ADVERTISEMENT

Jalandhara Movie Review: ಭಿನ್ನ ಕಥೆಯ ಪೇಲವ ನಿರೂಪಣೆ

ವಿನಾಯಕ ಕೆ.ಎಸ್.
Published 29 ನವೆಂಬರ್ 2024, 14:40 IST
Last Updated 29 ನವೆಂಬರ್ 2024, 14:40 IST
<div class="paragraphs"><p>ಪ್ರಮೋದ್‌ ಶೆಟ್ಟಿ</p></div>

ಪ್ರಮೋದ್‌ ಶೆಟ್ಟಿ

   

ಕಾವೇರಿ ನದಿ ತೀರದ ಊರು ಮಧುಮತಿ. ಮಂಡ್ಯ ಭಾಗದ ರೈತಾಪಿ ವರ್ಗವೇ ಹೆಚ್ಚಿರುವ ಊರಲ್ಲಿ, ನದಿಗೆ ಬಿದ್ದು ಸತ್ತವರ ಹೆಣ ಎತ್ತಿಹಾಕಲು ಎರಡು ಬಣಗಳ ನಡುವೆ ಪೈಪೋಟಿ. ಊರು, ಬಣಗಳ ನಡುವಿನ ಜಗಳ, ನದಿಗೆ ಬಿದ್ದು ಸಾಯುವವರ ಕಥೆಯೇ ಚಿತ್ರದ ಮೊದಲಾರ್ಧ. ಹಾಗಂತ ಇದೇ ಚಿತ್ರದ ಕಥೆಯಲ್ಲ. ನದಿಯಲ್ಲಿ ನಡೆಯುತ್ತಿರುವುದು ಕೊಲೆ ಸಾವಲ್ಲ ಎಂಬುದು ಗೊತ್ತಾಗುವ ಹೊತ್ತಿಗೆ ಇಂಟರ್‌ವಲ್‌ ಬಂದಿರುತ್ತದೆ. ಆ ಕೊಲೆಗಳ ಹಿಂದಿನ ಕಾರಣವೇನು? ಅದನ್ನು ಮಾಡಿಸುತ್ತಿರುವವರು ಯಾರು? ಏಕೆ? ಎಂಬಿತ್ಯಾದಿ ಅಂಶಗಳೆ ಚಿತ್ರದ ದ್ವಿತೀಯಾರ್ಧ.

ಇದರ ನಡುವೆ ಇನ್ಸ್‌ಪೆಕ್ಟರ್‌ ಅಭಿಯಾಗಿ ಪ್ರಮೋದ್‌ ಶೆಟ್ಟಿ ಅವರ ಕಥೆಯೊಂದು ತೆರೆದುಕೊಳ್ಳುತ್ತದೆ. ಆ ಕಥೆಯನ್ನು ನಿರ್ದೇಶಕರು ಕಾವೇರಿ ತಟದ ಕಥೆಗೆ ಬೆಸೆದ ರೀತಿ ಚೆನ್ನಾಗಿದೆ. ಪ್ರಮೋದ್‌ ಶೆಟ್ಟಿ ಪತ್ನಿ ಸಾಮಾಜಿಕ ಕಾರ್ಯಕರ್ತೆಯಾಗಿ ಈ ಊರಿಗೆ ಬಂದು ಊರಿನ ಶಾಸಕನ ಚಕ್ರವ್ಯೂಹದೊಳಗೆ ಸಿಲುಕಿಕೊಳ್ಳುತ್ತಾಳೆ. ಅಲ್ಲಿಂದ ಚಿತ್ರದ ನಿಜವಾದ ಕಥೆ ಪ‍್ರಾರಂಭವಾಗುತ್ತದೆ. ಇದರ ಸಣ್ಣ ಸುಳಿವು ಮೊದಲಾರ್ಧದಲ್ಲಿದೆ. ಕಥೆಯ ಎಳೆ ಚೆನ್ನಾಗಿದೆ. ಆದರೆ ಅದನ್ನು ಚಿತ್ರಕಥೆಯಾಗಿಸುವಲ್ಲಿ ನಿರ್ದೇಶಕರು ಎಡವಿದ್ದಾರೆ. ಅನಗತ್ಯ ಹೊಡೆದಾಟ, ಪ್ರೇಮ ಪ್ರಸಂಗಗಳು, ಹಾಡುಗಳಿಂದಾಗಿ ಕಥೆ ಎಲ್ಲೆಲ್ಲಿಗೋ ಸಾಗಿ ಬಂದಂತಾಗುತ್ತದೆ.

ADVERTISEMENT

ಚಿತ್ರದ ಮೊದಲಾರ್ಧದಲ್ಲಂತೂ ನಾಯಕ ಪ್ರಮೋದ್‌ ಶೆಟ್ಟಿ ಪಾತ್ರ ಅತಿಥಿ ಪಾತ್ರದಂತಿದೆ. ಈ ಪಾತ್ರ ಪೋಷಣೆಯಲ್ಲಿ ಇನ್ನಷ್ಟು ಗಟ್ಟಿತನ ಬೇಕಿತ್ತು. ಡಿಸ್ಕೊ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸ್ಟೆಪ್‌ ಅಪ್‌ ಲೋಕಿ ಮೇಲೆ ಬಹುಭಾಗ ಕಥೆ ಸಾಗುತ್ತದೆ. ಬಹುತೇಕ ಕಲಾವಿದರಿಂದ ಇನ್ನಷ್ಟು ಉತ್ತಮ ನಟನೆ ತೆಗಿಸುವ ಅವಕಾಶ ನಿರ್ದೇಶಕರಿಗಿತ್ತು. ಬಹಳಷ್ಟು ಕಡೆ ಹಿನ್ನೆಲೆ ಸಂಗೀತದ ಅಬ್ಬರ ಹೆಚ್ಚಿದೆ. ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಕಥೆ ಎಳೆ ಭಿನ್ನವಾಗಿದ್ದರೂ ನಿರೂಪಣೆ ಸಾಕಷ್ಟು ಕಡೆ ಪೇಲವವಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.