ADVERTISEMENT

OTT: ಇದು ಕೇವಲ ಕಬಡ್ಡಿ ಕಥೆಯಲ್ಲ; ಕ್ರೀಡಾಲೋಕದ ಅಸಮಾನತೆ ತೆರೆದಿಡುವ ‘ಬೈಸನ್‘

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 9:12 IST
Last Updated 17 ಡಿಸೆಂಬರ್ 2025, 9:12 IST
   

ಚಲನಚಿತ್ರವನ್ನು ದಲಿತರು ಮತ್ತು ತುಳಿತಕ್ಕೊಳಗಾದವರ ಧ್ವನಿಯನ್ನಾಗಿಸುವಲ್ಲಿ ಯಶಸ್ವಿಯಾಗಿರುವ ಮಾರಿ ಸೆಲ್ವರಾಜ್ ಅವರು ನಿರ್ದೇಶಿಸಿರುವ ‘ಬೈಸನ್-ಕಾಲಮಾದನ್’ ಕ್ರೀಡಾ ಲೋಕದಲ್ಲಿನ ಅಸಮಾನತೆಯನ್ನು ತೆರೆದಿಡುವ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತದೆ.

ಧ್ರುವ್ ವಿಕ್ರಮ್ ಮತ್ತು ಅನುಪಮಾ ಪರಮೇಶ್ವರನ್ ಅವರು ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ, ಕಬ್ಬಡಿ ಆಟಗಾರ ಹಾಗೂ ತರಬೇತುದಾರ ಮನತಿ ಗಣೇಶನ್ ಅವರ ಜೀವನಾಧಾರಿತವಾಗಿದೆ.

ಮನತಿ ಎಂಬ ಊರಿನಲ್ಲಿ ಕಿಟ್ಟನ್ (ಧ್ರುವ್ ವಿಕ್ರಮ್) ಎಂಬ ಒಬ್ಬ ಯುವಕ ಇರುತ್ತಾನೆ. ಅವನಿಗೆ ಕಬಡ್ಡಿ ಎಂದರೆ ತುಂಬಾ ಇಷ್ಟ, ಅವನಿಗೆ ಕಬಡ್ಡಿಯಲ್ಲಿ ಭಾರತ ತಂಡದಲ್ಲಿ ಆಟ ಆಡಿ ಸಾಧನೆ ಮಾಡಬೇಕು ಎಂಬ ಕನಸು ಇರುತ್ತದೆ. ಆದರೆ, ಅವರ ಊರಿನಲ್ಲಿ ನಾನು ಹೆಚ್ಚು, ನೀನು ಹೆಚ್ಚು ಎಂಬ ಜಾತಿ ಆಧಾರಿತ ಗಲಾಟೆಗಳು ಇರುತ್ತವೆ.

ADVERTISEMENT

ಊರಿನ ಗಲಾಟೆ, ತಾರತಮ್ಯ, ಕುಟುಂಬದ ಬಡತನದ ನಡುವೆ ಕಿಟ್ಟನ್ ತನ್ನ ಕನಸು ನನಸು ಮಾಡಿಕೊಳ್ಳಲು ಯಾವ ರೀತಿಯಲ್ಲಿ ಹೋರಾಟ ಮಾಡ್ತಾನೆ, ಎನ್ನುವುದು ಸಿನಿಮಾದ ಕಥೆಯಾಗಿದೆ.

ಈ ಸಿನಿಮಾ ಮೇಲ್ನೋಟಕ್ಕೆ ಕ್ರೀಡೆಯನ್ನು ಮುಖ್ಯ ವಿಷಯವನ್ನಾಗಿಟ್ಟುಕೊಂಡು ತೆಗೆದ ಆ್ಯಕ್ಷನ್ ಸಿನಿಮಾದಂತೆಯೇ ಕಾಣುತ್ತದೆ. ಆದರೆ, ಹಳ್ಳಿಗಳಲ್ಲಿ ಹುಟ್ಟಿದ ತಳ ಸಮುದಾಯದ ಪ್ರತಿಭೆ ದೊಡ್ಡಮಟ್ಟದಲ್ಲಿ ಬೆಳೆಯಲು ಯಾವ ರೀತಿಯಲ್ಲಿ ಸವಾಲುಗಳು ಎದುರಾಗುತ್ತವೆ ಎನ್ನುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

