ADVERTISEMENT

‘ಕಮರೊ2’ ಸಿನಿಮಾ ವಿಮರ್ಶೆ: ಭೂತದ ಚಿತ್ರದಲ್ಲಿ ಕಥೆಯೇ ಹಾರರ್‌!

ವಿನಾಯಕ ಕೆ.ಎಸ್.
Published 22 ಆಗಸ್ಟ್ 2025, 11:06 IST
Last Updated 22 ಆಗಸ್ಟ್ 2025, 11:06 IST
ಪ್ರಿಯಾಂಕ ಉಪೇಂದ್ರ
ಪ್ರಿಯಾಂಕ ಉಪೇಂದ್ರ   

‘ಪ್ಯಾರಾನಾರ್ಮಲ್‌’ ಅಂದರೆ ಅಸಾಮಾನ್ಯ, ಅಲೌಕಿಕ ಅನುಭವಗಳ ಸುತ್ತ ಸುತ್ತುವ ಕಥೆಯನ್ನು ಹೊಂದಿರುವ ಚಿತ್ರ ‘ಕಮರೊ2’. ‘ಕಮರೊಟ್ಟು’ ಎಂಬ ಪದ ಮೊದಲು ಕೇಳಿದ್ದು ‘ರಂಗಿತರಂಗ’ ಚಿತ್ರದಲ್ಲಿ. ನಂತರ ‘ಕಮರೊಟ್ಟು ಚೆಕ್‌ಪೋಸ್ಟ್‌’ ಎಂಬ ಚಿತ್ರವೂ ಬಂದಿತ್ತು. ದಕ್ಷಿಣ ಕನ್ನಡದ ಒಂದು ಕಾಲ್ಪನಿಕ ಊರಿನ ಕಥೆಯನ್ನು ಈ ಚಿತ್ರದ ನಿರ್ದೇಶಕ ಎ. ಪರಮೇಶ್‌ ಅವರೇ ನಿರ್ದೇಶಿಸಿದ್ದರು. ‘ಕಮರೊ2’ ಕೂಡ ಅದೇ ರೀತಿ ಭೂತ, ದೆವ್ವಗಳಿಗೆ ಸಂಬಂಧಿತ ಚಿತ್ರ. ‘ಕಮರೊಟ್ಟು’ ಗ್ರಾಮದ ಒಂದು ಮನೆಯಲ್ಲಿ ನಡೆಯುವ ಅಚ್ಚರಿಯ ಘಟನೆಗಳೇ ಚಿತ್ರದ ಕಥೆ. ಆದರೆ ಭಯವನ್ನು ಹುಟ್ಟಿಸುವ ರೀತಿಯಲ್ಲಿ ಸನ್ನಿವೇಶಗಳನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಎಡವಿದ್ದಾರೆ.

ಚಿತ್ರದ ಮೊದಲಾರ್ಧದಲ್ಲಿ ಹಾರರ್‌ ಸಿನಿಮಾ ನೋಡುತ್ತಿದ್ದೇವೋ ಅಥವಾ ‘ಮುಂಗಾರುಮಳೆ’ಯಂಥ ಪ್ರೇಮಕಥೆಯನ್ನೋ ಎಂಬ ಅನುಮಾನ ಅಲ್ಲಲ್ಲಿ ಮೂಡುತ್ತದೆ. ಆರ್ಯ ಮತ್ತು ಸಂಗೀತ ಈಗಷ್ಟೇ ಮದುವೆಯಾದ ಯುವಜೋಡಿ. ಆಯುರ್ವೇದದ ಪ್ರಾಜೆಕ್ಟ್‌ ಹೆಸರಿನಲ್ಲಿ ಆರ್ಯನ ತಂದೆಯ ಫಾರ್ಮ್‌ಹೌಸ್‌ ಇರುವ ‘ಕಮರೊಟ್ಟು’ ಗ್ರಾಮಕ್ಕೆ ಈ ಜೋಡಿ ಹೋಗುತ್ತಾರೆ. ಅವರಿಬ್ಬರ ಪ್ರೀತಿ, ಸಲ್ಲಾಪಗಳ ನಡುವೆ ಆಗೊಮ್ಮೆ ಈಗೊಮ್ಮೆ ಭಯ ಹುಟ್ಟಿಸುವ ಸನ್ನಿವೇಶಗಳನ್ನು ತುರುಕಿದಂತಿದೆ. ಹೀಗಾಗಿ ಸಾಕಷ್ಟು ಸನ್ನಿವೇಶಗಳು ಕಥೆಗೆ ಒಗ್ಗಿಕೊಳ್ಳದೆ ಕೃತಕ ಎನ್ನಿಸುತ್ತವೆ.

