ADVERTISEMENT

ತತ್ವಪದಗಳಿಗೆ ರಾಕ್‌ ಸ್ಪರ್ಶ: ಯುಟ್ಯೂಬ್‌ಗೆ ಬಂತು ಉಮಾ ರೂಪಿಸಿದ ಮ್ಯೂಸಿಕ್ ಆಲ್ಬಂ

ಸುಬ್ರಹ್ಮಣ್ಯ ಎಚ್.ಎಂ
Published 3 ಫೆಬ್ರುವರಿ 2020, 14:49 IST
Last Updated 3 ಫೆಬ್ರುವರಿ 2020, 14:49 IST
ಉಮಾ ವೈ.ಜಿ,
ಉಮಾ ವೈ.ಜಿ,   

ಸಂತ ಶಿಶುನಾಳ ಷರೀಫರ ತತ್ವಪದಗಳನ್ನು ರಾಕ್‌ ಶೈಲಿಯಲ್ಲಿ ಪ್ರಸ್ತುತಪಡಿಸಲಾಗಿತ್ತು. ಈಗ ಗಾಯಕಿ, ರಂಗನಟಿ ಉಮಾ ವೈ.ಜಿ, ಕೈವಾರ ತಾತಯ್ಯ ಅವರ ಆಯ್ದ ತತ್ವಪದಗಳಿಗೆ ರಾಗ ಸಂಯೋಜಿಸಿ ಹಾಡಿದ್ದಾರೆ.

ಬದುಕಿನ ಸಾರ, ಲೋಕ ವಿರೋಧಿ ನಡೆಯನ್ನು ವಿಡಂಬನಾತ್ಮಕವಾಗಿ ಪದಗಳಲ್ಲಿ ಕಟ್ಟಿಕೊಟ್ಟಿರುವ ಕೈವಾರ ತಾತಯ್ಯ ಅವರದ್ದು ಬಹುಮುಖಿ ತಾತ್ವಿಕ ಚಿಂತನೆ. ಸೌಹಾರ್ದ, ಜಾತ್ಯತೀತ ನೆಲೆಯಲ್ಲಿ ರಚನೆಗೊಂಡಿರುವ ಅವರ ತತ್ವಪದಗಳು ಈಗಾಗಲೇ ಜನ್ನಮನ್ನಣೆಗೆ ಪಾತ್ರವಾಗಿವೆ.

ಉಮಾ ವೈ.ಜಿ.

ತೆಲುಗಿನಲ್ಲಿ ರಚನೆಯಾಗಿರುವ ತಾತಯ್ಯ ಅವರ ತತ್ವಪದಗಳನ್ನು ಉಮಾ ಅವರು ರಾಕ್‌ ಶೈಲಿಗೆ ಒಗ್ಗಿಸಿ ಹಾಡಿದ್ದಾರೆ. ‘ಎಲ್ಲಿಂದ ಬಂದೆ ನೀ ತುಂಬಿಯೇ/ಯಾವ ಊರು ನಿನ್ನದು ತುಂಬಿಯೇ/ ಈ ಊರಿನವರೆಲ್ಲ ತುಂಬಿಯೇ/ ವಿಷಯ ವಿರೋಧಿಗಳು ತುಂಬಿಯೇ ಎನ್ನುವ ತತ್ವಪದ ಇವರ ಮೊದಲ ಅಲ್ಪಂ ಗೀತೆ. ಬೆಂಗಳೂರಿನ ಯಲಹಂಕ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣಗೊಂಡಿದೆ. ಸೈಕಲ್‌, ಆಕಾರ್ಡಿಯನ್ ಪರಿಕರ ಬಳಸಿ ಚಿತ್ರೀಸಿರುವುದು ಇದರ ವಿಶೇಷ‌ತೆ.

ADVERTISEMENT

ಕನ್ನಡ ಕೋಗಿಲೆ ಮತ್ತಿತರ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಉಮಾ, ಅಲ್ಲಿ ಗಳಿಸಿದ ಹಣವನ್ನೇ ಇದಕ್ಕೆ ಬಂಡವಾಳವಾಗಿ ಹೂಡಿದ್ದಾರೆ. ಸಂತ ಶಿಶುನಾಳ ಷರೀಫರ ತತ್ವಪದಗಳು ಲೋಕರೂಢಿಯೊಳಗೆ ಅಂತರ್ಗತವಾಗಿರುವಂತೆಯೇ ಕೈವಾರ ತಾತಯ್ಯ ಅವರ ತತ್ವಪದಗಳ ಸಾರವನ್ನು ಗಾಯನದ ಮೂಲಕ ನಾಡಿನಾದ್ಯಂತ ಕನ್ನಡಿಗರಿಗೆ ಉಣಬಡಿಸುವ ಉದ್ದೇಶ ಅವರದ್ದು.

ಅಲ್ಬಂ ಪೋಸ್ಟರ್‌

ತಾತಯ್ಯ ಅವರ ಇನ್ನೊಂದಷ್ಟು ತತ್ವಪದಗಳಿಗೂ ರಾಗ ಸಂಯೋಜಿಸಿ ಅಲ್ಪಂ ಗುಚ್ಛ ಹೊರ ತರುವ ಆಲೋಚನೆ ಅವರಿಗೆ ಇದೆಯಂತೆ. ಈಗ ಹೊರ ತಂದಿರುವ ‘ಎಲ್ಲಿದೆ ಬಂದೆ ನೀ ತುಂಬಿಯೇ’ ಅಲ್ಬಂನ ನಿರ್ದೇಶನ ಮತ್ತು ಪರಿಕಲ್ಪನೆ ಕಥೆಗಾರ ಮಂಜುನಾಥ್‌ ಎಂ.ವಿ ಅವರದ್ದು. ಮನು ಅವರ ಕ್ಯಾಮೆರಾ ಕೆಲಸ ತಾಜಾತನದಿಂದ ಕೂಡಿದೆ. ರಿದಂ ಕಲಾವಿದ ಮಂಜುನಾಥ್‌ ಎನ್‌.ಎಸ್‌, ವರುಣ್‌ ಪ್ರದೀಪ್, ಚೌವ್ಹಾಣ್‌, ವಾಜೀದ್ ಮೊಯಿನುದ್ದೀನ್‌ ತಂಡದ ಸದಸ್ಯರ ಪರಿಶ್ರಮ ಈ ಅಲ್ಬಂ ನಿರ್ಮಾಣ ಕಾರ್ಯದಲ್ಲಿ ಅಡಗಿದೆ.

ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರ ನಾಯಿ ತಿಪ್ಪ, ಹಾಲು–ನೀರು, ಸಣ್ಣಾಸ್ಪತ್ರೆ ಕ್ಯೂನಲ್ಲಿ ಜಗದಾಂಬೆ ನಾಟಕಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ರಂಗಭೂಮಿ ಪ್ರವೇಶಿಸಿದ ಉಮಾ, ನಂತರದ ದಿನಗಳಲ್ಲಿ ನೀನಾಸಂ ಸೇರಿ ಪದವಿ ಪಡೆದರು. ಅಲ್ಲಿನ ತಿರುಗಾಟದ ನಾಟಕಗಳಲ್ಲೂ ತಮ್ಮದೆ ಛಾಪು ಮೂಡಿಸಿದ ರಂಗನಟಿ.

ಹಾಡಲು ಕೇಳಲು ಲಿಂಕ್‌ ಕೊಂಡಿ: https://youtu.be/lE_48rPfdnk

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.