ADVERTISEMENT

ಸಿನಿಮಾ ವಿಮರ್ಶೆ: ಮಾಯಾನಗರಿಗಳ ಟೊಳ್ಳು ಬಿಚ್ಚಿಟ್ಟ ‘ಡೊಳ್ಳು’

ಅಭಿಲಾಷ್ ಪಿ.ಎಸ್‌.
Published 26 ಆಗಸ್ಟ್ 2022, 7:15 IST
Last Updated 26 ಆಗಸ್ಟ್ 2022, 7:15 IST
ಡೊಳ್ಳು
ಡೊಳ್ಳು   

ಸಿನಿಮಾ: ಡೊಳ್ಳು (ಕನ್ನಡ)

ನಿರ್ದೇಶನ: ಸಾಗರ್‌ ಪುರಾಣಿಕ್‌

ನಿರ್ಮಾಪಕರು: ಅಪೇಕ್ಷ ಪುರೋಹಿತ್‌, ಪವನ್‌ ಒಡೆಯರ್‌

ADVERTISEMENT

ತಾರಾಗಣ: ಕಾರ್ತಿಕ್‌ ಮಹೇಶ್‌, ನಿಧಿ, ಬಾಬು ಹಿರಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್‌

‘ಕಾಲಕ್ಕೆ ತಕ್ಕ ಹಾಗೆ ನಾವು ಬದಲಾಗದೇ ಹೋದರೆ ಕಲೆ ಸತ್ತು ಹೋಗುತ್ತದೆ’ ಎಂಬ ನಾಯಕನ ಮಾತು ‘ಡೊಳ್ಳು’ ಸಿನಿಮಾದ ಅಂತರಾಳ. ನಗರೀಕರಣದಿಂದಾಗಿ ನಮಗರಿವಿರದಂತೆಯೇ ಅವನತಿಯತ್ತ ಹೆಜ್ಜೆ ಹಾಕುತ್ತಿರುವ ಜಾನಪದಕಲೆಗಳನ್ನುಉಳಿಸಲು ಡೊಳ್ಳು ಕುಣಿತ ಹಾಕುತ್ತಾ ನಿರ್ದೇಶಕ ಸಾಗರ್‌ ಪುರಾಣಿಕ್‌ ಹಲವು ವಾಸ್ತವವನ್ನು ಹರಡಿದ್ದಾರೆ.

ಊರಿನಲ್ಲಿರುವ ಶಿವನ ದೇವಸ್ಥಾನದ ವರ್ಷಂಪ್ರತಿ ಜಾತ್ರೆಯಲ್ಲಿ ಡೊಳ್ಳು ಕುಣಿತ ಸಂಪ್ರದಾಯ. ಈ ಸಂಪ್ರದಾಯವನ್ನು ತನ್ನ ಕಾಲದಲ್ಲಿ ಮುಂದುವರಿಸಿಕೊಂಡು ಬಂದ ಕಾಳಪ್ಪ(ಚಂದ್ರ ಮಯೂರ್‌), ತನ್ನ ಮಗ ಭದ್ರನಿಗೂ(ಕಾರ್ತಿಕ್‌ ಮಹೇಶ್‌) ಈ ಕಲೆಯನ್ನು ಕಲಿಸುತ್ತಾನೆ. ‘ಡೊಳ್ಳು ಕುಣಿತವನ್ನು ಯಾರು ಬೇಕಾದರೂ ಕಲಿಯಬಹುದು. ಆದರೆ ಮನಸ್ಸಿನಲ್ಲಿ ಇಳಿಸಿಕೊಳ್ಳಲು ಆಗುವುದಿಲ್ಲ. ಡೊಳ್ಳು ಕುಣಿತವನ್ನು ದುಡ್ಡಿಗೆ ಮಾರಿಕೊಳ್ಳಬಾರದು’ ಎನ್ನುವುದು ಕಾಳಪ್ಪ ಭದ್ರನ ಮನಸ್ಸಿನಲ್ಲಿ ಭದ್ರವಾಗಿಸಿಟ್ಟ ಮಾತು. ಭದ್ರ ಯುವಕನಾದಾಗ ಊರಿನಲ್ಲೊಂದು ತನ್ನ ಸ್ನೇಹಿತರನ್ನೇ ಒಳಗೊಂಡ ಡೊಳ್ಳು ಕುಣಿತದ ತಂಡ ಕಟ್ಟುತ್ತಾನೆ. ಹೊಟ್ಟೆಪಾಡಿಗಾಗಿ ಜಾತ್ರೆಯ ಜೊತೆಗೆ ಡೊಳ್ಳು ಕುಣಿತವನ್ನು ದುಡ್ಡಿಗೆ ಮಾರಿಕೊಳ್ಳುತ್ತಾನೆ. ತಂಡದ ಸದಸ್ಯರು ನಗರದತ್ತ ಆಕರ್ಷಿತರಾದಾಗ ತಂಡ ಒಡೆದು ಹೋಗದೇ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸಿ, ಭದ್ರ ಸೋಲುತ್ತಾನೆ. ಮುಂದೆ ಊರಿನ ಜಾತ್ರೆಯ ಸಂಪ್ರದಾಯ ಉಳಿಯುತ್ತಾ ಅಥವಾ ಅಳಿಯುತ್ತಾ ಎನ್ನುವುದು ಕಥಾಹಂದರ.