ಕಿಟ್ಟನ್ ಪ್ರತಿ ಕ್ಷಣ ಕಬಡ್ಡಿಯನ್ನೇ ಜೀವಿಸುತ್ತಿರುವ ಒಬ್ಬ ಕನಸುಗಾರ. ಅವನು ಒಮ್ಮೆ ಕಬಡ್ಡಿ ಕಣದಲ್ಲಿ ನಿಂತರೆ ಸೋಲುವ ಮಾತೇ ಇಲ್ಲ. ಆದರೂ ಅವನು ಆಟ ಆಡಿ ಮುಂದೆ ಹೋಗಲು, ಯಾವುದೇ ತಂಡ ಅವನನ್ನು ಸೇರಿಸಿಕೊಳ್ಳುವುದಿಲ್ಲ. ಮುಖ್ಯವಾಗಿ ಕಬಡ್ಡಿಯನ್ನು ಬರೀ ಆಟವನ್ನಾಗಿ ನೋಡದೇ ಅದನ್ನು ಒಂದು ಪ್ರತಿಷ್ಠೆಯನ್ನಾಗಿ ನೋಡುವುದು ಅದಕ್ಕೆಲ್ಲ ಕಾರಣ ಎನ್ನುವುದು ಸಿನಿಮಾ ನೋಡಿದರೆ ಗೊತ್ತಾಗುತ್ತದೆ.

ಕಬಡ್ಡಿ ಜೊತೆಗೆ ಬೈಸನ್ ಸಿನಿಮಾದಲ್ಲಿ ರಾಜಕೀಯ, ಪೊಲೀಸ್, ಸಾಮಾಜಿಕ ವ್ಯವಸ್ಥೆಯನ್ನು ಕಟುವಾಗಿ ವಿಮರ್ಶಿಸಲಾಗಿದೆ. ಸಿನಿಮಾದಲ್ಲಿ ನಟಿಸಿರುವ ಧ್ರುವ್ ವಿಕ್ರಮ್ ಅವರ ನಟನೆ, ನೈಜತೆಗೆ ತುಂಬಾ ಹತ್ತಿರವಾಗಿ ಕಾಣುತ್ತದೆ. ಅನುಪಮಾ ಪರಮೇಶ್ವರನ್ ಅವರು ಒಂದು ಭಾವನಾತ್ಮಕ ಪಾತ್ರ ಮಾಡಿದ್ದು, ಅವರ ಪಾತ್ರ ಹೆಚ್ಚು ಮಾತನಾಡುವುದಿಲ್ಲ. ಆದರೆ ಮೌನದಿಂದಲೇ ಅನೇಕ ವಿಷಯಗಳನ್ನೂ ಹೇಳುತ್ತೆ. ಅನುಪಮಾ ಪರಮೇಶ್ವರನ್ ಅವರ ಪಾತ್ರದಿಂದ ಒಂದು ಹೆಣ್ಣಿನ ಮನಸ್ಸಿನಲ್ಲಿರುವ ತುಡಿತಗಳು, ಹೇಗೆ ಮಾಯವಾಗುತ್ತವೆ ಎನ್ನುವುದನ್ನು ಕಟ್ಟಿಕೊಡಲಾಗಿದೆ.

ಸಿನಿಮಾದಲ್ಲಿ ಬರುವ ಎಲ್ಲ ಆ್ಯಕ್ಷನ್ ದೃಶ್ಯಗಳು ಚೆನ್ನಾಗಿ ಮೂಡಿ ಬಂದಿವೆ. ಸಿನಿಮಾ ಪ್ರಾರಂಭದಿಂದ ಕೊನೆಯವರೆಗೂ, ಕುಳಿತವರನ್ನು ಅಲ್ಲಾಡದಂತೆ ಹಿಡಿದಿಟ್ಟುಕೊಳ್ಳುತ್ತದೆ. ಬೈಸನ್ ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡದಲ್ಲಿಯೂ ಪ್ರದರ್ಶನಗೊಳ್ಳುತ್ತಿದ್ದು, ನೋಡಬಹುದಾದ ಚಿತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.