ADVERTISEMENT

Avatara Purusha 2 ಸಿನಿಮಾ ವಿಮರ್ಶೆ: ವಾಮಾಚಾರವೇ ‘ಅವತಾರ ಪುರುಷ’ನ ಜೀವಾಳ!

ಅಭಿಲಾಷ್ ಪಿ.ಎಸ್‌.
Published 5 ಏಪ್ರಿಲ್ 2024, 12:42 IST
Last Updated 5 ಏಪ್ರಿಲ್ 2024, 12:42 IST
ಶರಣ್   
ಶರಣ್      

ನಿರ್ದೇಶಕ ಸಿಂಪಲ್‌ ಸುನಿ ಅವರ ಹೊಸ ಪ್ರಯೋಗದಂತೆ ‘ಅವತಾರ ಪುರುಷ–ಅಷ್ಟದಿಗ್ಬಂಧನ ಮಂಡಲಕ’ ಎರಡು ವರ್ಷಗಳ ಹಿಂದೆ ತೆರೆಕಂಡಿತ್ತು. ಈ ಸಿನಿಮಾದ ಮುಂದುವರಿದ ಭಾಗವೇ ‘ಅವತಾರ ಪುರುಷ–ತ್ರಿಶಂಕು ಪಯಣ’. ಮೊದಲ ಭಾಗದಲ್ಲಿ‌ ಪೌರಾಣಿಕ ಕಥೆಯ ಎಳೆ ಹಿಡಿದು ಮಾಟ, ಮಂತ್ರ, ವಾಮಾಚಾರವೆಂಬ ಅಗ್ನಿಗೆ ಹಾಸ್ಯದ ಕಲ್ಲುಪ್ಪು ಹಾಕಿ ಸಿಡಿಸಿದ್ದ ಸುನಿ, ಎರಡನೇ ಭಾಗದಲ್ಲಿ ಕಥೆಗೆ ಪೂರ್ಣವಿರಾಮವಿಡುವುದಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಊಹಿಸಿದಂತೆ ಇಲ್ಲಿ ಹಾಸ್ಯ ಕಡಿಮೆಯಿದ್ದು, ಮಾಟ, ವಾಮಾಚಾರವೇ ತೆರೆ ತುಂಬಿಕೊಂಡಿದೆ.

ಮೊದಲ ಭಾಗದಲ್ಲಿ, ಜೂನಿಯರ್‌ ಆರ್ಟಿಸ್ಟ್‌ ಆಗಿದ್ದ ಅನಿಲ(ಶರಣ್‌), ರಾಮ ಜೊಯೀಸ್‌(ಸಾಯಿಕುಮಾರ್‌) ಹಾಗೂ ಸುಶೀಲ(ಭವ್ಯಾ) ದಂಪತಿಯ ಮಗನಾಗಿ ನಟಿಸುತ್ತಿರುತ್ತಾನೆ. ರಾಮ ಜೋಯೀಸರ ನಿಜವಾದ ಪುತ್ರ ‘ಕರ್ಣ’(ಶ್ರೀನಗರ ಕಿಟ್ಟಿ) ಕುಮಾರನಾಗಿ ಮನೆಗೆ ಬಂದ ನಂತರ ಅನಿಲ ಮನೆಯಿಂದ ಹೊರಬೀಳುತ್ತಾನೆ. ಕ್ಲೈಮ್ಯಾಕ್ಸ್‌ನಲ್ಲಿ ‘ಅನಿಲ’ ಒಬ್ಬ ಮಾಟಗಾರ ಎನ್ನುವುದು ತಿಳಿಯುತ್ತದೆ. ರಾಮ ಜೋಯೀಸರ ಮನೆಯಲ್ಲಿ ಅಷ್ಟದಿಗ್ಬಂಧನ ಹಾಕಿ ಇಟ್ಟಿದ್ದ ತ್ರಿಶಂಕು ಮಣಿ ಪಡೆಯಲು ‘ಕುಮಾರ’ ನಡೆಸುವ ಮಂತ್ರ–ತಂತ್ರಗಳಿಂದ ಎರಡನೇ ಭಾಗದ ಕಥೆ ಆರಂಭವಾಗುತ್ತದೆ. ಇಲ್ಲಿ ಅನಿಲ ಹೇಗೆ ಮಾಟಗಾರನಾದ, ಮಂತ್ರ–ತಂತ್ರಗಳನ್ನು ಕಲಿಸುವ ಬಿಸ್ತಾಕ್ಕೆ ಹೇಗೆ ಸೇರಿದ, ಅಲ್ಲಿ ಬಿಸ್ತಾದ ದೊರೆ ದಾರಕನಿಗೆ(ಅಶುತೋಷ್‌ ರಾಣಾ) ಆತ ಮಾಡಿದ್ದೇನು, ರಾಮ ಜೋಯೀಸರ ಮನೆಯಲ್ಲಿ ಇರುವ ತ್ರಿಶಂಕು ಮಣಿಗೂ ಅನಿಲನಿಗೂ ಇರುವ ಸಂಬಂಧವೇನು, ದಾರಕ ತ್ರಿಶಂಕು ಮಣಿ ಪಡೆಯುತ್ತಾನೆಯೇ ಎನ್ನುವುದನ್ನು ಎರಡನೇ ಭಾಗದಲ್ಲಿ ತೋರಿಸಲಾಗಿದೆ. 

