ಮದುವೆ ಎಲ್ಲರ ಬದುಕಿನ ಪ್ರಮುಖ ಘಟ್ಟ. ಮದುವೆಯಾದ ನಂತರ ಬದುಕು ಬದಲಾಗುತ್ತದೆ. ಅದರಲ್ಲಿಯೂ ಹೆಣ್ಣುಮಕ್ಕಳ ಬದುಕು ಗಂಡ, ಮನೆ, ಮಕ್ಕಳು ಮುಂತಾದ ವಿಷಯಗಳಿಗೆ ಸೀಮಿತವಾಗುತ್ತದೆ. ಮೂವರು ಭಿನ್ನ ಮನಸ್ಥಿತಿಯ ಹೆಣ್ಣುಮಕ್ಕಳ ಕಥೆಯನ್ನು ಹೊಂದಿರುವ ಕಿರುಚಿತ್ರ ಅವಳು. ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಮೂಲಕ ಜನಪ್ರಿಯರಾಗಿರುವ ಪರಮೇಶ್ವರ್ ಕೆ ಚೊಚ್ಚಲ ನಿರ್ದೇಶನದ ಕಿರುಚಿತ್ರವಿದು.
ಕಾಲೇಜಿನಲ್ಲಿ ಓದುತ್ತಿರುವಾಗ ಎಷ್ಟೊಂದು ಜನ ಹೆಣ್ಣು ಮಕ್ಕಳು ಹಾಡು, ನೃತ್ಯ, ನಾಟಕ, ಓದು ಎಲ್ಲದರಲ್ಲಿಯೂ ಮುಂದೆ ಇರುತ್ತಾರೆ. ಕಾಲೇಜು ಮುಗಿದು ಹತ್ತು ವರ್ಷಗಳ ಬಳಿಕ ಅವರನ್ನು ಭೇಟಿ ಮಾಡಿದರೆ ಶೇಕಡ 70ರಷ್ಟು ಜನ ಮದುವೆಯಾಗಿ ಗೃಹಿಣಿಯಾಗಿರುವೆ ಎನ್ನುತ್ತಾರೆ. ಅದೇ ಸಾಲಿಗೆ ಸೇರುವ ಗೃಹಿಣಿ ರಾಜೇಶ್ವರಿಯಿಂದ ಕಥೆ ಪ್ರಾರಂಭವಾಗುತ್ತದೆ. ಮದುವೆಯಾದ ನಂತರವೂ ದೇಶ ಸುತ್ತಿಕೊಂಡು ವ್ಲಾಗ್‌ಗಳನ್ನು ಮಾಡಿಕೊಂಡಿರುವ ಅಶ್ವಿನಿ ತನ್ನ ಗೆಳತಿ ರಾಜೇಶ್ವರಿಯನ್ನು ಹುಡುಕಿಕೊಂಡು ಆಕೆಯ ಮನೆಗೆ ಬರುತ್ತಾಳೆ. ಮಗು ಮಾಡಿಕೊಳ್ಳಬೇಕೆಂಬ ಬಯಕೆಯಲ್ಲಿರುವ ಅಶ್ವಿನಿ ಅದರ ಬಗ್ಗೆ ಆಕೆಯನ್ನು ಕೇಳಿದರೆ, ಆಕೆಯ ಮನೆಯ ದೃಶ್ಯಗಳೊಂದಿಗೆ ಮಕ್ಕಳನ್ನು ಬೆಳೆಸುವ ಕಷ್ಟ, ಆತಂಕ, ಒತ್ತಡಗಳನ್ನು ನಿರ್ದೇಶಕರು ತೋರಿಸುತ್ತ ಹೋಗುತ್ತಾರೆ.
