ADVERTISEMENT

Garadi Movie: ಗರಡಿ ಸಿನಿಮಾ ವಿಮರ್ಶೆ- ಕಥೆಯ ಸಡಿಲ ಪಟ್ಟು..!

ಯೋಗರಾಜ ಭಟ್‌ ನಿರ್ದೇಶನದ ಗರಡಿ ಸಿನಿಮಾ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 12:58 IST
Last Updated 10 ನವೆಂಬರ್ 2023, 12:58 IST
<div class="paragraphs"><p>ಗರಡಿ ಸಿನಿಮಾ ಪೋಸ್ಟರ್</p></div>

ಗರಡಿ ಸಿನಿಮಾ ಪೋಸ್ಟರ್

   

ಪ್ರೀತಿಯ ಕಥೆ ಕೊಡುತ್ತಿದ್ದ ನಿರ್ದೇಶಕ ಯೋಗರಾಜ್ ಭಟ್‌ ಅವರು ‘ಗರಡಿ’ ಪ್ರವೇಶಿಸಿ ಆ್ಯಕ್ಷನ್‌ ಕಥೆ ಹೆಣೆದಿದ್ದಾರೆ. ಇಲ್ಲಿ ಪ್ರೀತಿಗೆ, ಹಾಸ್ಯಕ್ಕೆ ಸ್ಥಳಾವಕಾಶ ಕಡಿಮೆ; ಕುಸ್ತಿಗೇ ಆದ್ಯತೆ. ಸಿದ್ಧ ಸೂತ್ರಗಳನ್ನು ಇಟ್ಟುಕೊಂಡು ಹೆಣೆದ ಈ ಸಿನಿಮಾ ಕಥೆಯ ‘ಪಟ್ಟು’ ಸಮಯ ಉರುಳಿದಂತೆ ಸಡಿಲವಾಗಿ, ಮತ್ತೆ ಗಟ್ಟಿಗೊಳ್ಳಲು ದರ್ಶನ್‌ ಪ್ರವೇಶದವರೆಗೆ ಕಾಯುತ್ತದೆ. ‘ಗಾಳಿಪಟ–2’ರಂತೆಯೇ ಬಿಗಿಯಾದ ಕಥೆ ಇಲ್ಲದೆ ನಿರ್ದೇಶಕರು ‘ಗರಡಿ’ ಪ್ರವೇಶಿಸಿದಂತೆ ತೋರುತ್ತದೆ.

ರಾಣೆ ಕುಟುಂಬ(ರವಿಶಂಕರ್‌) ಗರಡಿ ಮನೆಯನ್ನು ನಡೆಸಿಕೊಂಡು ಬಂದಿದೆ. ಇದೇ ‘ಗರಡಿ’ಯ ಮುಖ್ಯಸ್ಥ ಕೋರಾಪಿಟ್ ರಂಗಪ್ಪ(ಬಿ.ಸಿ.ಪಾಟೀಲ್‌). ಕೋರಾಪಿಟ್‌ ಎಂದರೆ ಸೋಲಿಸಲು ಸಾಧ್ಯವಿಲ್ಲದ ಪೈಲ್ವಾನ್‌. ರಂಗಪ್ಪನ ಸ್ನೇಹಿತನ ಮಕ್ಕಳು ಶಂಕರ(ದರ್ಶನ್‌) ಹಾಗೂ ಸೂರಿ(ಸೂರ್ಯ). ತನ್ನ ಸ್ನೇಹಿತ ಹತ್ಯೆಯಾದ ಬಳಿಕ ಆತನ ಮಕ್ಕಳನ್ನು ರಂಗಪ್ಪ ಸಾಕಿ, ಶಂಕರನನ್ನು ಕುಸ್ತಿ ಪಟುವನ್ನಾಗಿ ಮಾಡುತ್ತಾನೆ. ಆದರೆ ಶಂಕರ ಊರು ಬಿಡುವ ಪರಿಸ್ಥಿತಿ ಬರುತ್ತದೆ. ಶಂಕರ, ಸೂರಿಯಲ್ಲಿ ಪೈಲ್ವಾನರ ರಕ್ತ ಹರಿಯುತ್ತಿದ್ದರೂ ಅವರು ಕುಸ್ತಿಯ ಅಖಾಡಕ್ಕೆ ಇಳಿಯುವಂತಿಲ್ಲ ಎಂಬ ರಂಗಪ್ಪನ ನಿರ್ಬಂಧ ಕಥೆಗೆ ಮುನ್ನುಡಿ. ಹೀಗಿದ್ದರೂ ಸೂರಿ ಅಖಾಡಕ್ಕೆ ಇಳಿಯುತ್ತಾನೆ. ಇಲ್ಲಿಂದ ಕಥೆ ಆರಂಭ. ಊಹಿಸಿದಂತೆಯೇ ಕಥೆ ಮುಂದಡಿ ಇಡುತ್ತಾ ಸಾಗುತ್ತದೆ. ಹೀಗಾಗಿ ಕಥೆಯಲ್ಲಿ ಹೊಸದೇನಿಲ್ಲ ಅನಿಸಿಬಿಡುತ್ತದೆ.  

