ADVERTISEMENT

'ರಾಯಲ್' ಸಿನಿಮಾ ವಿಮರ್ಶೆ: ‘ರಾಯಲ್‌’ ಆಗಲು ಹಪಹಪಿಸುವ ಕೃಷ್ಣ!

ವಿನಾಯಕ ಕೆ.ಎಸ್.
Published 24 ಜನವರಿ 2025, 12:41 IST
Last Updated 24 ಜನವರಿ 2025, 12:41 IST
<div class="paragraphs"><p>ರಾಯಲ್‌ ಸಿನಿಮಾದಲ್ಲಿ&nbsp;ವಿರಾಟ್‌, ಸಂಜನಾ ಆನಂದ್‌</p></div>

ರಾಯಲ್‌ ಸಿನಿಮಾದಲ್ಲಿ ವಿರಾಟ್‌, ಸಂಜನಾ ಆನಂದ್‌

   

ಸಾಮಾನ್ಯರಿಗೆ, ಮಧ್ಯಮ ವರ್ಗದವರಿಗೆ ರಾಯಲ್‌ ಆಗಿ ಬದುಕಬೇಕೆಂಬ ಹಂಬಲ ಸಹಜ. ಕೆಲವರು ಶ್ರಮ ಹಾಕಿ ಆರ್ಥಿಕವಾಗಿ ಆ ಹಂತ ತಲುಪುತ್ತಾರೆ. ಇನ್ನು ಕೆಲವರು ಶೋಕಿ ಬದುಕಿಗಾಗಿ ಅಡ್ಡಹಾದಿ ಹಿಡಿಯುತ್ತಾರೆ. ಹೀಗೆ ಶೋಕಿ ಮಾಡಿಕೊಂಡಿದ್ದ ಕಥಾ ನಾಯಕ ಕೃಷ್ಣನಿಗೆ ಬದುಕಿನಲ್ಲಿ ಬಯಸದೇ ಶ್ರೀಮಂತಿಕೆ ಬರುತ್ತದೆ. ಇದು ‘ರಾಯಲ್‌’ ಚಿತ್ರದ ಒಂದೆಳೆ ಕಥೆ. ಮಾಮೂಲಿ ಮಾಸ್‌, ಆ್ಯಕ್ಷನ್‌ ಸಿನಿಮಾಗಳಿಗೆ ಹೋಲಿಸಿದರೆ ಚಿತ್ರದ ಕಥೆ ಭಿನ್ನವಾಗಿದೆ. ಸಾಕಷ್ಟು ತಿರುವುಗಳೊಂದಿಗೆ ಚಿತ್ರಕಥೆಯೂ ಕುತೂಹಲಭರಿತವಾಗಿದೆ.

ಚಿತ್ರ ಶುರುವಾಗುವುದು ಗೋವಾದ ಕಡಲತೀರದಲ್ಲಿ. ನಾಯಕಿ ಸಂಜನಾ ಮತ್ತು ಗೆಳತಿಯರು ಮೋಜು ಮಸ್ತಿಗಾಗಿ ಗೋವಾಕ್ಕೆ ಹೋದಾಗ ನಾಯಕ ಕೃಷ್ಣನ ಪ್ರವೇಶವಾಗುತ್ತದೆ. ಅಲ್ಲಿಂದ ಅವರಿಬ್ಬರ ಪ್ರೇಮಕಥೆ ಪ್ರಾರಂಭ. ಮೊದಲ ಹತ್ತು ನಿಮಿಷ ಇದೊಂದು ಮಾಮೂಲಿ ಪ್ರೇಮಕಥೆಯ ಸಿನಿಮಾ ಎಂದು ಭಾಸವಾಗುತ್ತದೆ. ಆದರೆ ಕಥೆಗೆ ಇದ್ದಕ್ಕಿದ್ದಂತೆ ತಿರುವು ದೊರೆತು ಚಿತ್ರ ಕುತೂಹಲಕಾರಿಯಾಗುತ್ತದೆ. ಕೃಷ್ಣನ ಕೌಟಂಬಿಕ ಕಥೆ ತೆರೆದುಕೊಳ್ಳುವ ಹೊತ್ತಿಗೆ ಚಿತ್ರದ ಮೊದಲಾರ್ಧ ಮುಗಿದಿರುತ್ತದೆ.

