ADVERTISEMENT

'ಅಂದೊಂದಿತ್ತು ಕಾಲ' Movie Review: ಸಿನಿಮಾದೊಳಗೊಂದು ಸಿನಿಮಾ ಕಥೆ!

ವಿನಾಯಕ ಕೆ.ಎಸ್.
Published 29 ಆಗಸ್ಟ್ 2025, 14:41 IST
Last Updated 29 ಆಗಸ್ಟ್ 2025, 14:41 IST
ಅದಿತಿ, ವಿನಯ್‌
ಅದಿತಿ, ವಿನಯ್‌   

ಜೀವನದಲ್ಲಿ ಒಂದೆಲ್ಲ ಒಂದು ದಿನ ಸಿನಿಮಾ ಮಾಡಬೇಕು, ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಬೇಕು ಅಥವಾ ನನ್ನ ಹೆಸರು ಬೆಳ್ಳಿಪರದೆಯಲ್ಲಿ ಕಾಣಬೇಕು ಎಂಬುದು ಕಿರುತೆರೆ, ಹಿರಿತೆರೆಗಳಲ್ಲಿ ಕೆಲಸ ಮಾಡುವ ಬಹುತೇಕರ ಕನಸು. ನಟನಾಗಿಯೋ, ನಿರ್ದೇಶಕನಾಗಿಯೋ ಅಥವಾ ಯಾವುದೋ ವಿಭಾಗದ ತಂತ್ರಜ್ಞನಾಗಿಯೋ ಯಶಸ್ಸು ಸಾಧಿಸಬೇಕೆಂದು ಸಿನಿಮಾ ಕ್ಷೇತ್ರಕ್ಕೆ ಬರುತ್ತಾರೆ. ಹಾಗೆ ಕನಸು ಕಟ್ಟಿಕೊಂಡು ಬರುವ ಮಲೆನಾಡು ಭಾಗದ ಹಳ್ಳಿಯ ಹುಡುಗ ಕುಮಾರನ ಬದುಕು, ಬವಣೆಯೆ ‘ಅಂದೊಂದಿತ್ತು ಕಾಲ’ ಚಿತ್ರದ ಒಟ್ಟಾರೆ ಕಥೆ. ಚಿತ್ರ ನಿರ್ದೇಶಕನೊಬ್ಬನ ಹಿಂದಿನ ಮತ್ತು ಪ್ರಸ್ತುತದ ಕಥೆಯನ್ನು ಒಟ್ಟಿಗೆ ಹೇಳುವ ಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಆದರೆ ಬಿಗಿಯಾದ ಚಿತ್ರಕಥೆಯನ್ನು ಹೆಣೆಯುವಲ್ಲಿ ಅಲ್ಲಲ್ಲಿ ಎಡವಿದ್ದಾರೆ.

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಹಳ್ಳಿಗಳಲ್ಲಿ ಟೆಂಟ್‌ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದ್ದ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ‘ನಾಗರಹಾವು’ ಚಿತ್ರ ಬಿಡುಗಡೆಗೊಂಡಾಗ ಈ ಚಿತ್ರದ ನಾಯಕ ಕುಮಾರ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಹುಡುಗ. ಆತನಿಗೆ ಬಾಲ್ಯದಿಂದಲೇ ಸಿನಿಮಾ ಹುಚ್ಚು. ಅಲ್ಲಿಂದಲೇ ಕಥೆ ಪ್ರಾರಂಭವಾಗುತ್ತದೆ. ಆ ಕಾಲಘಟ್ಟದ ಶಾಲೆ, ಕಾಲೇಜು ಜೀವನ, ಹಳ್ಳಿಯಲ್ಲಿನ ಬದುಕನ್ನು ನಿರ್ದೇಶಕರು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಆ ಕಾಲಘಟ್ಟದ ಕಥೆಯಾದರೂ ಚಿತ್ರೀಕರಣಗೊಂಡಿದ್ದು ಈ ಕಾಲದಲ್ಲಿ. ಸೆಟ್‌ ಹಾಕದೆ ಸಹಜವಾದ ಜಾಗಗಳಲ್ಲಿಯೇ ಚಿತ್ರೀಕರಿಸಿದ್ದಾರೆ. ಹೀಗಾಗಿ ಕಥೆ ನಡೆಯುವ ಕೆಲ ಜಾಗಗಳು ಸಹಜವಾಗಿ ಇವತ್ತಿನದ್ದು ಎಂಬ ಭಾವ ಮೂಡಿಸುತ್ತವೆ. ಆದಾಗ್ಯೂ ಛಾಯಾಚಿತ್ರಗ್ರಾಹಕ ಅಭಿಷೇಕ್‌ ಕಾಸರಗೋಡು ಆ ತಪ್ಪುಗಳನ್ನು ಮಾಚಲು ಸಾಕಷ್ಟು ಯತ್ನಿಸಿದ್ದಾರೆ. ಉದಾಹರಣೆಗೆ ಕುಮಾರ ಮತ್ತು ಆತನ ಅಪ್ಪ ಮಾತನಾಡುತ್ತ, ಸೈಕಲ್‌ ತಳ್ಳಿಕೊಂಡು ನಡೆದುಕೊಂಡು ಹೋಗುವ ದೃಶ್ಯವಿದೆ. ಗದ್ದೆ ಬದಿಯಲ್ಲಿ ಅದನ್ನು ಚಿತ್ರೀಕರಿಸಿ, ಯಾವ ಕಾಲಘಟ್ಟದಲ್ಲಿ ಚಿತ್ರೀಕರಣಗೊಂಡಿದ್ದು ಎಂದು ಗೊತ್ತಾಗದಂತೆ ಮಾಡಿದ್ದಾರೆ. ಮೆಜೆಸ್ಟಿಕ್‌, ಕಂಠೀರವ ಸ್ಟುಡಿಯೋ ಮೊದಲಾದ ಸನ್ನಿವೇಶಗಳನ್ನು ಬಹಳ ನಾಜೂಕಿನಿಂದ ನಿಭಾಯಿಸಿದ್ದಾರೆ. ಛಾಯಾಚಿತ್ರಗ್ರಹಣ ಮತ್ತು ಅದಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ಚಿತ್ರದ ಬಹುದೊಡ್ಡ ಶಕ್ತಿ.

