ADVERTISEMENT

‘ಜಸ್ಟ್‌ ಮ್ಯಾರಿಡ್‌’ ಸಿನಿಮಾ ವಿಮರ್ಶೆ: ಚಿತ್ರಕಥೆಯಲ್ಲಿ ಸೊರಗಿದ ಭಿನ್ನ ಕಥಾವಸ್ತು

ಅಭಿಲಾಷ್ ಪಿ.ಎಸ್‌.
Published 22 ಆಗಸ್ಟ್ 2025, 10:19 IST
Last Updated 22 ಆಗಸ್ಟ್ 2025, 10:19 IST
ಅಂಕಿತಾ ಅಮರ್‌, ಶೈನ್‌ ಶೆಟ್ಟಿ 
ಅಂಕಿತಾ ಅಮರ್‌, ಶೈನ್‌ ಶೆಟ್ಟಿ    

‘ಕಿರಿಕ್‌ ಪಾರ್ಟಿ’, ‘ದಿಯಾ’, ‘ಕಾಂತಾರ’ ಖ್ಯಾತಿಯ ಸಂಗೀತ ನಿರ್ದೇಶಕ ಬಿ.ಅಜನೀಶ್‌ ಲೋಕನಾಥ್‌ ನಿರ್ಮಾಣದ ಚಿತ್ರವಿದು. ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾವನ್ನು ಸಿ.ಆರ್‌.ಬಾಬಿ ಸಿದ್ಧಸೂತ್ರದಲ್ಲೇ ಹೆಣೆದಿದ್ದಾರೆ. ಗಟ್ಟಿಯಾದ ಕಥೆಯಿಲ್ಲದೆ ಕಾರಣ ಚಿತ್ರಕಥೆ ಸೊರಗಿದೆ. 

ಸಿನಿಮಾದ ಹೀರೊ ‘ಸೂರ್ಯ’(ಶೈನ್‌ ಶೆಟ್ಟಿ) ‘ವಂಶವೃಕ್ಷ’ವೆಂಬ ಶ್ರೀಮಂತ ಕುಟುಂಬದ ಹುಡುಗ. ದೊಡ್ಡಪ್ಪ ಶಿಶುಪಾಲ(ಶ್ರೀಮಾನ್‌) ಗೃಹ ಸಚಿವ. ಅಜ್ಜ ಪೂರ್ಣಚಂದ್ರ(ದೇವರಾಜ್‌) ನಿವೃತ್ತ ನ್ಯಾಯಮೂರ್ತಿ. ತಂದೆ ವಿನಯ್‌ ಪ್ರಕಾಶ್‌(ರವಿಶಂಕರ್‌ ಗೌಡ) ಖ್ಯಾತ ಗಾಯಕ. ಹೀಗೆ ಹೆಚ್ಚಿನ ಜವಾಬ್ದಾರಿಯಿಲ್ಲದೆ ಬೆಳೆದ ‘ಸೂರ್ಯ’ ಜಾಹೀರಾತುಗಳ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುತ್ತಾನೆ. ಸಿಗರೇಟ್‌, ಕುಡಿತದ ಚಟ ಹೀಗೆ ದುಶ್ಚಟಗಳು ಇವೆ. ಇಂತಹ ‘ಸೂರ್ಯ’ನಿಗೆ ಏಕಾಏಕಿ ಮದುವೆ ಮಾಡಿಸುತ್ತಾರೆ. ‘ಸಹನಾ’(ಅಂಕಿತಾ ಅಮರ್‌) ಈತನ ಬಾಳಿಗೆ ಬಂದ ನಂತರ ಕಥೆ ತೆರೆದುಕೊಳ್ಳಲಾರಂಭಿಸುತ್ತದೆ.  

ನಾಯಕನ ಪ್ರವೇಶಕ್ಕೊಂದು ಹಾಡು, ಫೈಟ್‌ ಹೀಗೆ ಸಿದ್ಧಸೂತ್ರದಲ್ಲೇ ಸಿನಿಮಾ ಕಥೆಯಿದೆ. ನಾಯಕಿಯ ಪಾತ್ರದ ಬರವಣಿಗೆಯಿಂದ ಕಥೆಗೊಂದು ತಿರುವು ಸಿಗಲಿದೆ ಎಂದು ಊಹಿಸಿದರೆ ಅಲ್ಲೂ ನಿರಾಸೆ. ಈ ಭಿನ್ನವಾದ ಕಾನ್ಸೆಪ್ಟ್‌ ಅನ್ನು ನಿರ್ದೇಶಕರು ಸೂಕ್ತವಾಗಿ ತೆರೆಗೆ ತರುವಲ್ಲಿ ಎಡವಿದ್ದಾರೆ. ಉಪಕಥೆಗಳ ಬದಲಾಗಿ ನಾಯಕ–ನಾಯಕಿಯ ಪಾತ್ರದ ಸುತ್ತ ಕಥೆ ಹೆಣೆದಿದ್ದರೆ ಶೀರ್ಷಿಕೆಗೂ ಸರಿಹೊಂದುತ್ತಿತ್ತು. 

ADVERTISEMENT

ಸಿನಿಮಾದೊಳಗೆ ನಾಯಕನಿಗೆ ಭ್ರಮೆಯೆಂಬ ರೋಗವೊಂದನ್ನು ಅಂಟಿಸಲಾಗಿದೆ. ಇದು ಏಕೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಈ ಮೂಲಕ ಕಥೆಯನ್ನೇ ನಿರ್ದೇಶಕರು ದಾರಿ ತಪ್ಪಿಸಿದ್ದಾರೆ. ಅನಗತ್ಯ ಫೈಟ್‌, ದೃಶ್ಯಗಳು ಚಿತ್ರದ ಅವಧಿ ಹೆಚ್ಚಿಸಿದೆ. ಸಿನಿಮಾದೊಳಗೆ ವೈದ್ಯನಾದವನಿಗೆ ನರ್ಸ್‌ ಜೊತೆ ಚೆಲ್ಲಾಟ ಇರಲೇಬೇಕೆ? ಸಿನಿಮಾದೊಳಗೆ ‘ತಪ್ಪು ಮಾಡೋದು ಸಹಜ, ತಿದ್ಕೊಂಡು ಸರಿಹೋಗೋ ಮನುಜ..’ ಎಂಬ ಹಾಡೊಂದು ಬರುತ್ತದೆ. ಸಿನಿಮಾ ಕಥೆಯೊಳಗೆ ದೊಡ್ಡ ತಪ್ಪುಗಳನ್ನೇ ಸಹಜವೆಂಬಂತೆ ಬಿಂಬಿಸಿರುವುದು ಆಶ್ಚರ್ಯವೆನಿಸುತ್ತದೆ. ಹಲವು ಪ್ರಶ್ನೆಗಳಿಗೆ ಕಥೆ ಉತ್ತರಿಸುವುದಿಲ್ಲ.

ನಟನೆಯಲ್ಲಿ ಎಲ್ಲಾ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ‘ತಪ್ಪು ಮಾಡೋದು ಸಹಜ..’ ಹಾಡು ಚೆನ್ನಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.