
ಸಿನಿಮಾವೊಂದು ಗಟ್ಟಿಯಾದ ಕಥೆಯಿಲ್ಲದೆ ಸಂದರ್ಭಕ್ಕನುಸಾರವಾಗಿ ಸಿದ್ಧಸೂತ್ರದ ಚಿತ್ರಕಥೆಯಲ್ಲಿ ಹೆಣೆಯಲ್ಪಟ್ಟರೆ ತಾಳ್ಮೆ ಪರೀಕ್ಷೆಯಾಗುತ್ತದೆ. ‘ಚೌಕಿದಾರ್’ ಹೀಗೇ ಇದೆ. ಕಥೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನೇ ನೀಡದ ನಿರ್ದೇಶಕರು ನಾಯಕನ ಫೈಟ್ಸ್–ಹಾಡುಗಳಲ್ಲೇ ಸಿನಿಮಾ ಮುಗಿಸಿದ್ದಾರೆ.
ಒಬ್ಬನೇ ಮಗನಾದ ‘ಸಿದ್ಧಾರ್ಥ್’ನನ್ನು(ಪೃಥ್ವಿ ಅಂಬಾರ್) ಮುದ್ದಾಗಿ ಬೆಳೆಸುವ, ತನಗೆ ಬಾಲ್ಯದಲ್ಲಿ ದೊರಕದ ಎಲ್ಲಾ ಸೌಲಭ್ಯಗಳನ್ನು ಮಗನಿಗೆ ನೀಡುವ ಸರ್ಕಾರಿ ಅಧಿಕಾರಿ ‘ಪ್ರಕಾಶ್ ಗೌಡ’(ಸಾಯಿಕುಮಾರ್). ಈತನಿಗೆ ‘ಮಗನೇ ಸರ್ವಸ್ವ’. ಆತನಿಗೆ ಕೊಡಿಸಿದ ಬೈಕ್ ಮೇಲೆ ಇದನ್ನೇ ಸ್ಟಿಕ್ಕರ್ ಆಗಿ ಹಾಕಿಸಿದ್ದಾನೆ. ಅತ್ತ ಅಪ್ಪ–ಅಮ್ಮನ ಕೈಯಲ್ಲೇ ಮದ್ಯ–ಸಿಗರೇಟ್ ತರಿಸುವಷ್ಟು ಸಲುಗೆಯಲ್ಲಿ ‘ಸಿದ್ಧಾರ್ಥ್’ ಬೆಳೆಯುತ್ತಾನೆ. ಮಗನ ಮೇಲೆ ಏಕಿಷ್ಟು ಪ್ರೀತಿ ಎಂದು ಅಪ್ಪನಲ್ಲಿ ಕೇಳಿದರೆ, ‘ನಮ್ಮ ತೆವಲಿಗೆ ಮಕ್ಕಳನ್ನು ಹುಟ್ಟಿಸುತ್ತೇವೆ, ಅವು ಏನು ಅಪ್ಲಿಕೇಷನ್ ಹಾಕಿಕೊಂಡು ಹುಟ್ಟುತ್ತಾವೆಯೇ’ ಎಂದು ಪ್ರಶ್ನಿಸುವಾತ. ಇಂಥ ಅಪ್ಪ–ಮಗನ ಸ್ಥಿತಿ ಏನಾಗುತ್ತದೆ ಎನ್ನುವುದೇ ಚಿತ್ರದ ಕಥೆ.