ADVERTISEMENT

ದ್ವಿತೀಯಾರ್ಧ ಬೇರೆಯದೇ ಲೋಕ. ಗೋವಾದ ಬೀದಿಯಲ್ಲಿ ಕಳ್ಳತನ, ಮೋಸಮಾಡಿಕೊಂಡಿದ್ದ  ನಾಯಕ ಅವನ ಕನಸಿನಂತೆ ಶ್ರೀಮಂತಿಕೆ ತುಂಬಿ ತುಳುಕುತ್ತಿರುವ ರಾಯಲ್‌ ಲೋಕಕ್ಕೆ ಬಂದಿರುತ್ತಾನೆ. ಅಲ್ಲಿಗೆ ಏಕೆ ಬಂದ? ಅದರ ಹಿನ್ನೆಲೆ ಏನು ಎಂಬುದರ ಸುತ್ತ ದ್ವಿತೀಯಾರ್ಧ ನಡೆಯುತ್ತದೆ. ಹುಡುಗಿಯರ ನೆಚ್ಚಿನ ಕೃಷ್ಣನಾಗಿ ನಾಯಕ ವಿರಾಟ್‌ ಇಷ್ಟವಾಗುತ್ತಾರೆ. ಆದರೆ ಆ್ಯಕ್ಷನ್‌ ದೃಶ್ಯಗಳನ್ನು ನಾಯಕ ವೈಭವೀಕರಣಕ್ಕಾಗಿ ಬಲವಂತವಾಗಿ ತುರಕಿದಂತೆ ಭಾಸವಾಗುತ್ತದೆ. ಸಂಜನಾ ಆನಂದ್‌ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕನ ತಾಯಿ ಪಾತ್ರದಲ್ಲಿ ನಟಿ ಛಾಯಾಸಿಂಗ್‌ ನೆನಪಿನಲ್ಲಿ ಉಳಿಯುತ್ತಾರೆ. ರಂಗಾಯಣ ರಘು, ಅಚ್ಯುತ್‌ ಕುಮಾರ್‌ ಪಾತ್ರಕ್ಕೆ ಹೆಚ್ಚು ಕೆಲಸವಿಲ್ಲ. ಖಳನಟನಾಗಿ ರಘು ಮುಖರ್ಜಿ ನಟನೆ ಉತ್ತಮವಾಗಿದೆ. 

ಚರಣ್‌ರಾಜ್‌ ಹಿನ್ನೆಲೆ ಸಂಗೀತ ಚಿತ್ರಕ್ಕೆ ಶಕ್ತಿ ತುಂಬಿದೆ. ಆದರೆ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ರಘು ನಿಡುವಳ್ಳಿ ಅವರ ಸಂಭಾಷಣೆಯಲ್ಲಿ ಪಂಚ್‌ ಜೊತೆಗೆ ತೂಕದ ಮಾತುಗಳೂ ಇವೆ. ಒಟ್ಟಾರೆ ಚಿತ್ರದ ಅವಧಿ, ಅದರಲ್ಲಿಯೂ ದ್ವಿತೀಯಾರ್ಧದ ಅವಧಿಯನ್ನು ಇನ್ನಷ್ಟು ಕಡಿಮೆ ಮಾಡುವ ಅವಕಾಶ ನಿರ್ದೇಶಕರಿಗಿತ್ತು. ಇಡೀ ಚಿತ್ರವನ್ನು ಸಾಕಷ್ಟು ಕಡೆ ಲಾಜಿಕ್‌ ಮರೆತು ತೆಲುಗು ಮಾದರಿಯ ಮಾಸ್‌ ಸಿನಿಮಾವಾಗಿ ಟ್ರೀಟ್‌ ಮಾಡಿರುವುದರಿಂದ ನಿರ್ದೇಶಕರು ಹಾಸ್ಯಕ್ಕೆ ಇನ್ನಷ್ಟು ಒತ್ತು ನೀಡುವ ಅವಕಾಶವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.