ಕಥೆ ಎರಡು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆ. ಒಂದು ನಿರ್ದೇಶಕನಾಗಬೇಕೆಂದು ಬೆಂಗಳೂರಿಗೆ ಬಂದಿರುವ ಕುಮಾರ. ಇನ್ನೊಂದು ಆತನ ನೆನಪಿನಲ್ಲಿ ಅವನ ಬಾಲ್ಯದ ಕಥೆಗಳು. ‘ಅಂದೊಂದಿತ್ತು ಕಾಲ’ ಎಂಬ ಹಳೆಯ ನೆನಪುಗಳನ್ನು ತೆರೆದಿಡುವ ಒಂದಷ್ಟು ಸನ್ನಿವೇಶಗಳೊಂದಿಗೆ ಮೊದಲಾರ್ಧ ಮುಗಿದುಹೋಗುತ್ತದೆ. ಕುತೂಹಲವನ್ನೋ, ತಿರುವುಗಳನ್ನೋ ಹೊಂದಿರುವ ಕಥೆ ಇದಲ್ಲ. ಹೀಗಾಗಿ ಇಲ್ಲಿ ಚಿತ್ರಕಥೆ ಬಹಳ ಮುಖ್ಯ. ಆದರೆ ಚಿತ್ರಕಥೆ ಬಿಗಿಯಿಲ್ಲದೆ ಮೊದಲಾರ್ಧ ಅಲ್ಲಲ್ಲಿ ಸ್ವಲ್ಪ ಉದ್ದ ಎನ್ನಿಸುತ್ತದೆ.

ADVERTISEMENT

ಚಿತ್ರರಂಗಕ್ಕೆ ಕಾಲಿಟ್ಟ ಆತ ಯಶಸ್ವಿ ನಿರ್ದೇಶಕನಾಗುತ್ತಾನೋ ಅಥವಾ ಇಲ್ಲವೋ ಎಂಬುದೇ ಚಿತ್ರದ ದ್ವಿತೀಯಾರ್ಧ. ಕುಮಾರನಾಗಿ ವಿನಯ್‌ ರಾಜ್‌ಕುಮಾರ್‌ ಪಾತ್ರವನ್ನು ಜೀವಿಸಿದ್ದಾರೆ. ಚಿತ್ರರಂಗದಲ್ಲಿ ಸಹ, ಸಹಾಯಕ ನಿರ್ದೇಶಕನಾಗಿ ಅನುಭವಿಸುವ ಸಂಕಷ್ಟಗಳನ್ನೆಲ್ಲ ತೀರ ಸಹಜ ಎನಿಸುವಂತೆ ನಟಿಸಿದ್ದಾರೆ. ಉಳಿದ ಯಾವ ಪಾತ್ರಗಳು ಕಥೆಯ ಮೇಲೆ ಅಷ್ಟೊಂದು ಪ್ರಭಾವ ಬೀರುವುದಿಲ್ಲ, ತೆರೆಯ ಮೇಲೆ ಅವುಗಳಿಗೆ ಸಿಕ್ಕ ಸಮಯವೂ ಕಡಿಮೆ. ಚಿತ್ರರಂಗದ ನಿರ್ದೇಶಕರ ಬದುಕು ಬವಣೆಯನ್ನು ಇನ್ನಷ್ಟು ಚೆಂದವಾಗಿ, ಕಥೆಯನ್ನು ಮತ್ತಷ್ಟು ಭಾವನಾತ್ಮಕವಾಗಿ ಕಟ್ಟಿಕೊಡುವ ಅವಕಾಶವನ್ನು ನಿರ್ದೇಶಕರು ಕೈಚೆಲ್ಲಿದ್ದಾರೆ. 

ನೋಡಬಹುದಾದ ಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.