ADVERTISEMENT

ಮರೆವಿನಲ್ಲಿ ಹೊಸಹುಟ್ಟು! (ಚಿತ್ರ: ಚಾಲೆಂಜ್ )

ಚ.ಹ.ರಘುನಾಥ
Published 18 ಆಗಸ್ಟ್ 2012, 19:30 IST
Last Updated 18 ಆಗಸ್ಟ್ 2012, 19:30 IST
ಮರೆವಿನಲ್ಲಿ ಹೊಸಹುಟ್ಟು! (ಚಿತ್ರ: ಚಾಲೆಂಜ್ )
ಮರೆವಿನಲ್ಲಿ ಹೊಸಹುಟ್ಟು! (ಚಿತ್ರ: ಚಾಲೆಂಜ್ )   

ನಿರ್ಮಾಪಕ : ಶ್ರೀಧರನ್
ನಿರ್ದೇಶಕ : ಗಣೇಶ್ ಕಾಮರಾಜ್
ತಾರಾಗಣ : ಅಚ್ಯುತಕುಮಾರ್, ಹರೀಶ್ ರಾಜ್, ದಿಲೀಪ್ ರಾಜ್, ಧರ್ಮ, ಕಲಾಭವನ್ ಮಣಿ, ರಿಯಾಜ್ ಖಾನ್, ಸಂಜನಾ ಸಿಂಗ್, ಇತರರು

ಅಜ್ಞಾತ ಸ್ಥಳವೊಂದಕ್ಕೆ ಹೋದಾಗ ಉಸಿರುಗಟ್ಟಿದಂತೆ ಮುಜುಗರವಾಗುವುದು ಸಹಜ. `ಚಾಲೆಂಜ್~ ಚಿತ್ರದಲ್ಲಿನ ಅಜ್ಞಾತ ಪ್ರದೇಶದಲ್ಲಿ ಬಂಧಿಯಾಗಿರುವ ಆರು ಮಂದಿಯ ಪರಿಸ್ಥಿತಿ ಇನ್ನೂ ಉಸಿರುಗಟ್ಟಿಸುವಂತಿದೆ. ಸ್ಥಳವಷ್ಟೇ ಅಪರಿಚಿತವಲ್ಲ- ಅವರು ಪರಸ್ಪರ ಒಬ್ಬರಿಗೊಬ್ಬರು ಅಪರಿಚಿತರು. ತಮಗೆ ತಾವು ಯಾರೆನ್ನುವುದು ತಿಳಿಯದ ಅಪರಿಚಿತರು!

ತಾವು ಯಾರು? ಇಲ್ಲಿ ಯಾಕೆ ಬಂಧಿಯಾಗಿದ್ದೇವೆ? ಇಲ್ಲಿಂದ ಹೊರಗೆ ಹೋಗುವುದು ಹೇಗೆ?- ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಾ, ಒಬ್ಬರನ್ನೊಬ್ಬರು ಅನುಮಾನಿಸುತ್ತಾ ಸಾಗುವ ಕಥೆ `ಚಾಲೆಂಜ್~ ಚಿತ್ರದ್ದು. ಸಿನಿಮಾ ಭಿನ್ನವೆಂದು ಹೇಳಲಿಕ್ಕೆ ಇಷ್ಟು ಕಥಾಹಂದರ ಸಾಕು. ಪ್ರೇಮ ಹಾಗೂ ಹಿಂಸಾಚಾರದ ಚೌಕಟ್ಟಿನ ಚಿತ್ರಗಳ ನಡುವೆ ಇದು ನಿಸ್ಸಂಶಯವಾಗಿ ಭಿನ್ನ ಸಿನಿಮಾ.

ಕಥೆ ಭಿನ್ನವಾಗಿರುವುದಷ್ಟೇ ಸಿನಿಮಾದ ವಿಶೇಷವಲ್ಲ. ವ್ಯಕ್ತಿಯೊಳಗಿನ ಸಣ್ಣತನಗಳನ್ನೂ ಮನಸ್ಸಿನೊಳಗಿನ ಮೃಗವನ್ನೂ ಕಾಣಿಸುತ್ತಲೇ, ಅವೆಲ್ಲವನ್ನೂ ಮೀರಿ ನಿಲ್ಲುವ ಮಾನವೀಯತೆಯನ್ನು ಚಿತ್ರ ಪ್ರತಿಪಾದಿಸುತ್ತದೆ, ಆ ಕಾರಣಕ್ಕೇ ಇಷ್ಟವಾಗುತ್ತದೆ. ಎದೆಗೆ ಗುಂಡು ತೂರಿಸಿಕೊಂಡು ಸಾಯುತ್ತಾ ಬಿದ್ದಿರುವ ಖಳ ತನ್ನ ಅಳಿಯನಿಗೆ ಹೇಳುತ್ತಾನೆ- `ಬೇಗ ಮನೆಗೆ ಹೋಗು. ಅಲ್ಲಿ ನನ್ನ ಮಗಳು ಊಟ ಮಾಡದೆ ನಿನಗಾಗಿ ಕಾಯುತ್ತಿದ್ದಾಳೆ~.

ಇಲ್ಲಿನ ಮುಖ್ಯ ಪಾತ್ರಗಳಿಗೆ ಮೂರು ಆಯಾಮಗಳಿವೆ. ನೆನಪು ಕಳೆದುಕೊಳ್ಳುವ ಮುಖ ಮೊದಲನೆಯದು. ಮರೆವಿನಲ್ಲಿನ ಅಯೋಮಯ ಪರಿಸ್ಥಿತಿ ಹಾಗೂ ನೆನಪು ಮರುಕಳಿಸುವ ಸ್ಥಿತಿ ಉಳಿದೆರಡು ಮುಖಗಳು.

