ADVERTISEMENT

Kannada Song: ಚಂದನಾ ಅನಂತಕೃಷ್ಣ ನಿರ್ಮಾಣದಲ್ಲಿ ಮೂಡಿದ ಇನ್‌ ಹಿಸ್‌ ನೇಮ್‌

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 23:30 IST
Last Updated 20 ಆಗಸ್ಟ್ 2025, 23:30 IST
   

ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯ ಭೀಕರತೆಯನ್ನು ಚಿತ್ರವೊಂದು ತೆರೆದಿಟ್ಟಿತ್ತು. ಪತಿಯ ಶವದೆದುರು ಮೌನವಾಗಿ ಕುಳಿತ ಪತ್ನಿಯ ಚಿತ್ರ ಎಲ್ಲರ ಮನಸ್ಸಿನಲ್ಲೂ ಹಸಿಯಾಗಿದೆ. ಈ ಘಟನೆಯನ್ನೇ ಆಧಾರವಾಗಿಟ್ಟುಕೊಂಡು, ಅಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ರೂಪದಲ್ಲಿ ತಯಾರಾಗಿರುವ ‘ಇನ್ ಹಿಸ್‌ ನೇಮ್‌’ ಎನ್ನುವ ಕನ್ನಡ ಹಾಡು ಇದೀಗ ಮೆಚ್ಚುಗೆ ಪಡೆಯುತ್ತಿದೆ. ನಟ ಸುದೀಪ್‌ ಅವರೂ ಈ ಹಾಡು ಕೇಳಿ ಮೆಚ್ಚಿ, ಜನರೂ ಇದನ್ನು ನೋಡಬೇಕು ಎಂದಿದ್ದಾರೆ. 

‘ಶಾಖಾಹಾರಿ’ ಸಿನಿಮಾದ ಸಂಗೀತ ನಿರ್ದೇಶಕ ಮಯೂರ್‌ ಅಂಬೆಕಲ್ಲು, ತೇಜಸ್‌ ಕಿರಣ್‌ ಜೊತೆಗೂಡಿ ‘ಭಾವ ತೀರ ಯಾನ’ ಎಂಬ ಸಿನಿಮಾ ನಿರ್ದೇಶಿಸಿದ್ದರು. ತೇಜಸ್‌–ಮಯೂರ್‌ ಸೇರಿಯೇ ‘ಇನ್‌ ಹಿಸ್‌ ನೇಮ್‌’ ಹಾಡನ್ನು ನಿರ್ದೇಶಿಸಿದ್ದು, ಮಯೂರ್‌ ಅವರೇ ಸಂಗೀತ ಸಂಯೋಜಿಸಿದ್ದಾರೆ. ಹಾಡಿನ ಪರಿಕಲ್ಪನೆಯೇ ಭಿನ್ನವಾಗಿದ್ದು, ಈ ಬಗ್ಗೆ ಮಯೂರ್‌ ಮಾತಿಗಿಳಿದರು. 

