ADVERTISEMENT

ಕರ್ತಾರಪುರ ಗುರುದ್ವಾರ: ಫೋಟೋ ಡಿಲೀಟ್​ ಮಾಡಿದ ಪಾಕಿಸ್ತಾನಿ ರೂಪದರ್ಶಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 10:18 IST
Last Updated 30 ನವೆಂಬರ್ 2021, 10:18 IST
 ಸೌಲೇಹಾ
ಸೌಲೇಹಾ   

ಇಸ್ಲಾಮಾಬಾದ್‌: ಕರ್ತಾರಪುರದ ಗುರುದ್ವಾರ ಎದುರು ಫೋಟೋಶೂಟ್​ ಮಾಡಿ ವಿವಾದ ಸೃಷ್ಟಿಸಿದ್ದ ಪಾಕಿಸ್ತಾನದ ರೂಪದರ್ಶಿ ಸೌಲೇಹಾ ಕ್ಷಮೆ ಕೋರಿದ್ದಾರೆ.

ಕರ್ತಾರಪುರದ ಗುರುದ್ವಾರ ಅಥವಾ ದರ್ಬಾರ್​ ಸಾಹೀಬ್​ ಸಿಖ್ಖರ ಪವಿತ್ರ ಯಾತ್ರಾಸ್ಥಳವಾಗಿದೆ. ಅದರ ಎದುರು ರೂಪದರ್ಶಿ​ ಸೌಲೇಹಾ ಅವರು ವಿವಿಧ ಭಂಗಿಗಳಲ್ಲಿ ಫೋಟೋಶೂಟ್​ ಮಾಡಿಸಿಕೊಂಡಿದ್ದರು. ಬಳಿಕ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಈ ಚಿತ್ರಗಳನ್ನು ವೀಕ್ಷಣೆ ಮಾಡಿದ್ದ ನೆಟ್ಟಿಗರು, ಸಿಖ್ ಸಮುದಾಯದವರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಸೌಲೇಹಾ ಅವರು ತಮ್ಮ ತಲೆಯ ಮೇಲೆ ಯಾವುದೇ ರೀತಿಯ ಬಟ್ಟೆ ಅಥವಾ ವಸ್ತ್ರವನ್ನು ಹಾಕಿಕೊಳ್ಳದೆ ಫೋಟೊ ತೆಗೆಸಿಕೊಂಡಿದ್ದಾರೆ ಎಂದು ದೂರಿದ್ದರು.

ADVERTISEMENT

ಸೌಲೇಹಾ ಅವರು ಸಿಖ್ಖರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸೌಲೇಹಾ ವಿರುದ್ಧಟೀಕೆ, ವ್ಯಂಗ್ಯ, ವಿರೋಧ ವ್ಯಕ್ತವಾಗಿತ್ತು.

ಇದನ್ನು ತಿಳಿದ ಸೌಲೇಹಾ ತಕ್ಷಣಕ್ಕೆ ತಾವು ಪ್ರಕಟಿಸಿದ್ದ ಎಲ್ಲಾ ಫೋಟೊಗಳನ್ನು ಡಿಲೀಟ್‌ ಮಾಡಿ ಕ್ಷಮೆ ಕೋರಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿರುವ ಅವರುನನಗೆ ಯಾರಿಗೂ ಅವಮಾನ ಮಾಡುವ, ಯಾರ ಭಾವನೆಗೂ ಧಕ್ಕೆ ಉಂಟು ಮಾಡುವ ಉದ್ದೇಶ ಇರಲಿಲ್ಲ. ನನ್ನ ತಪ್ಪಿಗೆ ಕ್ಷಮೆ ಇರಲಿ ಎಂದಿದ್ದಾರೆ.

ಕರ್ತಾರಪುರ ಸಾಹೀಬ್​ಗೆ ಪ್ರವಾಸಕ್ಕೆ ಹೋಗಿದ್ದೆ. ಅದರ ನೆನಪಿಗಾಗಿ ಫೋಟೋಗಳನ್ನು ತೆಗೆಸಿಕೊಂಡಿದ್ದೆ ಎಂದು ಸೌಲೇಹಾ ಸ್ಪಷ್ಟನೆ ನೀಡಿದ್ದಾರೆ.

ಗುರುದ್ವಾರದ ಆವರಣದಲ್ಲಿ ಮಹಿಳೆಯರು ತಲೆಯ ಮೇಲೆ ಸೆರಗು, ವಸ್ತ್ರ ಅಥವಾ ಬಟ್ಟೆ ಹಾಕಿಕೊಂಡು ಹೋಗುವುದು ಸಂಪ್ರದಾಯವಾಗಿದೆ. ಆದರೆ ಸೌಲೇಹಾ ಆ ನಿಯಮ ಪಾಲನೆ ಮಾಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.