಾಸ್‌ಗಳನ್ನು ನೀಡಲಾಗಿತ್ತು. ಗಣ್ಯರು, ಮಾಧ್ಯಮದವರಿಗೆ ಮೀಸಲಿಟ್ಟಿದ್ದ ಜಾಗದಲ್ಲಿ ಜನ ಗುಂಪು ಸೇರುತ್ತಿದ್ದದ್ದು ನಡೆಯಿತು. ಇವರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡಬೇಕಾಯಿತು. ಸಚಿವ ಎಸ್‌.ಟಿ. ಸೋಮಶೇಖರ್‌ ಮತ್ತು ಆರ್‌. ಅಶೋಕ ಅವರು ಪೊಲೀಸರನ್ನು ಧ್ವನಿವರ್ಧಕದಲ್ಲಿಯೇ ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಪೊಲೀಸರು ತಾಳ್ಮೆ ಕಳೆದುಕೊಂಡು ಹಲವರನ್ನು ತಳ್ಳಿ ಆಕ್ರೋಶ ಹೊರಹಾಕಿದ್ದೂ ನಡೆಯಿತು. ಆದರೂ ಸಾಗಿ ಬರುತ್ತಿದ್ದ ಜನರನ್ನು ನಿಯಂತ್ರಿಸಲಾಗಲಿಲ್ಲ.

ಪುನೀತ್‌ ಭಾವಚಿತ್ರಕ್ಕೆ ಪದಕ ಅರ್ಪಣೆ

ಡಾ. ರಾಜ್‌ ಕುಟುಂಬದ ಎಲ್ಲ ಸದಸ್ಯರು ವಿಶೇಷ ಬಸ್‌ನಲ್ಲಿ ಸಮಾರಂಭದ ಸ್ಥಳಕ್ಕೆ ಆಗಮಿಸಿದರು. ಕಾರ್ಯಕ್ರಮ ಮುಗಿದ ಬಳಿಕ ಕುಟುಂಬದ ಸದಸ್ಯರು ಮನೆಗೆ ಮರಳುತ್ತಿದ್ದಂತೆಯೇ ಪುನೀತ್‌ ಮನೆಯ ಮುಂದೆ ಜಮಾಯಿಸಿದ ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮನೆಯಲ್ಲಿ ತೂಗು ಹಾಕಲಾಗಿದ್ದ ಪುನೀತ್‌ ಭಾವಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರು ‘ಕರ್ನಾಟಕ ರತ್ನ’ ಪದಕವನ್ನು ಅರ್ಪಿಸಿದರು. ಪುತ್ರಿ ವಂದಿತಾ ಕೂಡ ಇದ್ದರು.

ಸಮಾರಂಭದ ಬಳಿಕ ರಜನಿಕಾಂತ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ತೆರಳಿ ಚಹಾ ಸೇವಿಸಿ ವಾಪಸಾದರು.

ಹರಿದ ಜನಸಾಗರ. . .

ವಿಧಾನಸೌಧ ಸಂಪರ್ಕಿಸುವ ಎಲ್ಲ ರಸ್ತೆಗಳೂ ಜನ ದಟ್ಟಣೆಯಿಂದ ಕೂಡಿದ್ದವು. ಕೆ.ಆರ್‌. ರಸ್ತೆ, ಬಸವೇಶ್ವರ ವೃತ್ತದಿಂದ ವಿಧಾನಸೌಧ ಸಂಪರ್ಕಿಸುವ ರಸ್ತೆ, ಕಸ್ತೂರಬಾ ರಸ್ತೆಗೆ ಸಂಪರ್ಕಿಸುವ ವಿಧಾನಸೌಧದ ಮುಖ್ಯರಸ್ತೆ... ಹೀಗೆ ಎಲ್ಲಿ ನೋಡಿದರೂ ಜನವೋ ಜನ. ಎಲ್ಲರ ಕೈಯಲ್ಲಿ ಅರಸಿನ ಕುಂಕುಮ ಬಣ್ಣದ ಧ್ವಜ, ಅದರಲ್ಲಿ ನಗುಮೊಗದ ಪುನೀತ್‌ ಭಾವಚಿತ್ರ. ಪುಟ್ಟ ಗಾತ್ರದಿಂದ ಹಿಡಿದು ನಾಲ್ಕಾರು ಅಡಿಗಳವರೆಗಿನ ಧ್ವಜಗಳೂ ರಾರಾಜಿಸಿದವು. ಕೆಲವರು ಪುನೀತ್‌ ಅವರ ಕಟೌಟ್‌ ಹಿಡಿದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.