‘ಹಲವು ವರ್ಷಗಳ ಹಿಂದೆಯೇ ಈ ಹಾಡು ಸಿದ್ಧವಾಗಿತ್ತು. ಚಂದನಾ ಅನಂತಕೃಷ್ಣ ಅವರ ಜೊತೆಗೂಡಿ ಬೇರೊಂದು ಸಂದರ್ಭಕ್ಕೆಂದು ಹಾಡು ಮಾಡಲಾಗಿತ್ತು. ‘ಭಾವ ತೀರ ಯಾನ’ ಸಿನಿಮಾ ಕಾರಣದಿಂದ ಈ ಹಾಡಿನ ಶೂಟಿಂಗ್‌ ವಿಳಂಬವಾಗಿತ್ತು. ಈ ನಡುವೆ ಪಹಲ್ಗಾಮ್‌ ಘಟನೆ ನಡೆಯಿತು. ಇದು ನಮ್ಮ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿತ್ತು. ಅಲ್ಲಿ ನಡೆದ ಘಟನೆಯೂ ಬಹಳ ಕ್ರೂರವಾಗಿತ್ತು. ಈ ಸಂದರ್ಭದಲ್ಲಿ ಈ ಹಾಡನ್ನು ಕೇವಲ ಪ್ರೇಮಗೀತೆಯಾಗಿ ಪ್ರಸ್ತುತಪಡಿಸದೆ ಭಿನ್ನವಾಗಿ ಜನರ ಎದುರಿಗೆ ಇಡುವ ನಿರ್ಧಾರ ಮಾಡಿದೆವು. ತೇಜಸ್‌ ಜೊತೆಗೂಡಿ ಈ ಪರಿಕಲ್ಪನೆಯನ್ನು ಚಂದನಾ ಅವರ ಬಳಿ ಹೇಳಿದಾಗ ಅವರೂ ತಕ್ಷಣದಲ್ಲೇ ಒಪ್ಪಿಕೊಂಡರು. ಕೊಂಚ ಹೆಚ್ಚಿನ ಬಜೆಟ್‌ ಬೇಕಿದ್ದ ಕಾರಣ ಚಂದನಾ ಅವರೇ ನಿರ್ಮಾಣಕ್ಕೆ ಇಳಿದರು. ಪ್ರೀತಿಗೂ–ಭಯೋತ್ಪಾದನೆಗೂ ಎಲ್ಲಿಯ ಸಂಬಂಧ? ಎರಡೂ ತದ್ವಿರುದ್ಧವಾದ ವಿಷಯ. ಹೀಗಾಗಿ ಸಂಕಲನದಲ್ಲಿ ಪ್ರಯೋಗ ಮಾಡಿದೆವು. ಚಂದನಾ ಅವರ ನಟನೆ ಈ ಹಾಡಿಗೆ ಹೊಸ ರೂಪವನ್ನೇ ನೀಡಿದೆ’ ಎಂದರು ಮಯೂರ್‌. 

ADVERTISEMENT

ಚಂದನಾ ಅನಂತಕೃಷ್ಣ

‘ಈ ಪರಿಕಲ್ಪನೆಯಲ್ಲಿ ಮಾಡಲು ನಿರ್ಧರಿಸಿದ ಬಳಿಕ ಕ್ಲೈಮ್ಯಾಕ್ಸ್‌ನ ಟ್ಯೂನ್‌ ಬದಲಾಯಿಸಿದೆವು. ಸಾಹಿತ್ಯದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ. ಬರವಣಿಗೆ ಸಂದರ್ಭದಲ್ಲೇ ದೃಶ್ಯಗಳು ಹೀಗೇ ಬರಬೇಕು ಎಂದು ನಿರ್ಧರಿಸಿದ್ದೆವು. ಬೆಂಗಳೂರು ಹಾಗೂ ಊಟಿಯಲ್ಲಿ ಇದರ ಚಿತ್ರೀಕರಣ ನಡೆಸಿದ್ದೆವು. ಸುದೀಪ್‌ ಅವರು ಕರೆದು ಮಾತನಾಡಿಸಿದಾಗ ಬಹಳ ಖುಷಿಯಾಯಿತು. ನಮ್ಮೊಂದಿಗೆ ಸುಮಾರು 40 ನಿಮಿಷ ಹಾಡಿನ ಬಗ್ಗೆ ಚರ್ಚೆ ಮಾಡಿದರು’ ಎನ್ನುತ್ತಾರೆ ಮಯೂರ್‌. 

‘ಪರಿಕಲ್ಪನೆ ಕೇಳಿ ಮೈಜುಂ ಎಂದಿತ್ತು’