ADVERTISEMENT

ಚಿತ್ರದ ಮೊದಲಾರ್ಧದ ಕಥೆ ಹಿಡಿದಿಡುವ ಸಾಮರ್ಥ್ಯವನ್ನು ಹೊಂದಿದೆ. ಹಲವು ಘಟನೆಗಳು ಈ ಅವಧಿಯಲ್ಲಿ ನಡೆಯುವ ಕಾರಣ ಚಿತ್ರಕಥೆಗೂ ವೇಗವಿದೆ. ಆದರೆ ಸಮಯ ಉರುಳಿದಂತೆ ದುರ್ಬಲವಾಗುವ ಕಥೆ, ಸೂತ್ರವಿಲ್ಲದ ಗಾಳಿಪಟದಂತೆ ತಿರುಗುತ್ತದೆ. ಎಲ್ಲವೂ ಅಸಹಜವಾಗಿ ಭಾಸವಾಗುತ್ತವೆ. ಚಿತ್ರಕಥೆಗೆ ಕ್ಲೈಮ್ಯಾಕ್ಸ್‌ನಲ್ಲಿ ಜೀವ ತುಂಬಿದ್ದಾರೆ ಅತಿಥಿ ಪಾತ್ರದಲ್ಲಿ ಬರುವ ನಟ ದರ್ಶನ್‌. ಹೀರೊ ಅಣ್ಣನಾಗಿ ಪ್ರವೇಶಿಸುವ ಅವರ ಆ್ಯಕ್ಷನ್‌ಗೇ ಜೋತುಬಿದ್ದಂತೆ ಕಥೆಯನ್ನು ಹೆಣೆದಿರುವುದು ಸ್ಪಷ್ಟ. ಕ್ಲೈಮ್ಯಾಕ್ಸ್‌ನಲ್ಲಿ ಹೊಡೆದಾಟಗಳನ್ನು ಸಾಕಪ್ಪಾ ಸಾಕು ಎನಿಸುವಷ್ಟು ತೂರಿಸಿದ್ದಾರೆ ನಿರ್ದೇಶಕರು! ಜೊತೆಗೊಂದಿಷ್ಟು ದೃಶ್ಯಗಳು ತರ್ಕಕ್ಕೆ ನಿಲುಕುವುದಿಲ್ಲ. ನಾಲ್ಕು ಗುಂಡು ಬಿದ್ದರೂ, ರಂಗಪ್ಪ ಮತ್ತೆ ಎದ್ದುಬರುವುದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. 

ನಟನೆಯಲ್ಲಿ ಯಶಸ್‌ ಸೂರ್ಯ ಹಾಗೂ ಸುಜಯ್‌ ಬೇಲೂರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ರಂಗಪ್ಪನಾಗಿ ಬಿ.ಸಿ.ಪಾಟೀಲ್‌ ಅವರ ನಟನೆ ನೈಜವಾಗಿದೆ. ರವಿಶಂಕರ್‌ ವಿಭಿನ್ನವಾದ ಹಾವಭಾವದೊಂದಿಗೆ ತೆರೆ ಮೇಲೆ ಬಂದಿದ್ದಾರೆ. ಸೋನಲ್‌ ಮೊಂತೆರೋ ಅವರ ನಟನೆಗೆ ಸಿನಿಮಾ ದ್ವಿತೀಯಾರ್ಧದಲ್ಲಿ ಹೆಚ್ಚಿನ ತೂಕವಿದೆ. ಕಥೆಯಲ್ಲಿ ಹಾಸ್ಯಕ್ಕೆ ಅವಕಾಶಗಳು ಕಡಿಮೆ. ಹೀಗಾಗಿ ಧರ್ಮಣ್ಣ ಕಡೂರು ಅವರ ಪಾತ್ರವೂ ಇಲ್ಲಿ ಹೆಸರಿಗಷ್ಟೇ ಇದೆ. ಚಿತ್ರದ ಶೀರ್ಷಿಕೆ ಹಾಡನ್ನು ಹೊರತುಪಡಿಸಿ, ಉಳಿದೆಲ್ಲ ಹಾಡುಗಳು ತುರುಕಿದಂತೆ ಭಾಸವಾಗುತ್ತವೆ. ‘ಹೊಡಿರೆಲೆ ಹಲಗಿ’ ಐಟಂ ಹಾಡು ಮಸಾಲೆಯ ಮಿಶ್ರಣ! ಹರಿಕೃಷ್ಣ ಅವರ ಸಂಗೀತ ಕುಣಿಸುತ್ತದೆ. ನಿರಂಜನ್‌ ಬಾಬು ಛಾಯಾಚಿತ್ರಗ್ರಹಣ ಬಾದಾಮಿಯನ್ನು ಚೆಂದವಾಗಿ ಸೆರೆಹಿಡಿದಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.