ಇನ್ನೊಂದು ಟ್ರ್ಯಾಕ್‌ನಲ್ಲಿ 36 ವರ್ಷ ಕಳೆದರೂ ಮದುವೆಯಾಗದೇ ಕನ್‌ಸ್ಟ್ರಕ್ಷನ್ ಕಂಪನಿ ಕಟ್ಟಿ ಯಶಸ್ವಿಯಾದ ಸುಧಾಳ ಕಥೆ. ಮದುವೆ ವೃತ್ತಿ ಬದುಕಿನ ಸಾಧನೆಗೆ ಅಡ್ಡಿಯಾಗುತ್ತದೆ ಎಂಬ ಭಾವದಲ್ಲಿರುವ ಸುಧಾಗೆ ಈಗ ಮದುವೆಯಾಗದೆ ತಪ್ಪು ಮಾಡಿದೆ ಎಂಬ ಭಾವ ಕಾಡಲು ಪ‍್ರಾರಂಭವಾಗಿದೆ. ಒಂದು ಕಡೆ ಮದುವೆಯಾಗಿ ಕನಸುಗಳನ್ನು ಚೂರು ಮಾಡಿಕೊಂಡ ರಾಜೇಶ್ವರಿ, ಮಗುವಿನೊಂದಿಗೆ ಹೊಸ ಕನಸಿನಲ್ಲಿರುವ ಅಶ್ವಿನಿ, ಮತ್ತೊಂದೆಡೆ ಜೀವನದಲ್ಲಿ ಸಂಗಾತಿಗಾಗಿ ಹಾತೊರೆಯುತ್ತಿರುವ ಸುಧಾ ಈ ಮೂವರ ಭಾವ ತೊಳಲಾಟದ ನಡುವೆ ಕಥೆ ಸಾಗುತ್ತದೆ. ಈಗಾಗಲೇ ಕೆಲ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದಿರುವ ಈ ಕಿರುಚಿತ್ರದ ಕಥಾಹಂದರ ಕೇವಲ ಅವಳದ್ದು ಮಾತ್ರವಲ್ಲ, ಅವನ ಬದುಕಿನ ಕಥೆಯೂ ಹೌದು ಎಂಬಷ್ಟು ಗಟ್ಟಿಯಾಗಿದೆ.
ಗೃಹಿಣಿ ರಾಜೇಶ್ವರಿಯಾಗಿ ಸವಿತಾ ಪರಮೇಶ್ವರ್ ಇಷ್ಟವಾಗುತ್ತಾರೆ. ಆದರೆ ಉಳಿದ ಕಲಾವಿದರ ನಟನೆ ಸುಧಾರಣೆಗೆ ಅವಕಾಶವಿತ್ತು. ಚಿತ್ರದಲ್ಲಿ ಮಾತಿಗಿಂತ ದೃಶ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವಲ್ಲಿ ನಿರ್ದೇಶಕರು ಇನ್ನಷ್ಟು ಶ್ರಮ ಹಾಕಬಹುದಿತ್ತು. ಸಾಕಷ್ಟು ಕಡೆ ಮಾತಿಗೆ ಕಡಿವಾಣ ಹಾಕಿ ದೃಶ್ಯ ರೂಪದಲ್ಲಿ ತೋರಿಸುವ ಅವಕಾಶವಿತ್ತು.
ಕೆಲ ದೃಶ್ಯಗಳಲ್ಲಿ ಹಿನ್ನೆಲೆ ಸಂಗೀತ ನಡೆಯುತ್ತಿರುವ ದೃಶ್ಯಗಳಿಗೆ ಪೂರಕ ಎನಿಸುವುದಿಲ್ಲ. ಮನೆ ಮತ್ತು ನಾಲ್ಕು ಕಲಾವಿದರನ್ನು ಬಿಟ್ಟು ಬಾರದ ಛಾಯಾಚಿತ್ರಗ್ರಹಣವು ಧಾರಾವಾಹಿ ಎಂಬ ಭಾವನೆ ಮೂಡಿಸುತ್ತದೆ. ಸಾಂಬಾರ್ ಬಿಸಿ ಮಾಡುತ್ತಿರುವಾಗ ಒಲೆ ಉರಿಯದೇ ಇರುವಂತಹ ಚಿತ್ರೀಕರಣದ ದೋಷಗಳಿಗೆ ಸಂಕಲನದಲ್ಲಿ ಕತ್ತರಿ ಹಾಕಬಹುದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.