‘ಈ ಪರಿಕಲ್ಪನೆಯನ್ನು ತೇಜಸ್‌–ಮಯೂರ್‌ ಹೇಳಿದಾಕ್ಷಣ ಮೈಜುಂ ಎಂದಿತ್ತು. ಈ ರೀತಿಯಲ್ಲೇ ಹಾಡನ್ನು ನಿರ್ಮಾಣ ಮಾಡಬೇಕು ಎಂದು ನಿರ್ಧರಿಸಿದೆ. ಇದು ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟವರಿಗೆ ನಮ್ಮ ಶ್ರದ್ಧಾಂಜಲಿ. ಸಾಮಾನ್ಯವಾಗಿ ಬರಬೇಕಿದ್ದ ಹಾಡೊಂದು ಭಿನ್ನವಾದ ರೂಪವನ್ನೇ ಪಡೆದಿದೆ. ನನ್ನದು ಅರೇಂಜ್ಡ್‌ ಮದುವೆಯಾದ ಕಾರಣ ಕೆಲ ಸಲಹೆಗಳನ್ನು ನಾನೂ ನೀಡಿದ್ದೆ. ಇದನ್ನು ಬಳಸಿಕೊಂಡು ತೇಜಸ್‌–ಮಯೂರ್‌ ಬದಲಾವಣೆಗಳನ್ನು ಮಾಡಿಕೊಂಡರು. ಈ ಹಾಡಿನ ನಿರ್ಮಾಣಕ್ಕೆ ನಾವು ಬಹಳ ಶ್ರಮ ಹಾಕಿದ್ದೆವು. ಹೀಗಾಗಿ ಬಹಳ ರಿಚ್‌ ಆಗಿಯೇ ಹಾಡು ಮೂಡಿಬಂದಿದೆ. ಹಾಡು ಮೊದಲೇ ರೆಕಾರ್ಡಿಂಗ್‌ ಆಗಿತ್ತು, ಈ ಪರಿಕಲ್ಪನೆಗಾಗಿ ಕೊನೆಯ ಸಾಲುಗಳನ್ನು ರಿರೆಕಾರ್ಡಿಂಗ್‌ ಮಾಡಿದೆವು. ನಿದರ್ಶನ್‌ ಜೊತೆಗೆ ವರ್ಕ್‌ಶಾಪ್‌ ಕೂಡಾ ಮಾಡಿದ್ದೆ. ಹೀಗಾಗಿಯೇ ನಮ್ಮಿಬ್ಬರ ಪಾತ್ರಗಳು ಬಹಳ ನೈಜವಾಗಿ ಬಂದಿದೆ’ ಎಂದರು ಚಂದನಾ ಅನಂತಕೃಷ್ಣ.     

‘ಸುದೀಪ್‌ ಅವರು ಬಹಳ ಸೂಕ್ಷ್ಮವಾಗಿ ಈ ಹಾಡನ್ನು ನೋಡಿದ್ದಾರೆ. ಅವರು ಒಂದೊಂದು ದೃಶ್ಯದ ಬಗ್ಗೆ ಚರ್ಚಿಸಿದರು. ನಮ್ಮ ಈ ಸಣ್ಣ ಪ್ರಯತ್ನಕ್ಕೆ ಅವರ ಬೆಂಬಲ ಕಂಡು ಖುಷಿಯಾಯಿತು. ಮಾಡಿದ ಪ್ರಯತ್ನ ಸಾರ್ಥಕವಾಯಿತು ಎಂದೆನಿಸಿತು’ ಎನ್ನುತ್ತಾರೆ ಚಂದನಾ. 

ಹಾಡು ನಿರ್ಮಾಣ ಮಾಡಿದ ಚಂದನಾ ಅನಂತಕೃಷ್ಣ

ಭಾನುಪ್ರಕಾಶ್ ಜೋಯಿಸ್ ಅವರ ಸಾಹಿತ್ಯವಿರುವ ಈ ಹಾಡನ್ನು ನಟಿ ಚಂದನಾ ಅನಂತಕೃಷ್ಣ ಹಾಡಿದ್ದು, ಅವರೇ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಹಾಡಿನ ನಿರ್ಮಾಣವನ್ನೂ ಚಂದನಾ ಅವರೇ ಮಾಡಿದ್ದಾರೆ. ಚಂದನಾಗೆ ಜೋಡಿಯಾಗಿ ನಿದರ್ಶನ್‌ ನಟಿಸಿದ್ದು, ಶಿವಶಂಕರ್‌ ನೂರಂಬಡ ಛಾಯಾಚಿತ್ರಗ್ರಹಣ, ಅನುರಂಜನ್‌ ಎಚ್‌.ಆರ್‌.ಸಂಕಲನ ಈ ಹಾಡಿಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.