
ನೆಟ್‌ಫ್ಲಿಕ್ಸ್, ಜಿಯೋ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ವಾರ(ಜ.18–ಜ.24) ಹಲವು ಸಿನಿಮಾ ಹಾಗೂ ವೆಬ್ ಸರಣಿಗಳ ಬಿಡುಗಡೆಯಾಗುತ್ತಿವೆ.
ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಬೇರೆ ಬೇರೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ, ನೋಡಲೇಬೇಕಾದ ಸಿನಿಮಾ ಮತ್ತು ವೆಬ್ ಸರಣಿಗಳ ಕುರಿತ ಮಾಹಿತಿ ಇಲ್ಲಿದೆ.
ಸಿನಿಮಾ: ಮಾರ್ಕ್
ಭಾಷೆ: ಕನ್ನಡ
ಒಟಿಟಿ: ಜಿಯೋ ಹಾಟ್‌ಸ್ಟಾರ್
ಬಿಡುಗಡೆ ದಿನಾಂಕ: ಜ.23
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅಭಿನಯದ ಆ್ಯಕ್ಷನ್–ಥ್ರಿಲ್ಲರ್ ಸಿನಿಮಾ ‘ಮಾರ್ಕ್’ ಚಿತ್ರವನ್ನು ಜ.23ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಬಹುದಾಗಿದೆ. 2025ರ ಡಿಸೆಂಬರ್ 25ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಚಿತ್ರವು ₹25 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ವಿಜಯ್ ಕಾರ್ತಿಕೇಯ ನಿರ್ದೇಶಿಸಿದ್ದು, ಸುದೀಪ್, ಡ್ರ್ಯಾಗನ್ ಮಂಜು, ಯೋಗಿ ಬಾಬು, ಗೋಪಾಲ ಕೃಷ್ಣ ದೇಶಪಾಂಡೆ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 48 ಗಂಟೆಯೊಳಗೆ ಮಕ್ಕಳ ಕಳ್ಳಸಾಗಣಿಕೆ ಜಾಲವನ್ನು ಭೇದಿಸಲು ಹೊರಟ ಅಮಾನತ್ತಿನಲ್ಲಿರುವ ಪೊಲೀಸ್ ಅಧಿಕಾರಿಯ ಸುತ್ತ, ಸಿನಿಮಾ ಸಾಗುತ್ತದೆ. ಸುದೀಪ್ ಮಾಸ್ ಗೆಟಪ್‌ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳ ಭಾಷೆಯಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ಸಿನಿಮಾ: 45
ಭಾಷೆ: ಕನ್ನಡ
ಒಟಿಟಿ: ಜೀ 5
ಬಿಡುಗಡೆ ದಿನಾಂಕ: ಜ.23
ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಜೊತೆಯಾಗಿ ನಟಿಸಿರುವ ‘45’ ಸಿನಿಮಾ ಜ.23ರಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ಅರ್ಜುನ್ ಜನ್ಯ ನಿರ್ದೇಶಿಸಿದ್ದಾರೆ. ಗರುಡ ಪುರಾಣದ ಸಾರವೇ ಒಟ್ಟಾರೆ ಚಿತ್ರದ ಕಥಾವಸ್ತುವಾಗಿದ್ದು, ಸಿನಿಮಾದಲ್ಲಿ ಸಾಫ್ಟ್‌ವೇರ್ ಉದ್ಯೋಗಿ ‘ವಿನಯ್’ ಎಂಬ ಪಾತ್ರದಲ್ಲಿ ರಾಜ್, ‘ರಾಯಪ್ಪ’ನಾಗಿ ಉಪೇಂದ್ರ, ‘ಶಿವಪ್ಪ’ನಾಗಿ ಶಿವರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಡಿ.25ರಂದು ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಒಂದೇ ತಿಂಗಳಲ್ಲಿ ಒಟಿಟಿಗೆ ಬರುತ್ತಿದೆ.