ಅಲೌಕಿಕ ಅನುಭವಗಳ ಕುರಿತೇ ಸಂಶೋಧನೆ ಮಾಡುತ್ತಿರುವ ಸಾರಾ ಕೂಡ ಕಳೆದುಹೋದ ತನ್ನ ತಂಗಿಯನ್ನು ಹುಡುಕಿಕೊಂಡು ಇದೇ ಮನೆ ಸೇರಿಕೊಳ್ಳುವ ಹೊತ್ತಿಗೆ ಚಿತ್ರದ ಮೊದಲಾರ್ಧ ಮುಗಿದಿರುತ್ತದೆ. ಆಕೆಯ ತಂಗಿಯ ಕಥೆಯೇನು? ಅದಕ್ಕೂ ಈ ಮನೆಗೂ ಏನು ಸಂಬಂಧ? ನಿಜವಾಗಿಯೂ ಆ ಮನೆಯಲ್ಲಿ ಭೂತವಿದೆಯಾ ಎಂಬಿತ್ಯಾದಿ ಸಂಗತಿಗಳೇ ಚಿತ್ರದ ದ್ವಿತೀಯಾರ್ಧ. ಮೊದಲಾರ್ಧದಕ್ಕಿಂತ ಈ ಭಾಗ ಕಥೆಯ ಮೇಲೆ ಹೆಚ್ಚು ಕೇಂದ್ರಿತವಾಗಿದೆ.

ADVERTISEMENT

ಮೊದಲಾರ್ಧದಲ್ಲಿ ಊರಿನ ಮಗುವೊಂದು ಆರ್ಯನ ಕಾರಿಗೆ ಅಡ್ಡಬರುತ್ತದೆ. ಮಗುವನ್ನು ಆರ್ಯ ಇರುವ ಭೂತಬಂಗಲೆಗೆ ಸೇರಿಸಲೇಬೇಕೆಂದು ನಿರ್ದೇಶಕರು ಹಟಕ್ಕೆ ಬಿದ್ದಂತಿದೆ. ಅಷ್ಟು ವೇಗದಲ್ಲಿ ಬರುತ್ತಿದ್ದ ಕಾರು ಹೇಗೆ ಮಗುವಿಗೆ ತಾಗದೇ ನಿಂತಿತು, ಮಗುವಿಗೆ ಚೂರು ಗಾಯವಾಗದೇ ಇರುವುದು ಹೇಗೆ ಎಂಬಿತ್ಯಾದಿ ಯಾವ ಪ್ರಶ್ನೆಗಳಿಗೂ ಉತ್ತರ ಸಿಗುವುದಿಲ್ಲ. ಈ ರೀತಿ ದೃಶ್ಯ ಕಟ್ಟುವಿಕೆ ಪೇಲವವಾಗಿರುವ ನಾಲ್ಕಾರು ದೃಶ್ಯಗಳು ಚಿತ್ರದುದ್ದಕ್ಕೂ ಸಿಗುತ್ತವೆ. ಅಲ್ಲಲ್ಲಿ ಹಾಸ್ಯ ಬೆರೆಸಿರುವುದು, ಅನವಶ್ಯವಾಗಿ ತುಳು ಭಾಷೆಯ ಬಳಕೆ, ಮಂಗಳೂರಿನ ಕನ್ನಡ ಯಾವುದೂ ಕಥೆಯ ಜತೆ ಸಹಜವಾಗಿ ಬೆರೆತ ಅನುಭವ ನೀಡುವುದಿಲ್ಲ.

ಆರ್ಯನಾಗಿ ಸ್ವಾಮಿನಾಥನ್‌ ಇಷ್ಟವಾಗುತ್ತಾರೆ. ಪ್ರಿಯಾಂಕ ಉಪೇಂದ್ರ ಇಲ್ಲಿ ಹಿಂದೆಂದಿಗಿಂತ ಭಿನ್ನ ಪಾತ್ರ ನಿಭಾಯಿಸಿದ್ದಾರೆ. ರಜಿನಿ ಭಾರದ್ವಾಜ್‌ ಕೆಲವು ಕಡೆ ನಟನೆಯಲ್ಲಿ ಇನ್ನಷ್ಟು ಪಳಗಬೇಕಿತ್ತು ಎಂಬ ಭಾವ ಮೂಡಿಸುತ್ತಾರೆ. ಸಣ್ಣ ಪಾತ್ರಗಳಲ್ಲಿ ಬರುವ ಕೆಲ ಕಲಾವಿದರು ಹವ್ಯಾಸಿ ಕಲಾವಿದರಂತೆ ಭಾಸರಾಗುತ್ತಾರೆ. ಪ್ರಜ್ವಲ್‌ ಗೌಡ ಅವರ ಛಾಯಾಚಿತ್ರಗ್ರಹಣ ಕೆಲವೆಡೆ ಗಮನ ಸೆಳೆಯುತ್ತದೆ. ಹಿನ್ನೆಲೆ ಸಂಗೀತ ಸಾಕಷ್ಟು ದೃಶ್ಯಗಳಿಗೆ ಜೀವ ತುಂಬಿದೆ. ಅನಗತ್ಯವಾದ ಪ್ರೀತಿ, ಸಲ್ಲಾಪ, ಹಾಸ್ಯವನ್ನು ಬದಿಗಿಟ್ಟು, ಸಹಜವಾಗಿ ಭಯ ಮೂಡಿಸುವ ಸನ್ನಿವೇಶಗಳನ್ನು ಸೃಷ್ಟಿಸುವತ್ತ ನಿರ್ದೇಶಕರು ಹೆಚ್ಚು ಗಮನಕೊಡಬಹುದಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.