‘ಮನರಂಜನೆಗಾಗಿಯಷ್ಟೇ ಈ ದೃಶ್ಯಗಳು. ಮೂಢನಂಬಿಕೆ–ವಾಮಾಚಾರ ಪ್ರಚೋದಿಸುವ ಉದ್ದೇಶ ಚಿತ್ರಕ್ಕೆ ಇಲ್ಲ’ ಎನ್ನುವುದನ್ನು ನಿರ್ದೇಶಕರು ಪದೇ ಪದೇ ತೋರಿಸಿದ್ದಾರೆ. ಸಿನಿಮಾದ ಬಹುತೇಕ ಭಾಗದಲ್ಲಿ ವಾಮಾಚಾರದ ದೃಶ್ಯಗಳು ತುಂಬಿಕೊಂಡಿವೆ. ಈ ವಿಷಯವೇ ಎರಡನೇ ಭಾಗದ ಜೀವಾಳವಾಗಿರುವ ಕಾರಣ ಅದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಎರಡನೇ ಭಾಗದಲ್ಲಿ ವಿಎಫ್‌ಎಕ್ಸ್‌ ಹೆಚ್ಚಿನ ಪ್ರಮಾಣದಲ್ಲಿದೆ. ಕ್ಲೈಮ್ಯಾಕ್ಸ್‌ ಹಂತ ತಲುಪುತ್ತಾ ವಿಎಫ್‌ಎಕ್ಸ್‌ ಬಹಳ ಕೃತಕವಾಗಿದೆ. ಅಲ್ಲಿಯವರೆಗಿನ ದೃಶ್ಯಗಳ ನೈಜತೆಯನ್ನು ಇದು ಹಳಿತಪ್ಪಿಸಿದೆ. ಕೆಲವು ದೃಶ್ಯಗಳನ್ನು, ಸಂಭಾಷಣೆಗಳನ್ನು ಕೊನೆಯ ಕ್ಷಣದಲ್ಲಿ ಸೇರಿಸಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ‘ರ್‍ಯಾಪ್‌’ ಹಾಡು ಅನಗತ್ಯ ಜೋಡಣೆ. ಮೊದಲನೇ ಭಾಗದ ಕಥೆಯ ಝಲಕ್‌ಗಳನ್ನು ನಿರ್ದೇಶಕರು ಅಳವಡಿಸಿದ್ದಾರೆ.        

ADVERTISEMENT

ಶರಣ್‌ ಇಲ್ಲಿ ತಮ್ಮ ಎಂದಿನ ಛಾಪು ಬದಿಗಿರಿಸಿ ನಟಿಸಿದ್ದಾರೆ. ಅಲ್ಲಲ್ಲಿ ನಗಿಸುತ್ತಾರೆ. ಸಂಭಾಷಣೆ, ಹಾವಭಾವಗಳ ಮೂಲಕ ಶರಣ್‌ ಜೀವಿಸಿದ್ದಾರೆ. ಶ್ರೀನಗರ ಕಿಟ್ಟಿ ಭಿನ್ನವಾದ ಶೈಲಿಯಲ್ಲಿ ಹಿಡಿಸುತ್ತಾರೆ. ಮೊದಲ ಭಾಗದಲ್ಲಿ ಹೆಚ್ಚು ತೆರೆಯಲ್ಲಿ ಕಾಣಿಸಿಕೊಂಡ ಆಶಿಕಾಗೆ ಇಲ್ಲಿ ತೆರೆ ಅವಧಿ ಕಡಿಮೆ. ಪಾತ್ರದೊಳಗೆ ‘ಅನಿಲ’ನ ಕಾಲೆಳೆಯುತ್ತಾ, ಭಾವನಾತ್ಮಕ ದೃಶ್ಯಗಳಲ್ಲಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಾಯಿಕುಮಾರ್‌, ಭವ್ಯಾ, ಸುಧಾರಾಣಿ, ಅಶುತೋಷ್‌ ರಾಣಾ ತಮ್ಮ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸಿಂಪಲ್‌ ಸುನಿ ಈ ಸಿನಿಮಾದೊಳಗೆ ತಮ್ಮ ಕಾಲನ್ನು ತಾವೇ ಎಳೆದುಕೊಳ್ಳುತ್ತಾ, ತಮ್ಮ ಮುಂದಿನ ಪ್ರಾಜೆಕ್ಟ್‌ ಅನ್ನೂ ಸಿನಿಮಾದೊಳಗೇ ಘೋಷಿಸಿದ್ದಾರೆ. ‘ಮೋಡ ಕವಿದ ವಾತಾವರಣ’ದಲ್ಲಿ ಸುನಿ ಪ್ರೇಕ್ಷಕರೆದುರಿಗೆ ಬರಲಿದ್ದಾರೆ.         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.