ADVERTISEMENT

Avatar: Fire and Ash ಸಿನಿಮಾ ವಿಮರ್ಶೆ; ದೃಶ್ಯ ವೈಭವ ಕಣ್ತುಂಬಿಕೊಳ್ಳಿ!

Manjunath C Bhadrashetti
Published 20 ಡಿಸೆಂಬರ್ 2025, 8:05 IST
Last Updated 20 ಡಿಸೆಂಬರ್ 2025, 8:05 IST
<div class="paragraphs"><p>‘ಅವತಾರ್ ಫೈರ್ ಆ್ಯಂಡ್ ಆಶ್’ ಪೋಸ್ಟರ್</p></div>

‘ಅವತಾರ್ ಫೈರ್ ಆ್ಯಂಡ್ ಆಶ್’ ಪೋಸ್ಟರ್

   

X

ಬೆಂಗಳೂರು: ಹಾಲಿವುಡ್‌ನ ತಾರಾ ವರ್ಚಸ್ವಿ ನಿರ್ದೇಶಕ ಜೇಮ್ಸ್ ಕೆಮರೂನ್ ಅವರ ‘ಅವತಾರ್ ಫೈರ್ ಆ್ಯಂಡ್ ಆಶ್’ (ಅವತಾರ್–3) ನಿನ್ನೆ ಜಗತ್ತಿನಾದ್ಯಂತ ಬಿಡುಗಡೆಯಾಗಿ ಸೈನ್ಸ್ ಫಿಕ್ಸನ್ ಥ್ರಿಲ್ಲರ್ ಸಿನಿಮಾ ಪ್ರಿಯರ ಗಮನ ಸೆಳೆದಿದೆ.

ADVERTISEMENT

2009 ರಲ್ಲಿ ‘ಅವತಾರ್’ ಮೊದಲ ಭಾಗ ಬಿಡುಗೆಯಾಗಿದ್ದಾಗ ಅದರ ಕಥೆ, ಚಿತ್ರಕಥೆ, ವಿಎಫ್‌ಎಕ್ಸ್‌, ಸಿಜಿಯಿಂದ ಸಿನಿಮಾ ಲೋಕದಲ್ಲೇ ಹೊಸ ಸಂಚಲನ ಸೃಷ್ಟಿಸಿ ದಾಖಲೆ ನಿರ್ಮಿಸಿತ್ತು. ನಂತರ ಅದೇ ಅಂಶಗಳನ್ನಿಟ್ಟುಕೊಂಡು 2022 ರಲ್ಲಿ ಅವತಾರ್– 2 ಬಿಡುಗಡೆಯಾಗಿತ್ತು. ಇದೀಗ ಮೂರನೇ ಭಾಗದಲ್ಲೂ ಮತ್ತೆ ಅದೇ ಮ್ಯಾಜಿಕ್ ಮುಂದುವರೆದಿದೆ.

ಭೂಮಿಯನ್ನು ಹೋಲುವ ‘ಪಂಡೋರಾ’ ಎಂಬ ಅನ್ಯಗ್ರಹದಲ್ಲಿ 2145ರ ವೇಳೆ ನಡೆಯುವ ಮುಂದುವರೆದ ಕಾಲ್ಪನಿಕ ಕಥೆಯೇ ಈ ದೊಡ್ಡ ಬಜೆಟ್‌ನ ದೊಡ್ಡ ಸಿನಿಮಾಕ್ಕೆ ದೊಡ್ಡ ಕಥೆ. ಮಾನವರು ಹಾಗೂ ಮಾನವರಂತೆ ಕಾಣುವ ಪಂಡೋರಾ ಜೀವಿಗಳ ನಡುವಿನ ಸಂಘರ್ಷದ ಕಥೆಯನ್ನೇ ನಿರ್ದೇಶಕ ಕೆಮರೂನ್ ಮೂರನೇ ಭಾಗಕ್ಕೂ ದಾಟಿಸಿದ್ದಾರೆ.

ಈ ಸರಣಿಯ ಮೊದಲ ಎರಡು ಸಿನಿಮಾಗಳನ್ನು ನೋಡದೇ ನೇರವಾಗಿ ಈ ಸಿನಿಮಾ ನೋಡುವವರಿಗೆ ಗೊಂದಲ ಕಾಡುವುದು ಸಹಜ.

ಹಿಂದಿನ ‘ದಿ ವೇ ಆಫ್ ವಾಟರ್‌’ ಎಲ್ಲಿಗೆ ಮುಕ್ತಾಯ ಕಂಡಿತ್ತೋ ಅಲ್ಲಿಂದ ‘ಅವತಾರ್– ಫೈರ್ ಆ್ಯಂಡ್ ಆ್ಯಶ್’ ತೆರೆದುಕೊಳ್ಳುತ್ತದೆ. ಆರಂಭದಲ್ಲಿ ಕೊಂಚ ನಿಧಾನ ಎನ್ನಿಸಿದರೂ ಆಮೇಲೆ ಮಧ್ಯಂತರದವರೆಗೂ ಚುರುಕಾಗಿ ಸಾಗುತ್ತದೆ. ಮಧ್ಯಂತರದ ನಂತರ ಹಳೆಯ ‘ಅವತಾರ್’ ಸರಣಿಯ ದೃಶ್ಯಗಳು ಅಲ್ಲಲ್ಲಿ ನೆನಪಿಗೆ ಬರುತ್ತವಾದರೂ ಗಟ್ಟಿ ಚಿತ್ರಕಥೆಯಿಂದ ನೋಡುಗರನ್ನು ತಲ್ಲೀನರಾಗಿಸುತ್ತದೆ.

ಭೂಮಿಯ ದುರಾಸೆಯ ನಾಯಕರ ಒತ್ತಾಸೆಯಿಂದ ಪಂಡೋರಾಕ್ಕೆ ಹೋಗಿರುವ ನಾಯಕ ಜೇಕ್ ಸುಲ್ಲಿ ಮನುಷ್ಯರ ವಿರುದ್ಧ ತಿರುಗಿ ಬಿದ್ದು ‘ನಾವಿ’ ಕುಟುಂಬದೊಂದಿಗೆ ನೆಲೆ ನಿಲ್ಲಬೇಕು ಎನ್ನುವಷ್ಟರಲ್ಲಿ ಮತ್ತೆ ಸಂಕಷ್ಟಗಳು ಎದುರಾಗುತ್ತವೆ. ಯುನಿವರ್ಷ್‌ ಅನ್ನೇ ಗೆಲ್ಲಬೇಕು ಎಂದು ಹೊರಟ ಮಾನವರಿಗೆ ‘ಆದಿವಾಸಿಗಳ ತರ ಇರುವವರು ನಮಗ್ಯಾವ ಲೆಕ್ಕ’ ಎಂದು ಅಲ್ಲಿ ಸುಲ್ಲಿಯನ್ನು ಬೆಂಬಿಡದೇ ಕಾಡುತ್ತಾರೆ.

ಭೂಮಿಯ ಜನ ಈ ಸಾರಿ ‘ಪಂಡೋರಾ’ದಲ್ಲಿ ದೊಡ್ಡ ನಗರವನ್ನೇ ನಿರ್ಮಿಸಿರುವುದು ಹಾಗೂ ಅಲ್ಲಿಂದ ಗಣಿಗಾರಿಕೆ ನಡೆಸಿ ಅಮೂಲ್ಯ ವಸ್ತುಗಳನ್ನು ಯಶಸ್ಸಿಯಾಗಿ ಭೂಮಿಗೆ ಕಳುಹಿಸುತ್ತಿರುವುದು ಫೈರ್ ಆ್ಯಂಡ್ ಆಶ್‌ನಲ್ಲಿ ಸೂಚ್ಯವಾಗಿ ಕಾಣುತ್ತದೆ.

ಆದರೆ, ತಮಗೆ ಕಾಟ ಕೊಡುತ್ತಿರುವ ಜೇಕ್ ಸುಲ್ಲಿಯನ್ನು ಹೆಡೆಮುರಿಕಟ್ಟಬೇಕು ಎನ್ನುವ ಹಠ ಮಾನವರಿಗೆ. ಈ ಹಠದಲ್ಲಿ ಈ ಸಾರಿ ‘ಜೇಕ್ ಸುಲ್ಲಿ’ ಯಾವ ರೀತಿಯ ಪ್ರತಿಯೋಧ ತೋರುತ್ತಾನೆ? ಬಲಿಷ್ಠರ ವಿರುದ್ಧ ಮತ್ತೆ ಗೆಲ್ಲುತ್ತಾನೆಯೇ? ಎಂಬುದು ಕಥೆ.

ಮೊದಲ ಎರಡು ಭಾಗಗಳಲ್ಲಿ ನಾಯಕ ಜೇಕ್ ಸುಲ್ಲಿಯ ಧ್ವನಿಯಲ್ಲಿ ಕಥೆಯನ್ನು ನಿರೂಪಿಸಲಾಗಿತ್ತು. ಈ ಭಾಗದಲ್ಲಿ ಆತನ ಮಗ ಲೋಆಕ್ ನಿರೂಪಿಸಿ ‘ಪಂಡೋರಾ’ದಲ್ಲಿ ಸುಲ್ಲಿ ಅಂತ್ಯವಾಗಬಹುದು ಆ ನಂತರ ಆತ ‘ನಾವಿ’ ಸಮುದಾಯದ ನಾಯಕ ಆಗಬಹುದು ಎಂಬ ‘ಕ್ಲೂ‘ ಅನ್ನು ನಿರ್ದೇಶಕರು ನೀಡಿದ್ದಾರೆ.

ವಿಶೇಷ ಎಂದರೆ ‘ಪಂಡೋರಾ’ದಲ್ಲಿ ಈ ಸಾರಿ ಮತ್ತೊಂದು ಜನಾಂಗದ ದರ್ಶನ ಆಗುತ್ತದೆ. ಅವರನ್ನು ‘ವರಾಂಗ’ ಎನ್ನಲಾಗುತ್ತದೆ. ಇವರು ಬೆಂಕಿಯೊಂದಿಗೆ ಸರಸವಾಡುತ್ತಾ ಬೂದಿಯೊಂದಿಗೆ ಬದುಕುವವರು. ತಾವು ಬದುಕಲು ತಮ್ಮದೇ ಗ್ರಹದ ಬೇರೆ ಜನರ ಮೇಲೆ ಮಾರಕವಾಗಿ ದಾಳಿ ಮಾಡುವಂತವರು. ಈ ವರಾಂಗ ಗುಂಪಿನ ನಾಯಕಿಯೇ ಚಿತ್ರದಲ್ಲಿ ಹೈಲೈಟ್.

ಎಲ್ಲಕ್ಕಿಂತಲೂ ಈ ಸಿನಿಮಾದ ದೊಡ್ಡ ಶಕ್ತಿ ಎಂದರೆ ಅದು ‘ಪಂಡೋರಾ’ ಜಗತ್ತಿನ ದೃಶ್ಯ ವೈಭವ. ವಿಷುವಲ್ ಎಕ್ಸ್‌ಪಿರೀಯನ್ಸ್ ಎಂಬುದನ್ನು ನಿರ್ದೇಶಕರು ನೆಕ್ಸ್ಟ್‌ ಲೆವೆಲ್ ಎಂಬಂತೆ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಈ ಅನುಭವ ನೋಡುಗರಿಗೆ ಸಿಗಬೇಕಾದರೆ ಸಿನಿಮಾವನ್ನು ‘ಐಮ್ಯಾಕ್ಸ್‌ 3D’ ಪರದೆಯಲ್ಲೇ ನೋಡಬೇಕು. ವಿಶೇಷವಾಗಿ ಸಿನಿಮಾ ತಂಡ ಎಲ್ಲ ಕಡೆಯೂ ಇದನ್ನೇ ಹೇಳಿದೆ. ಎಲ್ಲವೂ ನಮ್ಮ ಕಣ್ಮುಂದೆ ನಡೆಯುತ್ತಿದೆಯೇನೋ ಎಂಬಂತೆ ಬಾಸವಾಗುತ್ತಾ ದೃಶ್ಯ ವೈಭವದ ಥ್ರಿಲ್‌ಗಳೊಂದಿಗೆ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.

ಉಳಿದಂತೆ ಕೆಮರೂನ್ ಅವರ ಒಳೀತು–ಕೆಡುಕಗಳ ನಡುವಿನ ಆಧ್ಯಾತ್ಮಕತೆಯ ಬೋಧನೆ ಇದೆ. ಛಾಯಾಗ್ರಹಣ, ಎಡಿಟಿಂಗ್, ಹಿನ್ನೆಲೆ ಸಂಗೀತ, ನಟನೆ ಪರಿಶ್ರಮಕ್ಕೆ ತಕ್ಕಂತೆ ಮೂಡಿಬಂದಿದೆ.

ಈ ಒಂದಿಷ್ಟು ಅಂಶಗಳನ್ನು ಬಿಟ್ಟರೆ, ‘ಈ ಸಿನಿಮಾ ಹಲವರ ನಿರೀಕ್ಷೆಗೆ ತಕ್ಕಂತೆ ಹಾಗೂ ಕೆಮರೂನ್ ಅವರ ಹಿಂದಿನಿ ಸಿನಿಮಾಗಳಂತೆ ಇಲ್ಲ’ ಎಂಬ ಟೀಕೆಗಳು ಸಾಮಾನ್ಯವಾಗಿ ಕೇಳಿ ಬರುತ್ತಿವೆ. ಬಹಳ ವರ್ಷಗಳ ನಂತರ ಕೆಮರೂನ್ ಟೀಕೆಗಳಿಗೆ ಮುಖಾಮುಖಿಯಾಗುತ್ತಿರುವುದು ಕಂಡು ಬರುತ್ತಿದೆ.

ಇನ್ನು, ‘ಫೈರ್ ಆ್ಯಂಡ್ ಆಶ್‌’ನಲ್ಲಿ ಅಷ್ಟೇನೂ ವಾವ್ಹ್ ಎನ್ನುವ ಹೊಸ ಸಂಗತಿಗಳು ಇಲ್ಲ ಹಾಗೂ 3.15 ನಿಮಿಷದ ದೀರ್ಘಾವಧಿಯ ರನ್ನಿಂಗ್ ಟೈಮ್ ಅದರ ದೊಡ್ಡ ಮೈನಸ್ ಪಾಯಿಂಟ್‌ಗಳಾಗಿವೆ. ₹3 ಸಾವಿರ ಕೋಟಿಗೂ ಹೆಚ್ಚಿನ ವೆಚ್ಚದ ಚಿತ್ರವಿದು.

‘ವರಾಂಗ’ ನಾಯಕಿಯಾಗಿ ಹಾಲಿವುಡ್ ನಟಿ ಊನಾ ಚಾಪ್ಲಿನ್ ಅಭಿನಯಿಸಿದ್ದಾರೆ. ಉಳಿದಂತೆ ಹೆಚ್ಚು ಹೊಸ ಪಾತ್ರಗಳಿಗೆ ಇಲ್ಲಿ ಅವಕಾಶ ಸಿಕ್ಕಿಲ್ಲ. ಒಂದೇ ಸಿನಿಮಾದ ಸರಣಿ ಚಿತ್ರಗಳೂ ಎಲ್ಲವೂ ಹಿಟ್ ಆಗಿರುವ ಉದಾಹರಣೆ ಇಲ್ಲ. ಆದರೂ ಅವತಾರ್–4 ಮತ್ತು ಅವತಾರ್–5 ಬರಲು ತಯಾರಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.