ಸಮಾಜದಲ್ಲಿರುವ ವಾಸ್ತವಕ್ಕೆ ತದ್ವಿರುದ್ಧವಾದ ಕಥೆ ಇಲ್ಲಿದೆ. ಹೀಗಾಗಿ ಇದು ಹತ್ತಿರವಾಗುವುದೂ ಇಲ್ಲ. ಚಿತ್ರಕಥೆಯೂ ಬಹಳ ಕೃತಕವಾಗಿದೆ. ಮೊದಲಾರ್ಧದಲ್ಲಿ ಕಥೆ ಹುಡುಕಿದರೂ ಸಿಗುವುದಿಲ್ಲ. ಇಲ್ಲಿ ಬರುವ ದೃಶ್ಯಗಳು ಹಾಗೂ ಮೂರು ಫೈಟ್ಸ್ ಏತಕ್ಕಾಗಿ ಎನ್ನುವ ಪ್ರಶ್ನೆಯಲ್ಲೇ ಈ ಭಾಗವನ್ನು ದೂಡಬೇಕು. ಈ ಸಂದರ್ಭದಲ್ಲಿ ಸಾಯಿಕುಮಾರ್ ಅವರದ್ದೇ ‘ಯಾಕೆ ಯಾಕೆ?’ ಎನ್ನುವ ಡೈಲಾಗ್ ನೆನಪಾಗದೇ ಇರುವುದಿಲ್ಲ. ಅಗತ್ಯವೇ ಇಲ್ಲದ ಚಿತ್ರಕಥೆ ಇಲ್ಲಿದೆ. ದ್ವಿತೀಯಾರ್ಧದಲ್ಲಿ ಕಥೆ ತೆರೆದುಕೊಂಡರೂ ಅದಕ್ಕೆ ಗಟ್ಟಿತನವಿಲ್ಲ. ಯಾವ ವಿಷಯಕ್ಕೆ ಆದ್ಯತೆ ಕೊಡಬೇಕು ಎನ್ನುವ ಗೊಂದಲವಿದ್ದಂತೆ ತೋಚುತ್ತದೆ. ಪಾತ್ರಗಳ ಬರವಣಿಗೆಯಲ್ಲಿ ಜೀವಂತಿಕೆಯೇ ಇಲ್ಲ. ಸುಧಾರಾಣಿ ಅವರ ಪೊಲೀಸ್ ಅಧಿಕಾರಿ ಪಾತ್ರ ಕಥೆಗೆ ಅಗತ್ಯವೇ ಇರಲಿಲ್ಲ.
ನಾಯಕನಿಗೆ ನಾಯಕಿಯ ಮೇಲೆ ಪ್ರೀತಿಯೇ ಇಲ್ಲ. ಹೀಗಿದ್ದರೂ ಮದುವೆಯಾದ ಮರುಕ್ಷಣದಲ್ಲೇ ಒಂದು ಡ್ಯುಯೆಟ್ ಹಾಡಿದೆ! ವಿನಾಕಾರಣ ಫೈಟ್ಸ್ ತುರುಕಲಾಗಿದೆ. ಪ್ರತಿ ಫೈಟ್‌ನಲ್ಲೂ ನಾಯಕ ಅಟ್ಟಾಡಿಸಿಕೊಂಡು ಏಕೆ ಹೋಗುತ್ತಾನೆ? ಅಮ್ಮನ ಮಾತುಗಳಿಗೆ ಬದಲಾಗದ ಸಿದ್ಧಾರ್ಥ್ ಸ್ನೇಹಿತನೊಬ್ಬನ ಮಾತುಗಳಿಂದ ಪ್ರಭಾವಿತನಾಗುವುದು ಹೇಗೆ? ಹೀಗೆ ಸರಣಿ ಪ್ರಶ್ನೆಗಳು ಉಳಿದುಕೊಳ್ಳುತ್ತವೆ. ಸಾಯಿಕುಮಾರ್ ಅವರು ನಿಭಾಯಿಸಿದ ಅಪ್ಪನ ಪಾತ್ರದ ಬರವಣಿಗೆ ಬಹಳ ಕೃತಕವಾಗಿದೆ. ಪೃಥ್ವಿ ಅಂಬಾರ್ ಪಾತ್ರದಲ್ಲಿ ಹಲವು ಶೇಡ್‌ಗಳಿದ್ದರೂ ಅವುಗಳು ಕಥೆಯಿಂದಾಗಿ ಸೋತಿವೆ. ನೆನಪಿನಲ್ಲಿ ಉಳಿಯುವ ಹಾಡುಗಳಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.