ADVERTISEMENT

ಬಾಲಿವುಡ್ ನಟ ಸಲ್ಮಾನ್ ಖಾನ್‌, ಅಂಗರಕ್ಷಕನಿಗೆ ಸಮನ್ಸ್ ಜಾರಿಮಾಡಿದ ನ್ಯಾಯಾಲಯ

ಪಿಟಿಐ
Published 23 ಮಾರ್ಚ್ 2022, 16:05 IST
Last Updated 23 ಮಾರ್ಚ್ 2022, 16:05 IST
ಸಲ್ಮಾನ್ ಖಾನ್
ಸಲ್ಮಾನ್ ಖಾನ್   

ಮುಂಬೈ:2019ರ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಸ್ಥಳೀಯ ನ್ಯಾಯಾಲಯವು ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ಅಂಗರಕ್ಷಕ ನವಾಜ್ ಶೇಖ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್.ಆರ್. ಖಾನ್ ಮಂಗಳವಾರ ನೀಡಿರುವ ತಮ್ಮ ಆದೇಶದಲ್ಲಿ, ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಗಮನಿಸಿ ಇಬ್ಬರಿಗೂ ಸಮನ್ಸ್‌ ಹೊರಡಿಸಿದ್ದು, ಮುಂದಿನ ವಿಚಾರಣೆಯನ್ನು ಏ. 5ಕ್ಕೆ ಮುಂದೂಡಿದ್ದಾರೆ.

ಪತ್ರಕರ್ತ ಅಶೋಕ್ ಪಾಂಡೆ ಎಂಬುವವರು, ತಮ್ಮ ದೂರಿನಲ್ಲಿ ನಟ ಸಲ್ಮಾನ್ ಖಾನ್ ಮತ್ತು ಅವರ ಅಂಗರಕ್ಷಕ ಶೇಖ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿದ್ದರು.

ADVERTISEMENT

ಮುಂಬೈ ಬೀದಿಯಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಸಲ್ಮಾನ್ ಖಾನ್ ಅವರ ಫೋಟೊಗಳನ್ನು ಕೆಲವು ಮಾಧ್ಯಮದವರು ಕ್ಲಿಕ್ ಮಾಡಲು ಪ್ರಾರಂಭಿಸಿದಾಗ, ತಮ್ಮ (ಪತ್ರಕರ್ತ) ಮೊಬೈಲ್ ಫೋನ್ ಅನ್ನು ಸಲ್ಮಾನ್ ಕಿತ್ತುಕೊಂಡರು ಎಂದು ಪಾಂಡೆ ಆರೋಪಿಸಿದ್ದಾರೆ. ಈ ವೇಳೆ, ನನ್ನೊಂದಿಗೆ ವಾಗ್ವಾದಕ್ಕಿಳಿದ ಸಲ್ಮಾನ್ ಖಾನ್ ಅವರು, ನನಗೆ ಬೆದರಿಕೆಯೊಡ್ಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಈ ಸಂಬಂಧ ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ನ್ಯಾಯಾಲಯ ಆದೇಶಿಸಿತ್ತು.

ಮಂಗಳವಾರದ ತನ್ನ ಆದೇಶದಲ್ಲಿ, 'ಪೊಲೀಸ್ ವರದಿ ಮತ್ತು ಸಲ್ಲಿಕೆಯಾಗಿರುವ ಇತರ ದಾಖಲೆಗಳನ್ನು ಗಮನಿಸಿದರೆ ಆರೋಪಿಗಳ ವಿರುದ್ಧವಾಗಿ ಸಾಕಷ್ಟು ಆಧಾರಗಳಿವೆ' ಎಂದು ನ್ಯಾಯಾಲಯ ಹೇಳಿದೆ.

ದೂರಿನಲ್ಲಿ ಮಾಡಿರುವ ಆರೋಪಗಳಲ್ಲಿ ಯಾವುದಾದರೂ ಅಂಶ ನಿಜವೆಂದು ಪತ್ತೆಯಾದರೆ ಆಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಗಳಿಗೆ ಸಮನ್ಸ್ ನೀಡುತ್ತದೆ. ಬಳಿಕ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.