ಇದು ಖಂಡಿತವಾಗಿಯೂ ಕಮರ್ಷಿಯಲ್‌ ಸಿನಿಮಾವಲ್ಲ. ರಾಷ್ಟ್ರ ಪ್ರಶಸ್ತಿ ಪಡೆದ ಈ ಚಿತ್ರ 106 ನಿಮಿಷದ್ದಾಗಿದೆ. ಈ ಅವಧಿಯಲ್ಲಿ ತನಗೇನು ಹೇಳಬೇಕಿತ್ತೋ ಅದನ್ನು ಅಚ್ಚುಕಟ್ಟಾಗಿ ಸಾಗರ್‌ ಪುರಾಣಿಕ್‌ ಕಟ್ಟಿಕೊಟ್ಟಿದ್ದಾರೆ. ಕಲೆ ಎನ್ನುವುದು ಜಾತಿ, ಧರ್ಮ, ಲಿಂಗವನ್ನು ಮೀರಿ ನಿಂತದ್ದು ಎನ್ನುವುದು ಸಿನಿಮಾದ ಹೂರಣ.ಶ್ರೀನಿಧಿ ಅವರ ಸಂಭಾಷಣೆಯಲ್ಲೇ ಕಥೆ ಕಟ್ಟಿಕೊಡುವ ನಿರ್ದೇಶಕರ ಪ್ರಯತ್ನ ಕೈಹಿಡಿದಿದೆ. ಹಳ್ಳಿಯಲ್ಲೇ ಜನ್ಮತಾಳುವ ಬೆಳಕನ್ನು ಪೇಟೆಗೆ ಒಯ್ದುರೆ, ಆ ಬೆಳಕನ್ನು ಹುಡುಕುತ್ತಾ ಹಳ್ಳಿಯ ಯುವಜನತೆ ಪೇಟೆಗೆ ಹೆಜ್ಜೆಹಾಕುವ ಕಾಲವನ್ನು ಈ ಕಥೆ ಕಟ್ಟಿಕೊಟ್ಟಿದೆ. ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲೂ ಬಿಡುಗಡೆ ಮಾಡುವ ನಿರ್ಮಾಪಕರ ನಿರ್ಣಯ, ಧೈರ್ಯ ಶ್ಲಾಘನೀಯ.

ನಟ ಕಾರ್ತಿಕ್‌ ಮಹೇಶ್‌ ಇಲ್ಲಿ ಪಾತ್ರವನ್ನು ಜೀವಿಸಿದ್ದಾರೆ. ಡೊಳ್ಳು ಕುಣಿತ ಕಲಿಕೆಯ ತರಬೇತಿಯ ಫಲ ತೆರೆಯ ಮೇಲೆ ಸ್ಪಷ್ಟವಾಗಿ ಕಾಣುತ್ತದೆ. ತನ್ನೊಳಗಿರುವ ಸಂಕಟ, ನೋವನ್ನು ಭದ್ರನು ನಿರಂತರವಾಗಿ ಡೊಳ್ಳು ಬಾರಿಸುತ್ತಾ, ಕುಣಿಯುತ್ತಾ ಹೊರಹಾಕುವ ದೃಶ್ಯ ಮನಸ್ಸಿನಲ್ಲಿ ಉಳಿಯುತ್ತದೆ. ಭರವಸೆಯ ನಟನಾಗಿ ಕಾರ್ತಿಕ್‌ ಮುಂದೆ ನಿಲ್ಲುತ್ತಾರೆ. ಚಿತ್ರದ ಅಂತ್ಯದಲ್ಲಿ ನಾಯಕನ ತಂಗಿ ಲಚ್ಚಿ(ಶರಣ್ಯ ಸುರೇಶ್‌) ತೆರೆ ತುಂಬಿಕೊಳ್ಳುತ್ತಾಳೆ. ಪುರೋಹಿತರ ಪಾತ್ರ ನಿಭಾಯಿಸಿದ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್‌, ನಾಯಕಿ ನಿಧಿ, ನಾಯಕನ ಸ್ನೇಹಿತರಾಗಿ ನಟಿಸಿದವರೆಲ್ಲರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಅಭಿಲಾಷ್‌ ಕಳತ್ತಿ ಛಾಯಾಗ್ರಹಣ ಇಲ್ಲಿ ಉಲ್ಲೇಖಾರ್ಹ. ಹಳ್ಳಿಯ ಸೌಂದರ್ಯ, ನಗರದ ಒತ್ತಡವನ್ನು ಪ್ರೇಕ್ಷಕನ ಕಣ್ಣೊಳಗೆ ಅಭಿಲಾಷ್‌ ಇಳಿಸಿದ್ದಾರೆ. ವರ್ಷದಲ್ಲಿ ನಾಲ್ಕೈದು ದಿನ ಊರಿನ ಜಾತ್ರೆಯಲ್ಲಿ ಪಾಲ್ಗೊಳ್ಳಿ, ಬೆರೆತು ಬನ್ನಿ ಎನ್ನುವ ಮಾತು ಬೆಂಗಳೂರಿನಂಥ ಮಾಯಾನಗರಿಯಲ್ಲಿ ಕುಳಿತು ಸಿನಿಮಾ ವೀಕ್ಷಿಸಿದ ಪ್ರೇಕ್ಷಕನ ಮನಸ್ಸನ್ನೊಮ್ಮೆ ತಟ್ಟೀತು, ಪ್ರಶ್ನಿಸೀತು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.