ಮೊದಲ ಹಂತದಲ್ಲಿ ಕ್ರೂರಿಯಾಗಿದ್ದ ವ್ಯಕ್ತಿ, ಮರೆವಿನಲ್ಲಿ ಮಾನವೀಯತೆ ಮೈಗೂಡಿಸಿಕೊಂಡು, ಎಚ್ಚರದ ನಂತರವೂ ಮಾನವೀಯವಾಗಿಯೇ ಉಳಿಯಲು ಬಯಸುತ್ತಾನೆ. ಇಲ್ಲಿನ ಮರೆವು ಒಂದರ್ಥದಲ್ಲಿ ಪುನರ್ಜನ್ಮ ಕೂಡ. ಕಥೆಯ ಈ ಆರೋಗ್ಯಕರ ಧೋರಣೆ ಸಿನಿಮಾದ ಅರ್ಥ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಖ್ಯಾತನಾಮರಿಲ್ಲದೆ ಸಿನಿಮಾ ರೂಪಿಸುವ `ಚಾಲೆಂಜ್~ಗೆ ಮುಖಾಮುಖಿ ಆಗಿರುವ, ತಮಿಳು ಮೂಲದ ನಿರ್ದೇಶಕ ಗಣೇಶ್ ಕಾಮರಾಜ್ ಅವರದು ಪ್ರಯೋಗಶೀಲ ಮನಸು. ಚಿತ್ರಕಥೆಯ ಬಿಗಿಯಲ್ಲಿ, ನಿರೂಪಣೆಯ ಕಸುಬುದಾರಿಕೆಯಲ್ಲಿ ಅವರು ಗಮನಸೆಳೆಯುತ್ತಾರೆ.
 
ಫ್ಯಾಕ್ಟರಿಯ ಮಂಕು ಬೆಳಕಲ್ಲಿ ಆರು ಮಂದಿ ಅಪರಿಚಿತರನ್ನು ಒಟ್ಟಿಗೆ ಸೇರಿಸಿ ಕಥೆ ಕಟ್ಟುವುದು, ಆ ಮೂಲಕ ಪ್ರೇಕ್ಷಕರನ್ನು ಹಿಡಿದಿಡುವುದು ಸುಲಭವಲ್ಲ. ಈ ಸವಾಲನ್ನು ಗಣೇಶ್ ಪರಿಣಾಮಕಾರಿಯಾಗಿಯೇ ಎದುರಿಸಿದ್ದಾರೆ.
 
ವಿಷಾನಿಲದಿಂದ ನೆನಪು ಕಳಕೊಂಡವರ ತಾಕಲಾಟಗಳ ಮೊದಲರ್ಧ ಹಾಗೂ ಉತ್ತರಾರ್ಧದಲ್ಲಿನ ಮಾದಕ ವಸ್ತು ಜಾಲದ ಕಥನಗಳ ಹೆಣಿಗೆ ಬಿಗಿಯಾಗಿದೆ. ಕಣ್ಣನ್ ಸಂಗೀತ, ಮಗೇಶ್ ಕೆ. ದೇವ್ ಛಾಯಾಗ್ರಹಣ, ಶಾನ್ ಸಂಭಾಷಣೆ- ಯಾವುದೂ ಅತಿರೇಕದಿಂದ ಕೂಡಿಲ್ಲ.

ಸಮಯದ ಗೊಂಬೆಗಳ ಪಾತ್ರದಲ್ಲಿ ಅಚ್ಯುತಕುಮಾರ್, ದಿಲೀಪ್ ರಾಜ್, ಕಲಾಭವನ ಮಣಿ ಹಾಗೂ ಹರೀಶ್ ರಾಜ್ ಗಮನಸೆಳೆಯುತ್ತಾರೆ. ಒಂದೇ ದೃಶ್ಯದಲ್ಲಿ ಕಾಣಿಸಿಕೊಂಡು ನಾಲ್ಕೇ ಮಾತುಗಳಾಡಿದರೂ ಬಿರಾದಾರ್ ನೆನಪಿನಲ್ಲಿ ಉಳಿಯುತ್ತಾರೆ.

ಭ್ರಷ್ಟಾಚಾರ ಹಾಗೂ ಹಿಂಸೆಯ ಕಥನಗಳೇ ವ್ಯಾಪಕವಾಗಿರುವ ಸಮಕಾಲೀನ ಸಮಾಜಕ್ಕೂ ಒಮ್ಮೆ ಈ ಮರೆವು ವ್ಯಾಪಿಸಿಕೊಂಡರೆ ಹೇಗೆ ಎನ್ನುವ ಕಲ್ಪನೆಗೆ `ಚಾಲೆಂಜ್~ ಎಡೆ ಮಾಡಿಕೊಡುತ್ತದೆ. ಹೀಗೆ, ನಮ್ಮಳಗೆ ಬೆಳೆಯುವ ಚಿತ್ರಕಥೆಗಳ ಉದಾಹರಣೆಗಳು ಈಚೆಗೆ ಅಪರೂಪ ಎನ್ನುವುದು ಕೂಡ `ಚಾಲೆಂಜ್~ಗೆ ಸಲ್ಲುವ ಮೆಚ್ಚುಗೆಯೇ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT