ADVERTISEMENT

ನವರಸಗಳ ರಸಪಾಕ (ಚಿತ್ರ: ಕೋ... ಕೋ)

ಅಮಿತ್ ಎಂ.ಎಸ್.
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಕೋತಿಯನ್ನು ಪಳಗಿಸುವುದು ಕಷ್ಟವೇನಲ್ಲ. ಕೋಳಿಯೊಂದಿದ್ದರೆ ಸಾಕು. ಎರಡನ್ನೂ ಒಂದೇ ಕಡೆ ಕಟ್ಟಿಹಾಕಬೇಕು. ಮೊದಲ ದಿನ ಕಚ್ಚಾಡುವ ಎರಡೂ ಒಂದೇ ವಾರದಲ್ಲಿ ಆಪ್ತಸ್ನೇಹಿತರಾಗುತ್ತವೆ.

ಬಳಿಕ ಕೋತಿಯ ಎದುರೇ ಕೋಳಿಯ ಶಿರಚ್ಛೇದನ ಮಾಡಿದರೆ ಸಾಕು, ಕೋತಿ ಶರಣಾಗುತ್ತದೆ. ಮುಂದೆ ಆಡಿಸುವವನದೇ ಆಟ - ಚೀನಾದಲ್ಲಿ ಕೋತಿಯನ್ನು ಪಳಗಿಸಲು ನಡೆಸುವ ತಂತ್ರವಿದು. ಅದನ್ನೇ ಮಗ್ಗುಲಲ್ಲಿ ಇಟ್ಟುಕೊಂಡು ಕೋಳಿ ಕೋತಿಯ ಆಟವಾಡಿದ್ದಾರೆ ನಿರ್ದೇಶಕ ಆರ್.ಚಂದ್ರು.

ಅಂದಹಾಗೆ ಇಲ್ಲಿ ಕೋತಿಯನ್ನು ಪಳಗಿಸಲು ಬಳಸುವ ಕೋಳಿ ಸಾಮಾನ್ಯದ್ದಲ್ಲ. ಹಾಡುತ್ತದೆ, ಕುಣಿಯುತ್ತದೆ, ಪ್ರೀತಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಎದುರಾಳಿಗಳನ್ನು ಲೀಲಾಜಾಲವಾಗಿ ಮಣ್ಣುಮುಕ್ಕಿಸುವಂತೆ ಫೈಟನ್ನೂ ಮಾಡುತ್ತದೆ. ಮುಗ್ಧಮನಸ್ಸಿನ ಈ ಕೋಳಿಯನ್ನು ಕೆರಳಿಸಿದರೆ ಉಳಿಗಾಲವಿಲ್ಲ.

ಚೀನೀಯರ ತಂತ್ರವಿಲ್ಲಿ ಫಲಿಸುವುದಿಲ್ಲ. ಏಕೆಂದರೆ ಕತ್ತಿಯ ಅಲಗಿಗೆ ಕತ್ತು ಕೊಡುವ ಕೋಳಿಯಲ್ಲ ಇದು. ಬದಲಾಗಿ ಕತ್ತಿಯನ್ನೇ ಕುಯ್ಯುತ್ತದೆ! `ಕೋ...ಕೋ~ ಕೋಳಿ ಮತ್ತು ಪಳಗಿಸುವವನ ನಡುವಿನ ಆಟ. ಹಾಗಾಗಿ ಕೋತಿಯ ಬಗ್ಗೆ ಹೆಚ್ಚು ಮಾತಾಡುವ ಅಗತ್ಯವಿಲ್ಲ.

ನಿರ್ದೇಶಕರು ಕೊಟ್ಟ ಆ್ಯಕ್ಷನ್ ಇಮೇಜಿನ ಅಂಗಿಯನ್ನು ಪ್ರೀತಿಯಿಂದಲೇ ಧರಿಸಿದ್ದಾರೆ ನಾಯಕ ಶ್ರೀನಗರ ಕಿಟ್ಟಿ. ಹಾಗಂತ ಹೊಡೆದಾಟವೇ ಇಲ್ಲಿನ ಮುಖ್ಯ ವಸ್ತುವಲ್ಲ. ನಾಯಕ ಐಪಿಎಸ್ ಮಾಡುವ ಕನಸುಳ್ಳವನು. ಹೊಡೆದಾಟದಲ್ಲೂ ಎತ್ತಿದ ಕೈ. ಆತನ ಪಾಲಿಗೆ ಖಳನಾಯಕ ಪೊಲೀಸ್ ಕಮೀಷನರ್. ಕರ್ತವ್ಯಕ್ಕೆ ನಿಷ್ಠನಾಗಿರುವ ಕಮೀಷನರ್‌ಗೆ ಸಾಯಿಸುವ ಕೆಲಸ ಸುಲಭ. ತನ್ನ ಕೈ ಕೆಳಗಿನ ಪೊಲೀಸರಿಗೆ ನೀಡುವ ಕೆಲಸವೂ ಅದೇ.

ಮನೆಬಿಟ್ಟು ಓಡಿ ಹೋಗುವ ಕಮೀಷನರ್ ತಂಗಿಯನ್ನು ವಾಪಸ್ಸು ತರುವುದು ಅವರ ಜವಾಬ್ದಾರಿ. ಆಕೆಯನ್ನು ಎಲ್ಲರಿಂದ ರಕ್ಷಿಸುವ ಹೊಣೆ ನಾಯಕನದು. ಹೀಗೆ ಓಡುವ ತಂಗಿಯೇ ಚಿತ್ರದ ನಾಯಕಿ. ಮೊದಲರ್ಧದಲ್ಲಿ `ಹುಡುಗಾಟ~, `ಮದುವೆ ಮನೆ~ ಹೀಗೆ ಹಲವು ಚಿತ್ರದ ವಾಸನೆ ಸಣ್ಣನೆ ಹಾದು ಹೋಗುತ್ತದೆ.

ನಿರೂಪಣೆಯಲ್ಲಿ ಕಾಣುವ ಶ್ರಮ ಚಿತ್ರಕಥೆ ಹೊಸೆಯುವಿಕೆಯಲ್ಲಿ ಕಾಣುವುದಿಲ್ಲ. ಸಾಹಸ, ಸೆಂಟಿಮೆಂಟ್, ಪ್ರೀತಿ ಪ್ರೇಮ, ಹಾಸ್ಯ, ಹಾಡು ಎಲ್ಲದರ ಹದವಾದ ಮಿಶ್ರಣವಿದೆ. ಅನಿರೀಕ್ಷಿತ ತಿರುವುಗಳು ಪ್ರೇಕ್ಷಕನನ್ನು ಅಚ್ಚರಿಪಡಿಸುವಲ್ಲಿ ಅಲ್ಲಲ್ಲಿ ಯಶಸ್ವಿಯಾಗುತ್ತದೆ.

ಪೊಲೀಸರ ಉಗ್ರವಾದ ಕಥೆಯ ಮೇಲಿನ ಕರಿನೆರಳು. ಕೋಳಿ ಕೋತಿಯಾಟದ ಕಥೆಗೆ ಅಂಥದ್ದೊಂದು ಉಗ್ರತನವನ್ನು ನಿರೂಪಿಸುವ ಜರೂರತ್ತನ್ನು ಸೃಷ್ಟಿಸಲಾಗಿದೆ. ಕಾನೂನು, ನ್ಯಾಯ ನೀತಿಗಳಿಗೆಲ್ಲ ಇಲ್ಲಿ ಅವಕಾಶವಿಲ್ಲ. ಕಲಾವಿದರ ಬಳಗ ಇಡೀ ಚಿತ್ರದ ಮುಖ್ಯ ಜೀವಾಳ. ಕಿಟ್ಟಿ ಚಿತ್ರದ ಆಸ್ತಿ. ಆ್ಯಕ್ಷನ್‌ಗೂ ಸೈ ಎನ್ನಬಲ್ಲೆ ಎಂಬ ವಿಶ್ವಾಸ ಮೂಡಿಸಿದ್ದಾರೆ.

ಕಮೀಷನರ್ ಪಾತ್ರದಲ್ಲಿ ತೆಲುಗಿನ ಶ್ರೀಹರಿ ಇಷ್ಟವಾಗುತ್ತಾರೆ. ದ್ವಿತೀಯಾರ್ಧದಲ್ಲಿ ಕೆಲವೇ ಸನ್ನಿವೇಶಗಳಲ್ಲಿ ಬಂದು ಹೋಗುವ ಹರ್ಷಿಕಾ ಪೂಣಚ್ಚ ಪ್ರಿಯಾಮಣಿಗೆ ಪೈಪೋಟಿ ನೀಡುವಂತೆ ನಟಿಸಿದ್ದಾರೆ. ಬುಲೆಟ್ ಪ್ರಕಾಶ್, ರಂಗಾಯಣ ರಘು, ರಾಜು ತಾಳಿಕೋಟೆ, ಯತಿರಾಜ್, ಸಾಧುಕೋಕಿಲ, ರವಿಕಾಳೆ, ಅನುಪ್ರಭಾಕರ್ ಮುಂತಾದ ಕಲಾವಿದರ ಬಳಗ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದೆ.

ರಮಣ ಗೋಗುಲ ಸಂಗೀತ ಮತ್ತು ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ ಚಿತ್ರದ ಮತ್ತೆರಡು ಮೆಚ್ಚುವಂತಹ ಅಂಶಗಳು. `ಯುವರಾಜ~ ಚಿತ್ರದ ಬಳಿಕ ರಮಣ ಗೋಗುಲ ಕನ್ನಡದಲ್ಲಿ ಮತ್ತೆ ನೀಡಿರುವ ಸಂಗೀತ ವೈವಿಧ್ಯಮಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.