ಸಿನಿಮಾ: ಸಿರೈ
ಭಾಷೆ: ತಮಿಳು
ಒಟಿಟಿ: ಜೀ 5
ಬಿಡುಗಡೆ ದಿನಾಂಕ: ಜ.23
ತಮಿಳಿನ ಆ್ಯಕ್ಷನ್–ಥ್ರಿಲ್ಲರ್ ಸಿನಿಮಾ, ‘ಸಿರೈ’ ಜ.23ರಂದು ಜೀ 5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಪೊಲೀಸ್ ಇಲಾಖೆಯಲ್ಲಿನ ಜಾತಿ ತಾರತಮ್ಯ, ಕೆಳ ಹಂತದ ಅಧಿಕಾರಿಗಳ ಸಂಕಷ್ಟ, ಕೈದಿಗಳ ಮನಸ್ಥಿತಿ, ವ್ಯವಸ್ಥೆ, ನ್ಯಾಯಾಂಗ ಪಕ್ಷಪಾತ, ಜಾತಿ ಪದ್ಧತಿ.. ಹೀಗೆ ಹಲವು ಹಂತಗಳಲ್ಲಿ ಪೊಲೀಸ್ ವ್ಯವಸ್ಥೆಯನ್ನು ತೆರೆದಿಡುತ್ತದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿರುವ ನಿರ್ದೇಶಕ–ಬರಹಗಾರ ತಮಿಜ್ ಅವರು ಚಿತ್ರಕತೆ ಬರೆದಿದ್ದಾರೆ. ಚಿತ್ರವು 2025ರ ಡಿ.25ರಂದು ಚಿತ್ರಮಂದಿರದಲ್ಲಿ ತೆರೆಕಂಡಿತ್ತು, ಇದುವರೆಗೆ ₹30 ಕೋಟಿಗೂ ಅಧಿಕ ಗಳಿಕೆ ಮಾಡಿದೆ.
ಸಿನಿಮಾ: ತೇರೆ ಇಷ್ಕ್ ಮೇ
ಭಾಷೆ: ಹಿಂದಿ, ತಮಿಳು
ಒಟಿಟಿ: ನೆಟ್‌ಫ್ಲಿಕ್ಸ್
ಬಿಡುಗಡೆ ದಿನಾಂಕ: ಜ.23
2025ರ ನ.28ರಂದು ಬಿಡುಗಡೆಯಾಗಿದ್ದ ಬಾಲಿವುಡ್‌ನ ‘ತೇರೆ ಇಷ್ಕ್ ಮೇ’ಜ.23ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ತಮಿಳಿನ ಸ್ಟಾರ್ ನಟ ಧನುಷ್ ಹಾಗೂ ಕೃತಿ ಸನೋನ್ ಅವರು ರೋಮ್ಯಾಂಟಿಕ್ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಪ್ರಕಾಶ್ ರೈ, ತೋತಾ ರಾಯ್ ಚೌಧರಿ, ಸುಶೀಲ್ ದಹಿಯಾ ಕೂಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆನಂದ್ ಎಲ್.ರೈ ಚಿತ್ರವನ್ನು ನಿರ್ದೇಶಿಸಿದ್ದಾರೆ. ₹95 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾವು ಹಿಂದಿ, ತಮಿಳು ಭಾಷೆಯಲ್ಲಿ ಒಟ್ಟಿಗೆ ಬಿಡುಗಡೆಯಾಗಿತ್ತು. ಒಟಿಟಿಯಲ್ಲಿ ಕೂಡ ಎರಡೂ ಭಾಷೆಯಲ್ಲಿ ಲಭ್ಯವಿದೆ.
ಭಾಷೆ: ಹಿಂದಿ
ಒಟಿಟಿ: ಜಿಯೋ ಹಾಟ್‌ಸ್ಟಾರ್
ಬಿಡುಗಡೆ ದಿನಾಂಕ: ಜ.23
ಭಾರತದ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೊದ ಬಹುಮುಖ್ಯ ಯೋಜನೆಯಾದ ಚಂದ್ರಯಾನ –3 ಕುರಿತ ವೆಬ್ ಸರಣಿಯೇ ‘ಸ್ಪೇಸ್ ಜೆನ್; ಚಂದ್ರಯಾನ’. ಇದು ನೈಜ ಘಟನೆಯಾಧರಿತ ಸೈನ್ಸ್–ಫಿಕ್ಷನ್ ಸರಣಿಯಾಗಿದೆ. ಚಂದ್ರಯಾನ –2 ವೈಫಲ್ಯದ ನಂತರ, ವಿಜ್ಞಾನಿಗಳು ನಡೆಸುವ ರೋಚಕ ಹೋರಾಟದ ಕುರಿತು ಸರಣಿಯಿದೆ. ನಕುಲ್ ಮೆಹ್ತಾ, ಶ್ರಿಯಾ ಶರಣ್, ಡ್ಯಾನಿಶ್ ಸೇಟ್, ಪ್ರಕಾಶ್ ಬೆಳವಾಡಿ ಅವರು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ವೆಬ್ ಸರಣಿಯಲ್ಲಿ ಒಟ್ಟು 5 ಎಪಿಸೋಡ್‌ಗಳಿವೆ. ಸರಣಿಯು ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳ ಭಾಷೆಯಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.